ನವದೆಹಲಿ: ಎಐ ( ಕೃತಕ ಬುದ್ಧಿಮತ್ತೆ ) ಕಂಪನಿ ಓಪನ್‌ಎಐ ತನ್ನ ಹೊಸ "ಚಾಟ್‌ಜಿಪಿಟಿ ಗೋ" ( ChatGPT Go ) ಸೇವೆಯನ್ನು ಭಾರತದಲ್ಲಿ ಒಂದು ವರ್ಷದವರೆಗೆ ಉಚಿತವಾಗಿ ನೀಡುವುದಾಗಿ ಘೋಷಣೆ ಮಾಡಿದೆ.
ನವೆಂಬರ್ 4ರಂದು ಬೆಂಗಳೂರಿನಲ್ಲಿ ಓಪನ್‌ಎಐ ದೇವ್‌ಡೇ ಎಕ್ಸ್‌ಚೇಂಜ್ ಕಾರ್ಯಕ್ರಮ ನಡೆಯಲಿದೆ. ಭಾರತದಲ್ಲಿ ಇದೇ ಮೊದಲ ಬಾರಿಗೆ ಈ ಕಾರ್ಯಕ್ರಮ ನಡೆಯುತ್ತಿದ್ದು, ಅಂದಿನಿಂದ ಚಾಟ್‌ಜಿಪಿಟಿ ಗೋ ಸೇವೆಗೆ ಸೈನ್ ಅಪ್ ಮಾಡುವ ಭಾರತೀಯ ಬಳಕೆದಾರರಿಗೆ ಸುಮಾರು ಒಂದು ವರ್ಷದವರೆಗೆ ಸೇವೆ ಉಚಿತ ಇರಲಿದೆ ಎಂದು ಕಂಪನಿ ತಿಳಿಸಿದೆ.
ಅಂದಹಾಗೆ, OpenAI ಆಗಸ್ಟ್ ತಿಂಗಳಲ್ಲಿ ತನ್ನ ChatGPT Go ಚಂದಾದಾರಿಕೆ ಯೋಜನೆಯನ್ನು ಪ್ರಾರಂಭಿಸಿದೆ. ಕಡಿಮೆ ಬೆಲೆಯಲ್ಲಿ ಸುಧಾರಿತ ChatGPT ಫೀಚರ್ಗಳ ಬೇಡಿಕೆಯನ್ನು ಪೂರೈಸಲು ಈ ಯೋಜನೆಯನ್ನು ನಿರ್ದಿಷ್ಟವಾಗಿ ಡಿಸೈನ್ ಮಾಡಲಾಗಿದೆ. ಈ ಯೋಜನೆಯು ಬಳಕೆದಾರರಿಗೆ ಹೆಚ್ಚಿನ ಮಾಹಿತಿಗಳ ವಿಚಾರಣೆ, ಇಮೇಜ್ ಜನರೇಷನ್ ಮತ್ತು ಫೈಲ್ ಅಪ್‌ಲೋಡ್‌ನಂತಹ ಒಳ್ಳೆಯ ಫೀಚರ್ಗಳಿಗೆ ಉಚಿತ ಪ್ರವೇಶ ನೀಡುತ್ತದೆ. ChatGPT Go ಬಿಡುಗಡೆಯಾದಾಗಿನಿಂದ ಭಾರಿ ಯಶಸ್ಸನ್ನು ಕಂಡಿದೆ ಎಂದು OpenAI ಹೇಳುತ್ತದೆ. ಭಾರತದಲ್ಲಿ ಅದರ ಬಿಡುಗಡೆಯ ಮೊದಲ ತಿಂಗಳಲ್ಲೇ ಚಂದಾದಾರರ ಸಂಖ್ಯೆ ದ್ವಿಗುಣಗೊಂಡಿದೆ.
ಎಲ್ಲೆಡೆ ಭಾರಿ ಬೇಡಿಕೆ ಬರುತ್ತಿರುವುದಿಂದ ಓಪನ್‌ಎಐ ಕಂಪನಿಯು ಈಗ ಸುಮಾರು 90 ದೇಶಗಳಲ್ಲಿ ತನ್ನ ಸೇವೆಯನ್ನು ಪ್ರಾರಂಭಿಸಿದೆ. ಇಂದು, ಭಾರತದಲ್ಲಿ ಲಕ್ಷಾಂತರ ಬಳಕೆದಾರರು ಪ್ರತಿದಿನ ChatGPT ಅನ್ನು ಬಳಸುತ್ತಾರೆ. ಅವರಲ್ಲಿ ಡೆವಲಪರ್‌ಗಳು, ವಿದ್ಯಾರ್ಥಿಗಳು ಮತ್ತು ವೃತ್ತಿಪರರು ಸೇರಿದ್ದಾರೆ. ಅಸ್ತಿತ್ವದಲ್ಲಿರುವ ChatGPT Go ಚಂದಾದಾರರು ಸಹ ಈ 12 ತಿಂಗಳ ಉಚಿತ ಕೊಡುಗೆಗೆ ಅರ್ಹರಾಗಿರುತ್ತಾರೆ ಎಂದು OpenAI ಹೇಳಿದೆ. (ಏಜೆನ್ಸೀಸ್)