ರಾಮನಗರ : ಜಿಲ್ಲೆಯ ಚೆಕ್‌ಡ್ಯಾಂಗಳನ್ನು ಮತ್ತಷ್ಟು ವಿಭಿನ್ನವಾಗಿ ನಿರ್ಮಿಸುವ ನಿಟ್ಟಿನಲ್ಲಿ ಹೆಜ್ಜೆ ಇಟ್ಟಿರುವ ಜಿಲ್ಲಾ ಪಂಚಾಯಿತಿ, ನಾಲೆಗಳನ್ನು ಗೇಬಿಯನ್ ಮಾದರಿಯಲ್ಲಿ ಅಭಿವೃದ್ಧಿಪಡಿಸಲು ಮುಂದಾಗಿದೆ.
ಜಿಲ್ಲೆಯಲ್ಲಿ ಮೊದಲ ಬಾರಿಗೆ ಚೆಕ್‌ಡ್ಯಾಂ ಗೋಡೆಗೆ ಕನಕಪುರ ತಾಲೂಕಿನ ದೊಡ್ಡಮರಳವಾಡಿ ಗ್ರಾಮ ಪಂಚಾಯಿತಿಯ ಆನೆಹೊಸಹಳ್ಳಿ ನಾಲಾಭಿವೃದ್ಧಿ ಕಾಮಗಾರಿಯಲ್ಲಿ ಗೇಬಿಯನ್ ಮಾದರಿ ಅಳವಡಿಸಲಾಗಿದ್ದು, ಇದೇ ಮಾದರಿಯಲ್ಲಿ ಪ್ರತಿ ಗ್ರಾಪಂನಲ್ಲಿ 5 ಕಿ.ಮೀ ನಾಲೆ ನಿರ್ಮಿಸಲು ಸಹ ಯೋಜನೆ ರೂಪಿಸಿದೆ.
ಏನಿದು ಗೇಬಿಯನ್?: ಚೆಕ್‌ಡ್ಯಾಂಗಳಿಗೆ ಕಲ್ಲು ರಚನೆಯ ಗೋಡೆಗೆ ತಂತಿಯೊಂದಿಗೆ ಕಟ್ಟಿ, ಇಳಿಜಾರಿನಲ್ಲಿ ಕಲ್ಲುಗೋಡೆಯನ್ನು ಹೆಚ್ಚು ಬಲಪಡಿಸಲು ಬಳಸುವ ರಚನೆ ಇದಾಗಿದೆ. ತಂತಿ ಜಾಲರಿಯಿಂದ ಬಲಪಡಿಸಲಾಗುತ್ತದೆ.
ಸವೆತ ನಿಯಂತ್ರಣ ಮತ್ತು ಕಡಿದಾದ ಇಳಿಜಾರುಗಳನ್ನು ಸ್ಥಿರಗೊಳಿಸಲು ಗೇಬಿಯನ್ ಪ್ರಮುಖ ಪಾತ್ರ ವಹಿಸುತ್ತದೆ. ಈ ರೀತಿಯ ಗೇಬಿಯನ್‌ಗಳನ್ನು ಹೆಚ್ಚಾಗಿ ತೋಟಗಾರಿಕೆಯಲ್ಲಿ ಅಥವಾ ಇಳಿಜಾರು ಪ್ರದೇಶದಲ್ಲಿ ಹಾಗೂ ಮಳೆಯಾಗುವ ಪ್ರದೇಶದಲ್ಲಿ ನಿರ್ಮಿಸಲಾಗುತ್ತಿದೆ.
ರಚನೆ ಹೇಗೆ?: ಬಿದ್ದ ಮಳೆ ನೀರು ಹರಿಯುವ ಮಾರ್ಗದಲ್ಲಿ ಇವುಗಳನ್ನು ಕಟ್ಟಲಾಗುತ್ತಿದೆ. ಇದರಿಂದಾಗಿ ನೀರು ಸಂಗ್ರಹಿಸಿ, ಭೂಮಿಗೆ ಇಂಗಿಸಲಾಗುತ್ತದೆ. ಜತೆಗೆ, ಇಲ್ಲಿಂದ ನೀರು ಹರಿಯುವಾಗ ತಂತಿಬೇಲಿಯಿಂದಾಗಿ ಕೇವಲ ನೀರು ಮುಂದಕ್ಕೆ ಹರಿಯುತ್ತದೆ. ಇಲ್ಲಿ ನೀರಿನ ಶುದ್ಧೀಕರಣವೂ ಆಗಲಿದೆ. ಗುಂಡಿಗೆ ನೀರು ಬರುವಾಗ ತಂತಿ ಬೇಲಿ ಮೂಲಕವೇ ಬರುವುದರಿಂದ ನೀರು ಹರಿಯುವಾಗ ಸೇರಬೇಕಿದ್ದ ಮಣ್ಣು ಸಹ ಗುಂಡಿಗಳಿಗೆ ಸೇರುವುದಿಲ್ಲ.
ಇದು ರಿಡ್ಜ್ ವ್ಯಾಲಿ ಮಾದರಿ ಆಗಿದ್ದು, ನಾಲೆಗಳಲ್ಲಿ ಸಣ್ಣದಾಗಿ ಗುಂಡಿ ತೆಗೆದು, ಸ್ಥಳೀಯವಾಗಿ ಸಿಗುವ ಕಾಡುಗಲ್ಲುಗಳನ್ನು ತುಂಬಿ ಅದಕ್ಕೆ ಮೆಷ್ (ತಂತಿ ಬೇಲಿ)ಗಳ ಮೂಲಕ ಪದರ ಹಾಕಲಾಗುತ್ತದೆ. ಸುತ್ತಲೂ, ಸೈಡ್ ವಾಲ್‌ಗಳ ಮಾದರಿಯಲ್ಲಿ 2 ಕಡೆ ಪಿಲ್ಲರ್ ರಚನೆ ಆಗಲಿದೆ. ಇಲ್ಲಿ ಲಕ್ಷಾಂತರ ಲೀಟರ್ ನೀರನ್ನು ಇಂಗಿಸಬಹುದಾಗಿದೆ. ಇಳಿಜಾರಿನಲ್ಲಿ ಹರಿಯುವ ನೀರಿನ ವೇಗ ಕಡಿಮೆ ಮಾಡುವುದರಿಂದ ಮಣ್ಣಿನ ಸವಕಳಿಗೆ ಶಾಶ್ವತ ಪರಿಹಾರವೂ ದೊರೆಯಲಿದೆ.
ಜಿಲ್ಲೆಯಲ್ಲಿ ವ್ಯಾಪಿಸಲಿದೆ: ಗೇಬಿಯನ್ ಮಾದರಿಯ ಚೆಕ್ ಡ್ಯಾಂ ನಿರ್ಮಾಣ ಜಿಲ್ಲೆಯಲ್ಲಿ ಸದ್ಯಕ್ಕೆ ಒಂದು ಕಡೆ ಮಾತ್ರ ಜಾರಿಗೆ ಬಂದಿದೆ. ಜಿಲ್ಲೆಯಲ್ಲಿನ 127 ಗ್ರಾಪಂಗಳಲ್ಲಿಯೂ ಇದೇ ಮಾದರಿಯಲ್ಲಿ ನಾಲೆಗಳ ಅಭಿವೃದ್ಧಿಗೆ ಜಿಪಂ ಯೋಜನೆ ರೂಪಿಸಿದೆ. ಒಂದು ಗೇಬಿಯನ್ ನಿರ್ಮಿಸಲು 2.5 ಲಕ್ಷದಿಂದ 3 ಲಕ್ಷ ರೂ. ಖರ್ಚಾಗಲಿದ್ದು, ಕಲ್ಲುಗಳನ್ನು ಸ್ಥಳೀಯವಾಗಿ ಶೇಖರಿಸಲಾಗುತ್ತಿದೆ. ಕೇವಲ ತಂತಿ ಬೇಲಿಗಷ್ಟೇ ಹಣ ಖರ್ಚಾಗುತ್ತಿದೆ. ಈ ಕಾಮಗಾರಿಗಳಿಂದಾಗಿ ನರೇಗಾ ಕೆಲಸಗಳು ನಡೆಯುತ್ತಿದ್ದು, ಮಾನವ ದಿನಗಳ ಸೃಜನೆಯೊಂದಿಗೆ ಉದ್ಯೋಗ ಸೃಷ್ಟಿಯೂ ಆಗುತ್ತಿದೆ. ನೀರಿನ ಟ್ರೀಟ್‌ಮೆಂಟ್‌ನೊಂದಿಗೆ ಅಂರ್ತಜಲಮಟ್ಟ ವೃದ್ಧಿಸುವುದು ವಿಶೇಷ.
ನೀರಿನ ಶೇಖರಣೆ ಹೆಚ್ಚಿಸಲು, ಮಣ್ಣಿನ ಸವಕಳಿ ತಡೆಯಲು ಗೇಬಿಯನ್ ಮಾದರಿಯಲ್ಲಿ ನಾಲೆಗಳನ್ನು ಅಭಿವೃದ್ಧಿ ಪಡಿಸಲಾಗಿದ್ದು, ಅತಿ ಕಡಿಮೆ ಖರ್ಚಿನಲ್ಲಿ ಹೆಚ್ಚಿನ ಲಾಭ ಪಡೆದುಕೊಳ್ಳಬಹುದಾಗಿದೆ. ಮುಂದಿನ ದಿನಗಳಲ್ಲಿ ಜಿಲ್ಲೆಯ ಎಲ್ಲ ಗ್ರಾಪಂಗಳಲ್ಲೂ ಈ ಯೋಜನೆ ಜಾರಿಗೆ ತರಲಾಗುವುದು. ಇಕ್ರಂ ಸಿಇಇ, ಜಿಲ್ಲಾ ಪಂಚಾಯಿತಿ ರಾಮನಗರ