ನ್ಯೂಸ್

BiggBoss ಕ್ಯಾಪ್ಟನ್ಸಿ ಟಾಸ್ಕ್​​ನಲ್ಲಿ ಕೇಳಿ ಬಂತು ಮೋಸದಾಟ; ಭವ್ಯಾರ ಅಸಲಿ ವಿಚಾರ ಬಯಲು ಮಾಡ್ತಾರಾ ಮೋಕ್ಷಿತಾ?

ಬೆಂಗಳೂರು: ಕನ್ನಡದ ಕಿರುತೆರೆಯ ಜನಪ್ರಿಯ ರಿಯಾಲಿಟಿ ಶೋ ಬಿಗ್​ಬಾಸ್​ (BiggBoss) ಆರಂಭವಾಗಿ 13ನೇ ವಾರಕ್ಕೆ ಕಾಲಿಟ್ಟಿದ್ದು, ವಾರ ಕಳೆದಂತೆ ಕಾರ್ಯಕ್ರಮ ರೋಚಕತೆ ಹೆಚ್ಚಿಸುತ್ತಲೇ ಹೋಗುತ್ತಿದೆ. ಇನ್ಣೂ ಈ ವಾರದ ಟಾಸ್ಕ್​ ವಿಚಾರಕ್ಕೆ ಬರುವುದಾದರೆ ಬಿಗ್​ಬಾಸ್​ ಮನೆಯನ್ನು ರೆಸಾರ್ಟ್​ ಆಗಿ ಪರಿವರ್ತಿಸಲಾಗಿದ್ದು, ಈ ಟಾಸ್ಕ್​ನಲ್ಲಿ ಭವ್ಯಾ ಅವರ ತಂಡ ಗೆದ್ದು ಕ್ಯಾಪ್ಟನ್ಸಿಗೆ ಅರ್ಹತೆ ಪಡೆದಿದೆ. ಕ್ಯಾಪ್ಟನ್ಸಿ ಟಾಸ್ಕ್​ನಲ್ಲಿ ಭವ್ಯಾ ಗೆದ್ದಿದ್ದು, ಸತತ ಎರಡನೇ ಬಾರಿಗೆ ಕ್ಯಾಪ್ಟನ್​ ಆಗಿ ಆಯ್ಕೆಯಾಗಿದ್ದಾರೆ.

ಇನ್ನೂ ಕ್ಯಾಪ್ಟನ್ಸಿ ಟಾಸ್ಕ್​​ಗೆ ಸಂಬಂಧಿಸಿದಂತೆ ಭವ್ಯಾ ಅವರು ಮೋಸ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದ್ದು, ಮೋಕ್ಷಿತಾ ಹಾಗೂ ಮನೆಯ ಇತರೆ ಸದಸ್ಯರು ಈ ಬಗ್ಗೆ ಧ್ವನಿ ಎತ್ತಿದ್ದಾರೆ. ಆಟದಲ್ಲಿ ಮೋಸ ಮಾಡಿದ್ರಾ ಭವ್ಯಾ? ಎಂಬ ಶೀರ್ಷಿಕೆಯಡಿ ಪ್ರೋಮೋವನ್ನು ಬಿಡುಗಡೆ ಮಾಡಲಾಗಿದ್ದು, ಭವ್ಯಾ ಅವರ ಮೇಲೆ ಮಾಡಲಾಗಿರುವ ನಿಜಾನಾ ಎಂಬುದು ವಾರಾಂತ್ಯದಲ್ಲಿ ಸುದೀಪ್​ ಅವರು ನಡೆಸಿಕೊಡುವ ಕಿಚ್ಚನ ಪಂಚಾಯಿತಿಯಲ್ಲಿ ನಿರ್ಧಾರವಾಗಲಿದೆ.

ಕ್ಯಾಪ್ಟನ್ಸಿ ಟಾಸ್ಕ್​ ವಿಚಾರಕ್ಕೆ ಬರುವುದಾದರೆ ಬಿಗ್​ಬಾಸ್​ 5 ಸ್ಪರ್ಧಿಗಳಿಗೆ ಕ್ಯಾಪ್ಟನ್ಸಿ ಟಾಸ್ಕ್​ ಅನ್ನು ಕೊಟ್ಟಿದ್ದಾರೆ. ಐದು ಸ್ಪರ್ಧಿಗಳು ಸಾಲಾಗಿ ನಿಂತುಕೊಂಡಿರಬೇಕು. ಆಗ ಬಿಗ್​ಬಾಸ್​ ಹೇಳುವ ನಂಬರ್​ನಲ್ಲಿರೋ ಚೆಂಡುಗಳನ್ನು ಓಡಿಹೋಗಿ ಹಿಡಿದು ಬಾಸ್ಕೆಟ್​ನಲ್ಲಿ ಹಾಕಬೇಕು. ಅದರಂತೆ ಸ್ಫರ್ಧಿಗಳು  ಓಡಿ ಹೋಗಿ ಬಿಗ್​ಬಾಸ್​ ಹೇಳಿದ ನಂಬರ್​ನಲ್ಲಿರೋ ಚೆಂಡುಗಳನ್ನು ತೆಗೆದುಕೊಂಡು ಬುಟ್ಟಿಗೆ ಹಾಕಬೇಕಿತ್ತು. ಹೀಗೆ ಐದು ಸ್ಪರ್ಧಿಗಳು ಓಡುತ್ತಾ, ಜಾರಿ ಬಿಳುತ್ತಾ ಬಾಲ್​ ಅನ್ನು ಹಿಡಿದು ಬುಟ್ಟಿಗೆ ಹಾಕಿದ್ದಾರೆ. ಆದರೆ ಭವ್ಯಾ ಗೌಡ ಬೇರೆ ನಂಬರ್​ನಿಂದ ಬಿದ್ದ ಬಾಲ್​ ಅನ್ನು ಎತ್ತಿಕೊಂಡು ಬುಟ್ಟಿಗೆ ಹಾಕಿದ್ದಾರೆ.

ಈ ಅಂಶವನ್ನು ಗಮನಿಸಿದ ಮೋಕ್ಷಿತಾ, ಮಂಜು ಹಾಗೂ ರಜತ್​ ಈ ಬಗ್ಗೆ ಮಾತನಾಡಿದ್ದು, ಭವ್ಯಾ ಅವರು ಮೋಸ ಮಾಡಿರುವ ಬಗ್ಗೆ ಧ್ವನಿ ಎತ್ತಿದ್ದಾರೆ. ಇದನ್ನೂ ಖುದ್ದು ನೋಡಿದ ರಜತ್​ಗೆ ಭವ್ಯಾ ಗೌಡ ಸುಮ್ಮನೆ ಇರು ಅಂತ ಹೇಳಿದ್ರು ಎಂದು ಮಾತನಾಡುವ ವೇಳೆ ಮೋಸದಾಟದ ವಿಚಾರ ಹೊರಗೆ ಬಿದ್ದಿದೆ. ಸದ್ಯ ಈ ಪ್ರೋಮೋ ವೈರಲ್​ ಆಗಿದ್ದು, ಪರ-ವಿರೋಧದ ಚರ್ಚೆ ನಡೆಯುತ್ತಿದೆ. ವಾರಾಂತ್ಯದಲ್ಲಿ ನಿರೂಪಕ ಸುದೀಪ್​  ಈ ವಿಚಾರವನ್ನು ಯಾವ ರೀತಿ ಪ್ರಸ್ತಾಪಾ ಮಾಡಲಿದ್ದಾರೆ ಎಂದು ಕಾದುನೋಡಬೇಕಿದೆ.

ಭರಪೂರ ಮನರಂಜನೆಯ ಜೊತೆಗೆ ವಿವಾದಗಳನ್ನು ಹುಟ್ಟು ಹಾಕುವ ಬಿಗ್​ಬಾಸ್​ (BiggBoss), ಕಿರುತೆರೆ ಲೋಕದ ಜನಪ್ರಿಯ ಶೋಗಳಲ್ಲಿ ಒಂದೆಂದರೆ ತಪ್ಪಾಗಲಾರದು. ಪ್ರೀತಿ, ಸ್ನೇಹ ಸಂಬಂಧಗಳಿಗೆ ಈ ಶೋ ಬೆಸುಗೆಯಾಗುತ್ತದೆ. ಇಲ್ಲಿ ನಗು, ಕಣ್ಣೀರು, ಕೋಪ, ಮುನಿಸು ಮತ್ತು ಮನಸ್ತಾಪಗಳ ಮಿಶ್ರಣವು ಇದೆ. ಟಾಸ್ಕ್​ ನೀಡುವುದರ ಜೊತೆಗೆ ಜೀವನದ ಪಾಠವನ್ನು ಹೇಳಲಾಗುತ್ತದೆ. ಎಲ್ಲದಕ್ಕಿಂತ ಹೆಚ್ಚಾಗಿ ವಾರದ ಕೊನೆಯಲ್ಲಿ ನಟ ಕಿಚ್ಚ ಸುದೀಪ್​ ಸರಿ-ತಪ್ಪುಗಳ ತಿದ್ದುವಿಕೆ ಶೋಗೆ ಹೊಸ ಆಯಾಮವನ್ನು ತಂದುಕೊಡುತ್ತದೆ. ಈ ಎಲ್ಲ ಕಾರಣಗಳಿಂದ ಈ ಶೋ ವಿಶೇಷ ಎನಿಸಿಕೊಂಡಿದ್ದು, ಕಿರುತೆರೆ ಲೋಕದಲ್ಲಿ ಸಿಕ್ಕಾಪಟ್ಟೆ ಜನಪ್ರಿಯತೆ ಪಡೆದುಕೊಂಡಿದೆ.