ನ್ಯೂಸ್

೧೦ ಮಂದಿ ಶಂಕಿತರ ವಿರುದ್ಧ ಚಾರ್ಜ್‌ಶೀಟ್ ಸಲ್ಲಿಕೆ

ಬೆಂಗಳೂರು: ಶಿವಮೊಗ್ಗದ ತುಂಗಾ ನದಿ ತೀರದಲ್ಲಿ ಐಸಿಸ್ ಉಗ್ರರು ಸುಧಾರಿತ ಸ್ಫೋಟಕ ಸಾಧನ(ಐಇಡಿ) ಪ್ರಾಯೋಗಿಕ ಸ್ಫೋಟ ಸಂದರ್ಭದಲ್ಲಿ ರಾಷ್ಟ್ರ ಧ್ವಜ ಸುಟ್ಟ ಪ್ರಕರಣ ಸಂಬಂಧ ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ಇಬ್ಬರು ಶಂಕಿತರ ವಿರುದ್ಧ ಮಂಗಳವಾರ ೩ನೇ ಪೂರಕ ಆರೋಪಪಟ್ಟಿ ಸಲ್ಲಿಸಿದೆ. ಈ ಮೂಲಕ ಇದೇ ಪ್ರಕರಣದಲ್ಲಿ ೧೦ ಮಂದಿ ಶಂಕಿತರ ವಿರುದ್ಧ ಆರೋಪಪಟ್ಟಿ ಸಲ್ಲಿಸಲಾಗಿದೆ.
ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲೂಕಿನ ಅಬ್ದುಲ್ ಮತೀನ್ ತಾಹಾ ಹಾಗೂ ಮುಸಾವೀರ್ ಹುಸೇನ್ ಶಾಜೀಬ್ ಇಡೀ ಪ್ರಕರಣದ ಸಂಚುಕೋರರು. ಈ ಇಬ್ಬರು ೨೦೨೪ರ ಮಾರ್ಚ್ ೧ರಂದು ನಡೆದ ಬೆಂಗಳೂರಿನ ಕುಂದಲಹಳ್ಳಿ ಸಮೀಪದ ರಾಮೇಶ್ವರಂ ಕೆಫೆ ಸ್ಫೋಟದ ರೂವಾರಿಗಳು ಎಂದು ಎನ್‌ಐಎ ತಿಳಿಸಿದೆ.
ಈ ಇಬ್ಬರು ಶಂಕಿತರು, ಬೆಂಗಳೂರಿನ ಸುದ್ದಗುಂಟೆಪಾಳ್ಯದಲ್ಲಿ ೨೦೨೦ರಲ್ಲಿ ಐಸಿಸ್ ಪ್ರೇರಿತ ಅಲ್-ಹಿಂದ್ ಸಂಘಟನೆ ಸಂಬಂಧ ನಡೆದ ಸಭೆಯಲ್ಲಿ ಭಾಗಿಯಾಗಿದ್ದರು. ಜತೆಗೆ ಶಂಕಿತರು, ಮುಸ್ಲಿಂ ಸಮುದಾಯದ ಕೆಲ ಯುವಕರನ್ನು ಪ್ರಚೋದಿಸಿ ಐಸಿಸ್/ಅಲ್ ಹಿಂದ್ ಸಂಘಟನೆಗಳಿಗೆ ಸೇರಿಸುತ್ತಿದ್ದರು.
ಇನ್ನು ೨೦೨೨ರ ಆ.೨೬ರಂದು ಶಿವಮೊಗ್ಗ ಗ್ರಾಮಾಂತರ ಠಾಣೆ ವ್ಯಾಪ್ತಿಯ ತುಂಗಾ ನದಿ ತೀರದಲ್ಲಿ ಐಇಡಿಯನ್ನು ಪ್ರಾಯೋಗಿಕವಾಗಿ ಸ್ಫೋಟಿಸುವ ಸಂದರ್ಭದಲ್ಲಿ ರಾಷ್ಟ್ರ ಧ್ವಜ ಸುಟ್ಟಿದ್ದರು. ಈ ಸಂಬಂಧ ರಾಜ್ಯ ಪೊಲೀಸರು ಪ್ರಕರಣವನ್ನು ಎನ್‌ಐಎಗೆ ವಹಿಸಿತ್ತು. ಈ ವೇಳೆ ಐಸಿಸ್ ಕೈವಾಡದ ಬಗ್ಗೆ ಎನ್‌ಐಎ ಮಾಹಿತಿ ಬಹಿರಂಗ ಪಡಿಸಿದ್ದು, ನಿಷೇಧಿತ ಭಯೋತ್ಪಾದಕಸಂಘಟನೆ ಐಸಿಸ್‌ನ ಭಾರತ ವಿರೋಧಿ ಚಟುವಟಿಕೆಗಳಿಗೆ ಸಂಬಂಧಿಸಿದಂತೆ ಭಯೋತ್ಫಾದನೆಯನ್ನು ಹರಡಲು ಮತ್ತು ರಾಷ್ಟ್ರವನ್ನು ಅಸ್ಥಿರಗೊಳಿಸಲು ಮುಸ್ಲಿಂ ಯವಕರನ್ನು ಪ್ರಚೋದಿಸಿ, ಸಂಘಟನೆಗೆ ನೇಮಕಾತಿ ಮಾಡಿಕೊಳ್ಳುತ್ತಿದಲ್ಲದೆ, ಭಯೋತ್ಫಾದನೆಗೆ ನಿಧಿ ಸಂಗ್ರಹ, ರಾಷ್ಟ್ರ ಧ್ವಜ ಸುಡುವುದು, ಪ್ರಯೋಗ ಸ್ಫೋಟಗಳು ಮತ್ತು ಹಿಂಸಾತ್ಮಕ ಚಟುವಟಿಕೆಗಳಲ್ಲಿ ಆರೋಪಿಗಳು ಭಾಗಿಯಾಗಿದ್ದರು. ಶಿವಮೊಗ್ಗ ಮತ್ತು ಮಂಗಳೂರು ಹಾಗೂ ರಾಜ್ಯ ಬಿಜೆಪಿ ಕಚೇರಿಯಲ್ಲಿ ಸ್ಫೋಟಿಸುವ ಸಂಚು ಯಶಸ್ವಿಯಾಗದ ಹಿನ್ನೆಲೆಯಲ್ಲಿ ಮಾ.೧ರಂದು ರಾಮೇಶ್ವರಂ ಕೆಫೆಯಲ್ಲಿ ಐಇಡಿ ಇಟ್ಟು ಸ್ಫೋಟಿಸಿದ್ದರು. ಪ್ರಕರಣದ ತನಿಖೆ ಇನ್ನು ನಡೆಯುತ್ತಿದೆ ಎಂದು ಎನ್‌ಐಎ ತಿಳಿಸಿದೆ.