ನ್ಯೂಸ್

ಬೇಕರಿ ಮಾಲೀಕನ ಬಂಧನ..ಕಾರಣ ಅಂಗಡಿಯೆದುರು ಹಾಕಿದ್ದ ಒಂದು ಜಾಹೀರಾತು...!

ಚೆನ್ನೈ: ಇಲ್ಲೋರ್ವ ಬೇಕರಿ ಮಾಲೀಕ ಬಂಧಿತನಾಗಿದ್ದಾನೆ. ಕಾರಣ ಆತ ಅಂಗಡಿಯ ಮೇಲೆ ಹಾಕಿದ್ದ ಒಂದು ಪೋಸ್ಟರ್​...!

ಇತ್ತೀಚೆಗೆ ಉತ್ತರ ಪ್ರದೇಶದ ಬಿಜೆಪಿ ಶಾಸಕ ಸುರೇಶ್ ತಿವಾರಿ ಅವರು ತಮ್ಮ ಕ್ಷೇತ್ರದ ಜನರಿಗೆ ಒಂದು ಮಾತು ಹೇಳಿದ್ದರು. ಮುಸ್ಲಿಂ ವ್ಯಾಪಾರಿಗಳ ಬಳಿ, ಹಣ್ಣು, ತರಕಾರಿ ಖರೀದಿ ಮಾಡಬೇಡಿ..ನಾನು ನಿಮಗೆ ಎಚ್ಚರಿಕೆ ನೀಡುತ್ತಿದ್ದೇನೆ ಎಂದು ಬಹಿರಂಗವಾಗಿ ಹೇಳಿದ್ದರು.

ಅದಕ್ಕೆ ಕಾರಣ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆದ ಒಂದಷ್ಟು ಫೋಟೋ, ವಿಡಿಯೋಗಳು. ಕೆಲವು ಮುಸ್ಲಿಂ ವ್ಯಾಪಾರಿಗಳು ಹಣ್ಣುಗಳಿಗೆ ಎಂಜಲು ಸವರುವ, ಉಗುಳುವ ವಿಡಿಯೋಗಳು ಸೋಷಿಯಲ್ ಮೀಡಿಯಾಗಳಲ್ಲಿ ಸಿಕ್ಕಾಪಟೆ ಹರಿದಾಡಿದ್ದವು. ಅದನ್ನೇ ಕಾರಣವಾಗಿಟ್ಟುಕೊಂಡು ಶಾಸಕರು ಹೀಗೆ ಹೇಳಿ ವಿವಾದ ಸೃಷ್ಟಿಸಿದ್ದರು.

ಇದೀಗ ಚೆನ್ನೈನ ಟಿ.ನಗರದಲ್ಲಿರುವ ಬೇಕರಿಯ ಮಾಲೀಕನೋರ್ವ ಇಂಥದ್ದೇ ಎಡವಟ್ಟು ಮಾಡಿಕೊಂಡು ಅರೆಸ್ಟ್​ ಆಗಿದ್ದಾರೆ.

'ನಮ್ಮ ಅಂಗಡಿಯಲ್ಲಿ ಎಲ್ಲ ತಿನಿಸುಗಳನ್ನೂ ಜೈನ ಸಮುದಾಯದವರೇ ತಯಾರಿಸುತ್ತಾರೆ. ಮುಸ್ಲಿಂ ಸಮುದಾಯಕ್ಕೆ ಸೇರಿ ಉದ್ಯೋಗಿಗಳು ನಮ್ಮಲ್ಲಿ ಕೆಲಸಕ್ಕೆ ಇಲ್ಲ...' ಎಂದು ಬರೆದು ಅಂಗಡಿಯ ಎದುರು ಬೋರ್ಡ್​ ಹಾಕಿದ್ದರು.

ಈ ಜಾಹೀರಾತಿನ ಪೋಸ್ಟರ್​ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿ, ನೆಟ್ಟಿಗರೂ ಫುಲ್ ಗರಂ ಆಗಿದ್ದರು.

ಇದು ಕೋಮು ಸಂಘರ್ಷಕ್ಕೆ ಕಾರಣವಾಗುವಂತಹ ಬರಹ ಎಂದು ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಬೇಕರಿ ಮಾಲೀಕನನ್ನು ಬಂಧಿಸಿಕೊಂಡು ಹೋಗಿದ್ದಾರೆ. (ಏಜೆನ್ಸೀಸ್​)