Mobile Psychology: ಕೈಗೆ ವಾಚ್ ಹಾಕಿಕೊಂಡಿದ್ರೂ ಟೈಮ್ ನೋಡಬೇಕಾದಾಗ ಮೊಬೈಲ್ ತೆಗೆಯುತ್ತೀರಾ? ನಿಮಗೂ ಈ ಅಭ್ಯಾಸ ಇದ್ರೆ ಅಚ್ಚರಿಪಡಬೇಕಿಲ್ಲ. ಇವತ್ತಿನ ದಿನಗಳಲ್ಲಿ ಹಲವರು ಕೈಯಲ್ಲಿ ಗಡಿಯಾರ ಇದ್ರೂ ಸಮಯ ನೋಡೋಕೆ ಮೊಬೈಲ್ ಬಳಸುತ್ತಾರೆ. ಇದಕ್ಕೆ ಮರೆವು ಮಾತ್ರ ಕಾರಣವಲ್ಲ, ಪದೇಪದೇ ಮೊಬೈಲ್ ನೋಡುವ ಅಭ್ಯಾಸವೂ ಮುಖ್ಯ ಕಾರಣಗಳಾಗಿದೆ.
ಬೆಳಗ್ಗೆ ಎದ್ದಾಗಿನಿಂದ ರಾತ್ರಿ ಮಲಗುವವರೆಗೂ ಮೊಬೈಲ್ ನಮ್ಮ ಕೈಯಲ್ಲೇ ಇರುತ್ತೆ. ಮೆಸೇಜ್ ನೋಡಲು, ಸೋಷಿಯಲ್ ಮೀಡಿಯಾ ಸ್ಕ್ರಾಲ್ ಮಾಡಲು, ಸುದ್ದಿ ಓದೋಕೆ ಹೀಗೆ ಬೇರೆ ಬೇರೆ ಕಾರಣಕ್ಕೆ ಪದೇಪದೇ ಫೋನ್ ತೆಗೆಯುತ್ತೇವೆ. ಹೀಗಿರುವಾಗ ಟೈಮ್ ನೋಡಬೇಕು ಅಂದ್ರೂ ಕೈ ಸಹಜವಾಗಿಯೇ ಮೊಬೈಲ್ ಕಡೆಗೆ ಹೋಗುತ್ತೆ.
ಮೊಬೈಲ್‌ನಲ್ಲಿ ಸಮಯ ನೋಡಿದಾಗ ಮೆಸೇಜ್ ಬಂದಿದೆಯಾ, ವಾಟ್ಸ್‌ಆ್ಯಪ್‌ನಲ್ಲಿ ಹೊಸ ನೋಟಿಫಿಕೇಶನ್ ಇದೆಯಾ ಅಥವಾ ಇಮೇಲ್ ಬಂದಿದೆಯಾ ಎಂಬುದನ್ನೂ ಪರಿಶೀಲಿಸುತ್ತೇವೆ. ಸಮಯ ನೋಡುವ ನೆಪದಲ್ಲಿ ಇತರ ಅಪ್‌ಡೇಟ್‌ಗಳನ್ನೂ ತಿಳಿದುಕೊಳ್ಳಬಹುದು ಎಂಬ ಕಾರಣಕ್ಕೆ ಹಲವರು ಮೊಬೈಲ್ ಆಯ್ಕೆ ಮಾಡುತ್ತಾರೆ.
ಮುಳ್ಳುಗಳಿರುವ ಸಾಮಾನ್ಯ ವಾಚ್‌ನಲ್ಲಿ ಸಮಯವನ್ನು ಅರ್ಥಮಾಡಿಕೊಳ್ಳುವುದಕ್ಕಿಂತ ಮೊಬೈಲ್ ಪರದೆಯಲ್ಲಿ ನೇರವಾಗಿ ಕಾಣುವ '10:25' ಎಂಬ ಅಂಕೆಗಳನ್ನು ಓದುವುದು ಕೆಲವರಿಗೆ ಸುಲಭ. ಸಮಯವನ್ನು ತಕ್ಷಣ ತಿಳಿದುಕೊಳ್ಳಲು ಡಿಜಿಟಲ್ ಡಿಸ್‌ಪ್ಲೇ ಅನುಕೂಲಕರವಾಗಿರುವುದೂ ಒಂದು ಕಾರಣ.
ಕೆಲವರು ವಾಚ್ ಅನ್ನು ಸಮಯ ತಿಳಿಯುವುದಕ್ಕಿಂತ ಫ್ಯಾಷನ್ ಮತ್ತು ಸ್ಟೈಲ್‌ಗಾಗಿ ಧರಿಸುತ್ತಾರೆ. ಕೈಗೆ ಅಂದ ನೀಡುವ ಆಕ್ಸೆಸರಿಯಾಗಿ ವಾಚ್ ಬಳಸುವವರು, ಸಮಯ ನೋಡಲು ಮಾತ್ರ ಮೊಬೈಲ್ ಅವಲಂಬಿಸಿರಬಹುದು.
ಸ್ಮಾರ್ಟ್‌ವಾಚ್ ಬಳಸುವವರಿಗೂ ಕೆಲವೊಮ್ಮೆ ಮೊಬೈಲ್ ಅಗತ್ಯವಾಗುತ್ತದೆ. ವಾಚ್‌ನ ಪರದೆ ಆಫ್ ಆಗಿರುವುದು, ಕೈ ತಿರುಗಿಸಿದಾಗ ಪರದೆ ಸರಿಯಾಗಿ ಆನ್ ಆಗದಿರುವುದು ಅಥವಾ ಸಮಯವನ್ನು ಸ್ಪಷ್ಟವಾಗಿ ನೋಡಲು ಆಗದಿರುವುದು ಇದಕ್ಕೆ ಕಾರಣವಾಗಬಹುದು.
ಒಟ್ಟಿನಲ್ಲಿ, ವಾಚ್ ಸಮಯವನ್ನು ತೋರಿಸಿದರೆ ಮೊಬೈಲ್ ಸಮಯದ ಜೊತೆಗೆ ಮೆಸೇಜ್‌ಗಳು, ಸುದ್ದಿ ಮತ್ತು ಇತರ ಅಪ್‌ಡೇಟ್‌ಗಳನ್ನೂ ನೀಡುತ್ತದೆ. ಪದೇಪದೇ ಮೊಬೈಲ್ ಬಳಸುವ ಅಭ್ಯಾಸವೂ ಇದಕ್ಕೆ ಸೇರಿಕೊಂಡಿದೆ. ಹೀಗಾಗಿ ಕೈಯಲ್ಲಿ ವಾಚ್ ಇದ್ದರೂ ಸಮಯ ನೋಡಲು ಮೊಬೈಲ್ ತೆಗೆಯುವುದು ಹಲವರಿಗೆ ಸಹಜ ಅಭ್ಯಾಸವಾಗಿಬಿಟ್ಟಿದೆ.