ಉಪ್ಪಿನಂಗಡಿ: ‘ನನ್ನ ಅಪ್ಪ ನಿವೃತ್ತ ಬ್ಯಾಂಕ್ ಆಫೀಸರ್. ನಿಮ್ಮಲ್ಲೇ ಕಾಯಂ ಹೂವು ಖರೀದಿಸುವುದು. ನಮ್ಮ ಮನೆಯಲ್ಲಿ ಭೂತ ಕೋಲಕ್ಕೆ 15 ಅಟ್ಟೆ ಮಲ್ಲಿಗೆ ಹೂವು ಬೇಕಾಗಿದೆ’ ಎಂದೆಲ್ಲ ಹೇಳಿ ವಿಶ್ವಾಸ ಮೂಡಿಸಿ ವಂಚಿಸಿದ ಯುವಕನ ವಿರುದ್ಧ ಹೂವಿನ ವ್ಯಾಪಾರಿಗಳು ಉಪ್ಪಿನಂಗಡಿ ಪೊಲೀಸರಿಗೆ ದೂರು ನೀಡಿದ್ದಾರೆ.
ಬೈಕಿನಲ್ಲಿ ಬರುವ ಈತ ಮುಖಕ್ಕೆ ಮಾಸ್ಕ್ ಹಾಕಿಕೊಂಡೇ ಮಾತನಾಡುತ್ತಾ, ನನ್ನ ಗುರುತು ಸಿಗಲಿಲ್ಲವೇ? ನಾನು ನಿಮ್ಮಲ್ಲಿಗೆ ಬರುವ ನಿವೃತ್ತ ಬ್ಯಾಂಕ್ ಆಫೀಸರ್‌ರವರ ಮಗ. ತಂದೆಯವರು ನಿಮ್ಮಲ್ಲಿಯೇ ಹೂವು ಖರೀದಿಸುವುದು. ನಾಡಿದ್ದು ನಮ್ಮ ಮನೆಯಲ್ಲಿ ಭೂತ ಕೋಲವಿದೆ. ಹದಿನೈದು ಅಟ್ಟೆ ಮಲ್ಲಿಗೆ ಹೂವು ಬೇಕು. ಆದರೆ ಮನೆಗೆಯೇ ತಲುಪಿಸಬೇಕು ಎಂದೆಲ್ಲಾ ಸೂಚಿಸಿ ಹೂವಿನ ವ್ಯಾಪಾರಿಯ ಮೊಬೈಲ್ ನಂಬರ್ ಪಡೆದು ಹೋಗುತ್ತಾನೆ.
ಕೆಲ ಸಮಯದಲ್ಲೇ ಹೂವಿನ ವ್ಯಾಪಾರಿಗೆ ಫೋನಾಯಿಸುವ ಆತ, ಜಿನಸು ಅಂಗಡಿಯಲ್ಲಿ 42 ಸಾವಿರ ರೂ. ಮೌಲ್ಯದ ಸಾಮಗ್ರಿ ಖರೀದಿಸಿದ್ದೇನೆ. 40 ಸಾವಿರ ರೂ. ನಗದು ಪಾವತಿಸಿದ್ದೇನೆ. 2 ಸಾವಿರ ರೂ. ಕಡಿಮೆಯಾಗಿದೆ. ಇವತ್ತಿನ ಮಟ್ಟಿಗೆ ಹೊಂದಿಸಬಹುದಾ? ನಾಡಿದ್ದು ಹೂವಿನ ಬಿಲ್‌ನೊಂದಿಗೆ ಕೊಡುತ್ತೇನೆ ಎಂದು ತಿಳಿಸುತ್ತಾನೆ. ವ್ಯಾಪಾರಿಯೊಬ್ಬರು ಆತನ ಮಾತನ್ನು ನಂಬಿ 2 ಸಾವಿರ ರೂ. ನಗದು ನೀಡಿ, ಮರುದಿನ ಹದಿನೈದು ಅಟ್ಟೆ ಮಲ್ಲಿಗೆ ಹೂವಿನೊಂದಿಗೆ ಯುವಕನ ಮನೆ ಎಲ್ಲಿ ಎಂದು ವಿಚಾರಿಸಲು ಫೋನಾಯಿಸಿದರೆ ಫೋನ್ ಸ್ವಿಚ್ ಆಫ್ ಆಗಿತ್ತು.
ಸಂದೇಹ ಮೂಡಿದ ಹೂವಿನ ವ್ಯಾಪಾರಿ ಆತ ಜಿನಸು ಖರೀದಿಸಿದ್ದೇನೆ ಎಂದು ತಿಳಿಸಿದ್ದ ಅಂಗಡಿಗೆ ಹೋಗಿ ವಿಚಾರಿಸಿದರೆ ಅಲ್ಲಿ ಆ ಮೊತ್ತದ ಖರೀದಿಯನ್ನು ಯಾವುದೇ ಗ್ರಾಹಕರ ಮಾಡಿಲ್ಲ ಎಂಬ ವಿಚಾರ ತಿಳಿದು ಬಂದಿದೆ. ಇದರಿಂದ ಮೋಸ ಹೋಗಿರುವುದು ಅರಿವಾಗಿ ಪ್ರಕರಣವನ್ನು ಪೊಲೀಸರ ಗಮನಕ್ಕೆ ತರಲಾಗಿದೆ. ಇತ್ತ ಈ ವಿಚಾರ ಸುದ್ದಿಯಾಗುತ್ತಲೇ ತಿಂಗಳ ಹಿಂದೆ ಇದೇ ರೀತಿಯಲ್ಲಿ ಮತ್ತೋರ್ವ ಹೂವಿನ ವ್ಯಾಪಾರಿಗೂ ವಂಚಿಸಲಾಗಿತ್ತು.