ನ್ಯೂಸ್

ಪ್ರಜ್ವಲ್ ರೇವಣ್ಣ ವಿರುದ್ಧ ಚಾರ್ಜ್‌ಶೀಟ್

ಗೋವಿಂದರಾಜು ಚಿನ್ನಕುರ್ಚಿ

ಬೆಂಗಳೂರು: ಹಾಸನ ಜಿಲ್ಲೆಯ ಲೈಂಗಿಕ ಹಗರಣ ಸಂಬಂಧ ಪ್ರಜ್ವಲ್ ರೇವಣ್ಣ ವಿರುದ್ಧ ಸಿಐಡಿಯ ವಿಶೇಷ ತನಿಖಾ ತಂಡ ಸಿಸಿಎಚ್-42ನೇ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ 2ನೇ ಆರೋಪಪಟ್ಟಿ ಸಲ್ಲಿಸಿದೆ. ವಿಧಿವಿಜ್ಞಾನ ಪ್ರಯೋಗಾಲಯ ತಜ್ಞರಿಂದ ವರದಿ ಪಡೆದು 1652 ಪುಟಗಳ ಸಮಗ್ರ ದೋಷಾರೋಪ ಪಟ್ಟಿ ಸಿದ್ಧಪಡಿಸಲಾಗಿದೆ.

ಮಹಿಳೆಯರ ಮೇಲೆ ನಡೆಸಲಾಗಿರುವ ಲೈಂಗಿಕ ಹಿಂಸೆ, ದೌರ್ಜನ್ಯ, ಖಾಸಗಿ ವಿಡಿಯೋ ಚಿತ್ರೀಕರಣ ಸಂಬಂಧ ತನಿಖೆ ನಡೆಸುವಂತೆ ಸಿಐಡಿಗೆ ಸರ್ಕಾರ ವಹಿಸಿತ್ತು. ಸಿಐಡಿ ಸೈಬರ್ ಕ್ರೈಂ ಪೊಲೀಸ್ ಠಾಣೆಗೆ ಅಪಹರಣಕ್ಕೆ ಒಳಗಾಗಿದ್ದ ಸಂತ್ರಸ್ತೆ ಕೊಟ್ಟ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿತ್ತು.

ಆರೋಪಿತ ಪ್ರಜ್ವಲ್ ರೇವಣ್ಣ ಅವರನ್ನು ಬಂಧಿಸಿ ವಿಚಾರಣೆ ನಡೆಸಲಾಯಿತು. 113 ಸಾಕ್ಷಿದಾರರನ್ನು ಪ್ರಾಸಿಕ್ಯೂಷನ್ ಪರ ಸಾಕ್ಷಿದಾರರನ್ನಾಗಿ ಪರಿಗಣಿಸಿ ವಿಚಾರಣೆಗೆ ಒಳಪಡಿಸಿ ಕಲಂ 161 ಸಿಆರ್‌ಪಿಸಿ ಹೇಳಿಕೆ ದಾಖಲಿಸಿಕೊಳ್ಳಲಾಗಿದೆ. ಸಂತ್ರಸ್ತೆ ಮತ್ತು ಪ್ರಕರಣದ ಪ್ರಮುಖ ಸಾಕ್ಷಿದಾರರ ಹೇಳಿಕೆಯನ್ನು ಕಲಂ 164 ಸಿಆರ್‌ಪಿಸಿ ದಾಖಲಿಸಿಕೊಳ್ಳಲಾಗಿದೆ.

ಕೃತ್ಯ ನಡೆದ ಸ್ಥಳ ಮತ್ತು ಮಹಜರ್, ಜೈವಿಕ, ಭೌತಿಕ, ವೈಜ್ಞಾನಿಕ, ಮೊಬೈಲ್, ಡಿಜಿಟಲ್ ಮತ್ತು ಸಾಂದರ್ಭಿಕ ಸಾಕ್ಷಾೃಧಾರಗಳನ್ನು ಸಂಗ್ರಹಿಸಲಾಗಿತ್ತು. ವಿಧಿವಿಜ್ಞಾನ ಪ್ರಯೋಗಾಲಯ ತಜ್ಞರಿಂದ ವರದಿ ಪಡೆದು ಒಟ್ಟಾರೆ 1652 ಪುಟಗಳ ಸಮಗ್ರ ದೋಷಾರೋಪ ಪಟ್ಟಿಯನ್ನು ಸಿದ್ದಪಡಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.