ನ್ಯೂಸ್

ಸಿಹಿಯ ಸಮೃದ್ಧ ಪರಂಪರೆ; ಬನ್ನಿ ಬಾಯಿ ಸಿಹಿ ಮಾಡೋಣ

ಕರ್ನಾಟಕದ ಆಯಾ ಭಾಗಗಳಲ್ಲಿನ ಸಿಹಿ ಖಾದ್ಯಗಳು ಆಹಾರ ಸಂಸ್ಕೃತಿಗೆ ಕಿರೀಟಪ್ರಾಯ. ಇದರ ರುಚಿ, ಪರಿಮಳ ಕರುನಾಡಿನಿಂದ ವಿದೇಶಗಳವರೆಗೂ ವ್ಯಾಪಿಸಿದೆ. ಸ್ಥಳೀಯ ಮಟ್ಟದಲ್ಲಿ ಉದ್ಯೋಗ ಸೃಷ್ಟಿಸಿ, ಬದುಕನ್ನು ರೂಪಿಸಿಕೊಡುತ್ತಿರುವ ಈ ಖಾದ್ಯಗಳ ಸಿಹಿಪಯಣ ಚೇತೋಹಾರಿ. ಹಬ್ಬ, ಹರಿದಿನ ಸೇರಿದಂತೆ ಯಾವುದೇ ಶುಭ ಸಮಾರಂಭ ಈ ಖಾದ್ಯಗಳಿಲ್ಲದೆ ಪೂರ್ಣಗೊಳ್ಳುವುದಿಲ್ಲ. ಮತ್ತೇಕೆ ತಡ, ಬನ್ನಿ ಬಾಯಿ ಸಿಹಿ ಮಾಡೋಣ!

ಮೈಸೂರು ಪಾಕ್

ಮೈಸೂರು ಹೆಸರಿನೊಡನೇ ಬೆಸೆದು ಕೊಂಡಿರುವ ಸಿಹಿ ಖಾದ್ಯ ಮೈಸೂರು ಪಾಕ್ ಈ ಸಾಂಸ್ಕೃತಿಕ ನಗರಿಗೆ ಮತ್ತೊಂದು ಹೆಗ್ಗಳಿಕೆಯನ್ನು ತಂದುಕೊಟ್ಟಿದೆ. ಮೊದಲ ಬಾರಿ ಮೈಸೂರು ಪಾಕ್ ತಯಾರಾಗಿದ್ದು ಮೈಸೂರು ಅರಮನೆಯ ಪಾಕಶಾಲೆಯಲ್ಲೇ. ಈಗಲೂ ಪ್ರಪಂಚದಾದ್ಯಂತ ಆಹಾರ ಪ್ರಿಯರನ್ನು ತನ್ನತ ಸೆಳೆಯುವ ಮೈಸೂರು ಪಾಕ್ ತನ್ನೊಳಗೆ ಇಡೀ ಮೈಸೂರಿನ ಸ್ವಾದ, ಗತವೈಭವವನ್ನು ಅಡಗಿಸಿಕೊಂಡಿದೆ.

ಕಾಕಾಸುರ ಮಾದಪ್ಪನವರ ಪಾಕ

ಕಾಕಾಸುರ ಮಾದಪ್ಪನವರು ಮಹಾರಾಜ ನಾಲ್ವಡಿ ಕೃಷ್ಣರಾಜ ಒಡೆಯರ್ ಹಾಗೂ ಜಯ ಚಾಮರಾಜ ಒಡೆಯರ್ ಆಡಳಿತಾವಧಿಯಲ್ಲಿ ಅರಮನೆಯಲ್ಲಿ ಸಿಹಿತಿಂಡಿ ತಯಾರಿಸುವ ಕೆಲಸದ ಜವಾಬ್ದಾರಿ ವಹಿಸಿಕೊಂಡಿದ್ದರು. ರಾಜಕುಟುಂಬಕ್ಕೆ ಬೇಕಾದ ಸಿಹಿ ಮತ್ತು ಖಾರವನ್ನು ಇವರೇ ತಯಾರಿಸುತ್ತಿದ್ದರು. ಒಮ್ಮೆ ಮಹಾರಾಜರು ಕಾಕಾಸುರ ಮಾದಪ್ಪನವರಿಗೆ ಹೊಸದಾದ ಯಾವುದಾದರೊಂದು ತಿಂಡಿ ತಯಾರಿಸುವಂತೆ ಸೂಚಿಸಿದರು. ಅದರಂತೆ ಕಾಕಾಸುರ ಮಾದಪ್ಪನವರು ಕಡಲೆಹಿಟ್ಟು, ಸಕ್ಕರೆ, ತುಪ್ಪ ಸೇರಿಸಿ ತಿಂಡಿಯೊಂದನ್ನು ಮಾಡಿ ಅದನ್ನು ಮಹಾರಾಜ ನಾಲ್ವಡಿ ಕೃಷ್ಣರಾಜ ಒಡೆಯರಿಗೆ ಕೊಟ್ಟರು. ಇದರ ರುಚಿ ನೋಡಿದ ಮಹಾರಾಜರು ತುಂಬ ಖುಷಿಯಾಗಿ ಕಾಕಾಸುರ ಮಾದಪ್ಪನವರನ್ನು ಪ್ರಶಂಶಿಸಿದರು ಮತ್ತು ಮಹಾರಾಜರೇ ಈ ತಿಂಡಿಗೆ ‘ಮೈಸೂರು ಪಾಕ’ ಎಂದು ನಾಮಕರಣ ಮಾಡಿದರು. ಮೈಸೂರಿನ ‘ಗುರು ಸ್ವೀಟ್ಸ್’ ಮೂಲರುಚಿಯ ಮೈಸೂರು ಪಾಕಗೆ ಖ್ಯಾತಿಯಾಗಿದೆ.

ಗೋಕಾಕ ಕರದಂಟು

ಬೆಳಗಾವಿ ಜಿಲ್ಲೆಯ ಗೋಕಾಕನೊಂದಿಗೆ ಬಿಡಿಸಲಾಗದ ನಂಟು ಕರದಂಟಿನದ್ದು. ಗೋಕಾಕಿನ ಅಜ್ಜವೊಬ್ಬರು ಬೆಲ್ಲ, ತುಪ್ಪ, ಅಂಟು, ಒಣಹಣ್ಣು ಸೇರಿಸಿ ಚಕ್ಕೆ ರೀತಿಯ ಸಿಹಿಖಾದ್ಯ ತಯಾರಿಸಿ ಸುತ್ತ ಊರಿನ ಜಾತ್ರೆಗಳಲ್ಲಿ ಮಾರಾಟ ಮಾಡುತ್ತಿದ್ದರು. ಇವರ ಕೈರುಚಿಯ ಸ್ವಾದಕ್ಕೆ ಮನಸೋತ ಜನರು ಗೋಕಾಕ ಅಜ್ಜನ ಕರದಂಟಿಗೆ ಬೇಡಿಕೆಯನ್ನೂ ಹೆಚ್ಚಿಸಿದರು. ಪ್ರಸಕ್ತ ಗೋಕಾಕ ಕರದಂಟು ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಗಳಿಸಿದೆ. ನಿಸರ್ಗದತ್ತವಾಗಿ ಸಿಗುವ ಅಂಟನ್ನು ಬಳಸಿಕೊಂಡು ಈ ಖಾದ್ಯವನ್ನು ತಯಾರಿಸುವುದು ವಿಶೇಷ. ಬೆಲ್ಲ, ತುಪ್ಪ, ಒಣಹಣ್ಣುಗಳಂತಹ ಪೌಷ್ಟಿಕಾಂಶವಿರುವ ಪದಾರ್ಥಗಳನ್ನು ಬಳಸಿ ತಯಾರು ಮಾಡುವ ಈ ಖಾದ್ಯ ಬಾಣಂತಿಯರಿಗೆ, ಕ್ರೀಡಾಪಟುಗಳಿಗೆ ಉತ್ತಮ. ಅಮೀನಗಡದ (ಬಾಗಲಕೋಟ ಜಿಲ್ಲೆ) ಕರದಂಟು ಕೂಡ ಪ್ರಸಿದ್ಧಿ ಪಡೆದಿದೆ.

ಕಲಾಕಂದ-ಮಾಮಪುರಿ

ಹಾಲು, ಖೋವಾ, ಒಣಹಣ್ಣುಗಳಿಂದ ತಯಾರಿಸುವ ಕಲಾಕಂದ ರುಚಿಯೇ ವಿಶಿಷ್ಟ. ಕಲ್ಯಾಣ ಕರ್ನಾಟಕದ ಹೆಬ್ಬಾಗಿಲು ಕಲಬುರಗಿಯ ಕಲಾಕಂದ ಸಾಕಷ್ಟು ಖ್ಯಾತಿ ಹೊಂದಿದ್ದು, ವ್ಯಾಪಕ ಬೇಡಿಕೆ ಇದೆ. ಈಗಲೂ ಸಾಂಪ್ರದಾಯಿಕ ವಿಧಾನದಲ್ಲಿ ತಯಾರಿಸುತ್ತ, ಮೂಲರುಚಿಯನ್ನು ಉಳಿಸಿಕೊಂಡಿರುವುದರಿಂದ ಗ್ರಾಹಕರು ವಿಶೇಷ ಸಂದರ್ಭಗಳನ್ನು ಸ್ಮರಣೀಯವಾಗಿಸಲು ಕಲಾಕಂದನ್ನು ಆತ್ಮೀಯರಿಗೆ ಹಂಚಿ, ಸಂಭ್ರಮಿಸುತ್ತಾರೆ. ಹಾಗೆಯೇ, ಕಲಬುರಗಿಯ ಇನ್ನೊಂದು ವಿಶೇಷ ಸಿಹಿ ಖಾದ್ಯ ಮಾಮಪುರಿ ಅಥವಾ ಮಾಲಪುರಿ. ಸೂಪರ್ ಮಾರ್ಕೆಟ್ ಪ್ರದೇಶದ ಕೆಲವೇ ವ್ಯಾಪಾರಸ್ಥರು ಇದನ್ನು ತಯಾರಿಸುತ್ತಾರೆ. ಇದರ ಸ್ವಾದದ ಹಿರಿಮೆಯಿಂದ ಈಗ ಆನ್​ಲೈನ್​ಗೂ ಪ್ರವೇಶ ಪಡೆದುಕೊಂಡಿದ್ದು, ಗ್ರಾಹಕರಿಗೆ ಸುಲಭದಲ್ಲಿ ಲಭ್ಯವಾಗುತ್ತಿದೆ. ಮಾರುಕಟ್ಟೆಯನ್ನು ವಿಸ್ತರಿಸಿಕೊಂಡಿದೆ.

ಬೆಳಗಾವಿ ಕುಂದಾ

ಹಾಲು ಮತ್ತು ಖೋವಾದಿಂದ ತಯಾರಿಸಿದ ಸಿಹಿಯಾದ ಕುಂದಾ, ಬೆಳಗಾವಿ ನಿವಾಸಿಗಳ ಹೃದಯದಲ್ಲಿ ವಿಶೇಷ ಸ್ಥಾನವನ್ನು ಹೊಂದಿದೆ. 130 ವರ್ಷಗಳ ಹಿಂದೆ ರಾಜಸ್ಥಾನದ ನಾಗೌರ್​ನಿಂದ ಬೆಳಗಾವಿಗೆ ಆಗಮಿಸಿದ ರಘುನಾಥಜಿ ಜೋಶಿ ಎಂಬುವರು ಕುಂದಾದ ಆವಿಷ್ಕಾರಕ್ಕೆ ಕಾರಣರಾಗಿದ್ದಾರೆ. ಇವರು ಬೆಳಗಾವಿಯ ಶಹಪುರ ಪ್ರದೇಶದಲ್ಲಿ ಒಂದು ಸಣ್ಣ ಮಿಠಾಯಿ ಅಂಗಡಿಯನ್ನು ಸ್ಥಾಪಿಸಿದರು. ಅದೊಂದು ದಿನ, ಸಾಂಪ್ರದಾಯಿಕ ಸಿಹಿತಿಂಡಿಗಳನ್ನು ತಯಾರಿಸುವಾಗ, ಆಕಸ್ಮಿಕವಾಗಿ ಸಿಹಿಯಾದ ಹಾಲಿನ ಮಡಕೆಯನ್ನು ಹೆಚ್ಚು ಕಾಲ ಕುದಿಸಿದರು. ಕುತೂಹಲದಿಂದ, ಅದಕ್ಕೆ ಒಂದಿಷ್ಟು ಖೋವಾ ಬೆರೆಸಿ ಅವರು ಮಿಶ್ರಣದ ರುಚಿ ನೋಡಿದರು ಮತ್ತು ಅದರ ಸುವಾಸನೆ, ರುಚಿಗೆ ಆಶ್ಚರ್ಯಚಕಿತರಾದರು. ಹೀಗೆ ಹುಟ್ಟಿಕೊಂಡ ಕುಂದಾ ಬೆಳಗಾವಿಯ ಖ್ಯಾತಿಯನ್ನು ಎಲ್ಲ ಕಡೆ ಪಸರಿಸಿದೆ. ಪ್ರಸಕ್ತ ನೂರಾರು ವ್ಯಾಪಾರಿಗಳು ಕುಂದಾ ತಯಾರಿಕೆಯಲ್ಲಿ ತೊಡಗಿದ್ದು, ದೊಡ್ಡ ವ್ಯಾಪಾರದ ಸ್ವರೂಪ ಪಡೆದುಕೊಂಡಿದೆ. ಬೆಳಗಾವಿ ಹಾಗೂ ಸುತ್ತಮುತ್ತಲಿನ ಯಾವುದೇ ಪ್ರದೇಶದಲ್ಲಿ ವಿಶೇಷ ಸಮಾರಂಭದ ತಟ್ಟೆಯಲ್ಲಿ ಕುಂದಾ ಇರಲೇ ಬೇಕು ಎಂಬ ನಂಟನ್ನೂ ಇದು ಸ್ಥಾಪಿಸಿಕೊಂಡಿದೆ.