ನ್ಯೂಸ್

ಚಿನ್ನ ಮಾತ್ರವಲ್ಲ ಈಗ ಬೆಳ್ಳಿ ಕೊಳ್ಳುವುದೂ ಕಷ್ಟವೇ! ಕಳೆದ 10 ದಿನಗಳಲ್ಲಿ ಎಷ್ಟು ಏರಿಕೆ? ಹೀಗಿದೆ ದರ ಪಟ್ಟಿ | Gold Price

ನವದೆಹಲಿ: ಕಳೆದ ಆರೇಳು ತಿಂಗಳಲ್ಲಿ ಚಿನ್ನ ಮತ್ತು ಬೆಳ್ಳಿ ಬೆಲೆಯಲ್ಲಿ (Gold Price) ದೊಡ್ಡ ಬದಲಾವಣೆಗಳು ಕಂಡುಬಂದಿವೆ. ಒಂದಷ್ಟು ವರ್ಷಗಳ ಹಿಂದೆಯಿದ್ದ ಚಿನ್ನದ ಬೆಲೆಗೆ ಮಧ್ಯಮ ವರ್ಗದ ಜನರು ತತ್ತರಿಸಿದ್ದರು. ಹೇಗಪ್ಪಾ ಖರೀದಿ ಮಾಡುವುದು? ಯಾವಾಗ ಚಿನ್ನ ಕಡಿಮೆಯಾಗುತ್ತೆ? ಎಂದು ದಿನಗಳನ್ನು ಮುಂದೂಡುತ್ತಿದ್ದರು. ಆದರೀಗ, ಅದಕ್ಕಿಂತ ದುಬಾರಿ ಆಗಿರುವ ಗೋಲ್ಡ್​-ಸಿಲ್ವರ್ ಬೆಲೆಗಳು, ಸಾರ್ವಕಾಲಿಕ ದಾಖಲೆಯ ಗರಿಷ್ಠ ಮಟ್ಟವನ್ನೂ ಮೀರಿ ಹೋಗಿರುವುದು ಸದ್ಯ ಗ್ರಾಹಕರನ್ನು ಅಕ್ಷರಶಃ ಕಂಗಾಲಾಗಿಸಿದೆ.

ಕಳೆದ ಕೆಲವು ತಿಂಗಳುಗಳಿಂದ ದಾಖಲೆಯ ಮಟ್ಟಕ್ಕೆ ಏರಿಕೆ ಕಾಣುತ್ತಿರುವ ಗೋಲ್ಡ್ ಬೆಲೆಗಳು, ದೊಡ್ಡ ಬದಲಾವಣೆಗಳಿಗೆ ಸಾಕ್ಷಿಯಾಗಿದೆ. ಅಂತೆಯೇ, ಬೆಳ್ಳಿಯ ಹೆಸರು ಕೇಳಿದಾಗಲೂ ಅದೇ ಪರಿಸ್ಥಿತಿ ಎದುರಾಗುತ್ತಿದೆ. ಒಂದೆಡೆ ಚಿನ್ನ ದಾಖಲೆಯ ಗರಿಷ್ಠ ಮಟ್ಟವನ್ನು ತಲುಪುತ್ತಿದ್ದರೆ, ಬೆಳ್ಳಿಯ ಬೆಲೆ ಕೂಡ ಹೊಸ ದಾಖಲೆಗಳನ್ನು ನಿರ್ಮಿಸುತ್ತಿದೆ. ಇದೀಗ ಸಿಲ್ವರ್​ ದರವು ಇತಿಹಾಸದಲ್ಲಿ ಅಭೂತಪೂರ್ವ ಮಟ್ಟಕ್ಕೆ ಏರಿಕೆ ಕಾಣುತ್ತಿರುವುದು ಗಮನಾರ್ಹ.

35,000 ರೂ. ಏರಿಕೆ!

ಇಂದು (ಅ.13) ಒಂದೇ ದಿನದಲ್ಲಿ ಬೆಳ್ಳಿಯ ಬೆಲೆ ಕೆಜಿಗೆ 5,000 ರೂ. ಹೆಚ್ಚಾಗಿದೆ. ಕಳೆದ 10 ದಿನಗಳಲ್ಲಿ ಪ್ರತಿ ಕೆಜಿಗೆ ಸುಮಾರು 35,000 ರೂ. ಏರಿಕೆ ಕಂಡಿದೆ. ಇನ್ನು ಚಿನ್ನದ ವಿಷಯಕ್ಕೆ ಬಂದರೆ, 24 ಕ್ಯಾರೆಟ್ ಚಿನ್ನದ 10 ಗ್ರಾಂ ಬೆಲೆ 320 ರೂ. ಹೆಚ್ಚಾದರೆ, 22 ಕ್ಯಾರೆಟ್ ಬೆಲೆ 300 ರೂ. ಏರಿಕೆಯಾಗಿದೆ. ಇಂದು ಒಂದು ಔನ್ಸ್ ಚಿನ್ನದ ಬೆಲೆ 40 ಡಾಲರ್​ನಷ್ಟು ಹೆಚ್ಚಾಗಿದೆ. ಇದರೊಂದಿಗೆ, ಒಂದು ಔನ್ಸ್ ಚಿನ್ನದ ಬೆಲೆ ಪ್ರಸ್ತುತ 4,057 ಡಾಲರ್​ನಲ್ಲಿ ವಹಿವಾಟು ನಡೆಸುತ್ತಿದೆ.

ದೇಶದ ಪ್ರಮುಖ ನಗರಗಳಲ್ಲಿ ಇಂದಿನ ಚಿನ್ನದ ಬೆಲೆ

  • ಇಂದು ದೆಹಲಿಯಲ್ಲಿ, 10 ಗ್ರಾಂ 24 ಕ್ಯಾರೆಟ್ ಚಿನ್ನದ ಬೆಲೆ 1,25,550 ರೂ.ಗೆ ತಲುಪಿದೆ. ಅದೇ ರೀತಿ, 10 ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ 1,15,100 ರೂ. ಆಗಿದೆ.
  • ಮುಂಬೈ, ಬೆಂಗಳೂರಿನಲ್ಲಿ 10 ಗ್ರಾಂ 24 ಕ್ಯಾರೆಟ್ ಚಿನ್ನದ ಬೆಲೆ 1,25,550 ರೂ.ಗೆ ತಲುಪಿದೆ. ಅದೇ ರೀತಿ, 10 ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ 1,14,950 ರೂ.ಗೆ ಬಂದು ನಿಂತಿದೆ.
  • ಇನ್ನು ಹೈದರಾಬಾದ್​ ಸೇರಿದಂತೆ ತೆಲುಗು ರಾಜ್ಯಗಳಲ್ಲಿ 24 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆ 1,22,020 ರೂ.ಗೆ ತಲುಪಿದೆ. ಅದೇ ರೀತಿ, 22 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆ 1,14,950 ಆಗಿದೆ.

ಬೆಳ್ಳಿ 5,000 ರೂ. ಏರಿಕೆ

  • ದೆಹಲಿಯಲ್ಲಿ ಒಂದು ಕೆಜಿ ಬೆಳ್ಳಿಯ ಬೆಲೆ 1,85,000 ರೂ. ಆಗಿದೆ.
  • ಮುಂಬೈ, ಬೆಂಗಳೂರಿನಲ್ಲಿ ಒಂದು ಕೆಜಿ ಬೆಳ್ಳಿಯ 1,85,000 ರೂ. ಇದೆ.
  • ಇನ್ನು ಹೈದರಾಬಾದ್‌, ತೆಲಂಗಾಣದಲ್ಲಿ 1,95,000 ರೂ. ಆಗಿದೆ.

ಗಮನಿಸಿ: ಮೇಲೆ ತಿಳಿಸಲಾದ ಬೆಲೆಗಳು ಬೆಳಗಿನ ಮಾರುಕಟ್ಟೆಯ ಆರಂಭದಲ್ಲಿ ಮಾತ್ರ. ಈ ಚಿನ್ನ ಮತ್ತು ಬೆಳ್ಳಿ ದರಗಳು ಬದಲಾವಣೆಗೆ ಒಳಪಟ್ಟಿರುತ್ತವೆ.