ಇನ್ನೂ ಕನ್ನಡಕ್ಕೆ ಡಬ್ ಮಾಡಿದ ಸಿನಿಮಾಗಳಿಗೆ ಹೆಚ್ಚು ಸ್ಕ್ರೀನ್‌ಗಳು ಸಿಗಲ್ಲ ಅಥವಾ ಬೇಕೆಂತಲೇ ಕನ್ನಡ ಶೋಗಳನ್ನು ಚಿತ್ರಮಂದಿರಗಳಲ್ಲಿ ಪ್ರದರ್ಶನ ಮಾಡಲ್ಲ ಎನ್ನುವ ಆರೋಪ ಇದೆ. ಈ ವರ್ಷದ ಕನ್ನಡದಲ್ಲಿ ದೊಡ್ಡ ಸಿನಿಮಾಗಳ ಸಂಖ್ಯೆ ಅತ್ಯಂತ ಕಡಿಮೆ ಇದೆ. ಸ್ಟಾರ್ ನಟರೆಲ್ಲಾ ಪ್ಯಾನ್ ಇಂಡಿಯಾ ಸಿನಿಮಾಗಳನ್ನು ಮಾಡಲು ಮುಂದಾಗಿದ್ದು, ಯಶ್, ಸುದೀಪ್, ರಕ್ಷಿತ್ ಶೆಟ್ಟಿ, ಶ್ರೀಮುರಳಿ ನಟನೆಯ ಯಾವುದೇ ಸಿನಿಮಾ ಈ ವರ್ಷ ತೆರೆಗೆ ಬರಲು ಸಿದ್ಧವಾಗಿಲ್ಲ.
Dubbed Movie| ಈ ಹಿಂದೆ ಬೇರೆ ಭಾಷೆಯ ಸಿನಿಮಾಗಳನ್ನು ಆಯಾ ಭಾಷೆಯಲ್ಲೇ ನೋಡಬೇಕಾದ ಅನಿವಾರ್ಯತೆ ಇತ್ತು. ಆದರೆ ಕರ್ನಾಟಕದಲ್ಲಿ ಈಗ ಡಬ್ಬಿಂಗ್ ಸಿನಿಮಾಗಳಿಗೆ ಅವಕಾಶ ನೀಡಲಾಗಿದೆ. ಏಳೆಂಟು ವರ್ಷಗಳಿಂದ ಹಿಂದಿ, ಮಲಯಾಳಂ, ತೆಲುಗು, ತಮಿಳು ಸಿನಿಮಾಗಳು ಡಬ್ ಆಗಿ ರಾಜ್ಯದಲ್ಲಿ ಬಿಡುಗಡೆ ಕಾಣುತ್ತಿವೆ.
ಪರಭಾಷೆಯ ಸ್ಟಾರ್ ನಟರ ಸಿನಿಮಾಗಳನ್ನು ಕನ್ನಡಕ್ಕೆ ಡಬ್ ಮಾಡಿ ಬಿಡುಗಡೆ ಮಾಡಲಾಗುತ್ತಿದೆ. ಈಗಾಗಲೇ 'ಜೈಲರ್', ಪುಷ್ಪ'-2 ಅಂತಹ ಕೆಲವು ಚಿತ್ರಗಳನ್ನು ಕನ್ನಡ ಸಿನಿರಸಿಕರು ಮಾತೃಭಾಷೆಯಲ್ಲೇ ನೋಡಿ ಎಂಜಾಯ್ ಮಾಡಿದ್ದಾರೆ. ಡಬ್ಬಿಂಗ್ ಗುಣಮಟ್ಟ ಉತ್ತಮವಾಗಿರುವುದರಿಂದ ಪ್ರೇಕ್ಷಕರು ಸಿನಿಮಾವನ್ನು ಮೆಚ್ಚಿಕೊಂಡಿದ್ದರು.
ಯಂಗ್ ರೆಬಲ್ ಸ್ಟಾರ್ ನಟನೆಯ ಬಹುನಿರೀಕ್ಷಿತ ಸಿನಿಮಾ 'ದಿ ರಾಜಾ ಸಾಬ್' ಚಿತ್ರಕ್ಕೆ ಮಾರುತಿ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಮಾಳವಿಕಾ ಮೋಹನನ್, ನಿಧಿ ಅಗರ್‌ವಾಲ್ ಚಿತ್ರದಲ್ಲಿ ನಾಯಕಿಯರಾಗಿ ನಟಿಸುತ್ತಿದ್ದಾರೆ. ಸಂಜಯ್ದತ್ ಮುಖ್ಯವಾದ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಪೀಪಲ್ ಮೀಡಿಯಾ ಫ್ಯಾಕ್ಟರಿ ಸಂಸ್ಥೆ ಚಿತ್ರ ನಿರ್ಮಾಣ ಮಾಡುತ್ತಿದೆ. ಇದೊಂದು ಹಾರರ್ ಕಾಮಿಡಿ ಥ್ರಿಲ್ಲರ್ ಸಿನಿಮಾ ಎನ್ನಲಾಗ್ತಿದೆ. 200-300 ಕೋಟಿ ರೂ. ಬಜೆಟ್‌ನಲ್ಲಿ ಸಿನಿಮಾ ನಿರ್ಮಾಣವಾಗುತ್ತಿದೆ. ಈಗಾಗಲೇ ಬಹುತೇಕ ಚಿತ್ರೀಕರಣ ಮುಗಿದಿದೆ.
ಮಂಚು ವಿಷ್ಣು ಕಣ್ಣಪ್ಪ ಆಗಿ ಪ್ರೇಕ್ಷಕರ ಮುಂದೆ ಬರಲು ಸಜ್ಜಾಗುತ್ತಿದ್ದಾರೆ. ಜೂನ್ 27ಕ್ಕೆ ಈ ಸಿನಿಮಾ ತೆರೆಗೆ ಬರಲಿದೆ. ತೆಲುಗು ಸೇರಿ 5 ಭಾಷೆಗಳಿಗೆ 'ಕಣ್ಣಪ್ಪ' ಸಿನಿಮಾ ಡಬ್ ಆಗಿದೆ. ಅಂದಾಜು 150 ಕೋಟಿ ರೂ. ಬಜೆಟ್‌ನಲ್ಲಿ ಸಿನಿಮಾ ನಿರ್ಮಾಣವಾಗಿದೆ. ಪ್ರಭಾಸ್, ಮೋಹನ್ ಲಾಲ್, ಅಕ್ಷಯ್ ಕುಮಾರ್, ಕಾಜಲ್ ಅಗರ್‌ವಾಲ್ ಸಿನಿಮಾದ ಅತಿಥಿ ಪಾತ್ರಗಳಲ್ಲಿ ನಟಿಸಿದ್ದಾರೆ.
ತಮಿಳಿನ 'ಮದರಾಸಿ' ಸಿನಿಮಾ ಕೂಡ ಕನ್ನಡಕ್ಕೆ ಡಬ್ ಆಗಿ ತೆರೆಗೆ ಬರಲಿದೆ. ಎ. ಆರ್ ಮುರುಗದಾಸ್ ನಿರ್ದೇಶನದ ಸಿನಿಮಾ ಸೆಪ್ಟೆಂಬರ್ 5ಕ್ಕೆ ಬಿಡುಗಡೆ ಆಗಲಿದೆ. ಈ ಚಿತ್ರಕ್ಕೆ ಅನಿರುದ್ಧ್ ಸಂಗೀತವಿದೆ.
ಸೂಪರ್ ಸ್ಟಾರ್ ರಜನಿಕಾಂತ್ ನಟನೆಯ 'ಕೂಲಿ' ಸಿನಿಮಾ ಹೈಪ್ ಕ್ರಿಯೇಟ್ ಮಾಡಿದೆ. ಲೋಕೇಶ್ ಕನಕರಾಜ್ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ಉಪೇಂದ್ರ, ಅಮೀರ್ ಖಾನ್, ನಾಗಾರ್ಜುನ ಸೇರಿದಂತೆ ಘಟಾನುಘಟಿ ಕಲಾವಿದರು ಚಿತ್ರದಲ್ಲಿ ನಟಿಸಿದ್ದಾರೆ. ಸನ್ ಪಿಕ್ಚರ್ಸ್ ನಿರ್ಮಾಣದ ಚಿತ್ರಕ್ಕೆ ಅನಿರುದ್ದ್ ರವಿಚಂದರ್ ಮ್ಯೂಸಿಕ್ ಕಂಪೋಸ್ ಮಾಡುತ್ತಿದ್ದಾರೆ. ಆಗಸ್ಟ್ 15ಕ್ಕೆ ಸಿನಿಮಾ ರಿಲೀಸ್ ಮಾಡುವುದಾಗಿ ಘೋಷಣೆ ಮಾಡಿದ್ದಾರೆ.
ಪವನ್ ಕಲ್ಯಾಣ್ ನಟನೆಯ ಐತಿಹಾಸಿಕ ಸಿನಿಮಾ 'ಹರಿಹರ ವೀರಮಲ್ಲು' ರಿಲೀಸ್ ಡೇಟ್ ಮತ್ತೆ ಮುಂದಕ್ಕೆ ಹೋಗಿದೆ. ಕ್ರಿಶ್ ನಿರ್ದೇಶನದ ಈ ಚಿತ್ರಕ್ಕೆ ಕೀರವಾಣಿ ಸಂಗೀತ ಸಂಯೋಜನೆ ಮಾಡಿದ್ದಾರೆ. ಮೇ 9ಕ್ಕೆ ಸಿನಿಮಾ ತೆರೆಗೆ ಬರುತ್ತದೆ ಎಂದು ಚಿತ್ರತಂಡ ಹೇಳಿತ್ತು. ಆದರೆ ಮತ್ತೆ ರಿಲೀಸ್ ಡೇಟ್ ಬದಲಾಗುವ ಸುಳಿವು ನೀಡಿದೆ. ಈ ಚಿತ್ರ ಕನ್ನಡಕ್ಕೆ ಡಬ್ ಆಗಿ ಬರುತ್ತಿದ್ದು, ಈಗಾಗಲೇ ಕನ್ನಡ ಟೀಸರ್ ಕೂಡ ಬಿಡುಗಡೆಯಾಗಿದೆ.
ಶಂಕರ್ ನಿರ್ದೇಶನದಲ್ಲಿ ಕಮಲ್ ಹಾಸನ್ ನಟನೆಯ 'ಇಂಡಿಯನ್'-3 ಸಿನಿಮಾ ತೆರೆಗೆ ಬರೋದು ಅನುಮಾನ ಎನ್ನುವಂತಾಗಿದೆ. 90ರ ದಶಕದ ಸೂಪರ್ ಹಿಟ್ 'ಇಂಡಿಯನ್' ಸೀಕ್ವೆಲ್ ಕಳೆದ ವರ್ಷ ಬಾಕ್ಸಾಫೀಸ್‌ನಲ್ಲಿ ಮುಗ್ಗರಿಸಿತ್ತು. ಈ ಸರಣಿಯ 3ನೇ ಸಿನಿಮಾ ಕೂಡ ಸಿದ್ಧವಾಗ್ತಿದೆ. ಆದರೆ ಚಿತ್ರ ತೆರೆಗೆ ಬರುತ್ತೋ ನೇರವಾಗೆ ಓಟಿಟಿಗೆ ಬಂದುಬಿಡುತ್ತಾ ಕಾದು ನೋಡಬೇಕಿದೆ.
ಬಾಲಕೃಷ್ಣ ನಟನೆಯ 'ಅಖಂಡ' ಸಿನಿಮಾ ಸಕ್ಸಸ್ ಕಂಡಿತ್ತು. ಚಿತ್ರದ ಮುಂದುವರೆದ ಭಾಗ ಚಿತ್ರೀಕರಣ ನಡೆಯುತ್ತಿದೆ. ಸೆಪ್ಟೆಂಬರ್ 25ಕ್ಕೆ ಸಿನಿಮಾ ತೆರೆಗೆ ಬರುವ ಸಾಧ್ಯತೆಯಿದೆ. ಈ ಆಕ್ಷನ್ ಥ್ರಿಲ್ಲರ್ ಸಿನಿಮಾ ಕೂಡ ಕನ್ನಡಕ್ಕೆ ಡಬ್ ಆಗಿ ತೆರೆಗೆ ಬರಲಿದೆ.
(ಏಜೆನ್ಸೀಸ್)
ಸಿ. ಸುಂದರ್ ನಿರ್ದೇಶನದ ಫ್ಯಾಂಟಸಿ ಕಾಮೆಡಿ ಸಿನಿಮಾ 'ಮೂಕುಟ್ಟಿ ಅಮ್ಮನ್-2' ಇತ್ತೀಚೆಗೆ ಸೆಟ್ಟೇರಿತ್ತು. ಚಿತ್ರದಲ್ಲಿ ದುನಿಯಾ ವಿಜಯ್ ಕೂಡ ನಟಿಸುತ್ತಿದ್ದಾರೆ. ನಯನತಾರಾ, ಮೀನಾ, ರೆಜಿನಾ, ಅಭಿನಯ ಚಿತ್ರದ ತಾರಾಗಣದಲ್ಲಿದ್ದಾರೆ.