ಸಾಗರ: ಗ್ರಾಮೋದ್ಯೋಗವನ್ನು ಉನ್ನತ ಮಟ್ಟಕ್ಕೆ ಬೆಳೆಸಿ ಪ್ರೋತ್ಸಾಹಿಸುವ ಕೆಲಸವನ್ನು ಚರಕ ಸಂಸ್ಥೆ ಮಾಡುತ್ತಿದೆ. ಶ್ರಮ ಸಂಸ್ಕೃತಿಯ ಪ್ರತೀಕವೇ ಗ್ರಾಮೋದ್ಯೋಗ. ಉದ್ಯೋಗ ಇಲ್ಲದ ಮಹಿಳೆಯರಿಗೆ ಅವಕಾಶ ನೀಡುವ ಮೂಲಕ ಚರಕ ಸಂಸ್ಥೆ ಉತ್ತಮ ಕೆಲಸ ಮಾಡುತ್ತಿದೆ ಎಂದು ಬೆಂಗಳೂರಿನ ಇಕ್ರಾ ಸಂಸ್ಥೆಯ ಬಿ.ಗಾಯತ್ರಿ ಹೇಳಿದರು.
ನಗರಸಭೆ ರಂಗಮಂದಿರದಲ್ಲಿ ಜೀವನ್ಮುಖಿ ಮತ್ತು ಚರಕ ಸಂಸ್ಥೆ ಶನಿವಾರ ಆಯೋಜಿಸಿದ್ದ ಅವ್ವ ಮಹಾಸಂತೆ-2024 ಉದ್ಘಾಟಿಸಿ ಮಾತನಾಡಿ, ಕೈಮಗ್ಗ ಜತೆಗೆ ಕಲೆಯನ್ನು ಜೀವಂತವಾಗಿರಿಸುವ ಕೆಲಸ ಅತ್ಯಂತ ಯಶಸ್ವಿಯಾಗಿ ಮಾಡಲಾಗುತ್ತಿದೆ. ಅವ್ವ ಸಂತೆ ಉತ್ತಮ ಆಲೋಚನೆ ಎಂದು ತಿಳಿಸಿದರು.
ಈಗ ಅಧಿಕ ಇಳುವರಿ ಸೇರಿ ಇತರ ಕಾರಣಕ್ಕೆ ಭೂಮಿಗೆ ವಿಷವುಣಿಸಲಾಗುತ್ತಿದೆ. ಮಲೆನಾಡು ಪ್ರದೇಶದಲ್ಲೂ ಕೃಷಿ ಸವಾಲಾಗಿದೆ. ಹಿಂದೆ ನಮ್ಮಲ್ಲಿ ಸಮೃದ್ಧ ಭೂಮಿ, ಹೊಸ ಹೊಸ ತಳಿಯ ಭತ್ತಗಳಿದ್ದವು. ಈಗ ಕೃಷಿಯಲ್ಲಿ ವೈವಿಧ್ಯತೆ ದೂರವಾಗಿ ಅಧೋಗತಿಗೆ ಇಳಿದಿದೆ. ಭೂಮಿಗೆ ವಿಷ ಉಣಿಸುವುದನ್ನು ನಿಲ್ಲಿಸಿ ಹಳೆಯ ಭತ್ತದ ತಳಿಗಳನ್ನು ಮುಖ್ಯವಾಹಿನಿಗೆ ತರುವ ಕೆಲಸವಾಗಬೇಕು. ಕೃಷಿಯಲ್ಲಿ ಲಾಭ ಮುಖ್ಯ ಎಂಬ ಚಿಂತನೆಯಲ್ಲಿ ದೇಸಿ ತಳಿಗಳನ್ನೇ ಕಳೆದುಕೊಳ್ಳುತ್ತಿದ್ದೇವೆ. ನೂರಾರು ಭತ್ತದ ತಳಿಗಳು ನಮ್ಮಿಂದ ದೂರವಾಗಿವೆ ಎಂದು ಬೇಸರ ವ್ಯಕ್ತಪಡಿಸಿದರು.
ಪೌರಾಯುಕ್ತ ಎಚ್.ಕೆ.ನಾಗಪ್ಪ ಮಾತನಾಡಿ, ಮಹಿಳೆಯರು ಸ್ವಯಂ ಉದ್ಯೋಗದ ಮೂಲಕ ಉತ್ಪಾದಿಸಿದ ಉತ್ಪನ್ನಗಳಿಗೆ ಮಾರುಕಟ್ಟೆ ಕಲ್ಪಿಸುವ ಜತೆಗೆ ಆತ್ಮಸ್ಥೈರ್ಯ ತುಂಬುವ ಕೆಲಸ ಮಾಡುತ್ತಿರುವುದು ಶ್ಲಾಘನೀಯ ಎಂದು ಹೇಳಿದರು.
ಜೀವನ್ಮುಖಿ ತಂಡದಿಂದ ಚೌಡಿಕೆ ಕುಣಿತ ಹಾಗೂ ಜಾನಪದ ಕಲಾತಂಡದಿಂದ ಜಾನಪದ ಗೀತಗಾಯನ ನಡೆಯಿತು. ರಂಗಕರ್ಮಿ ಜೇಡಿಕುಣಿ ಮಂಜುನಾಥ್ ಅವರನ್ನು ಸನ್ಮಾನಿಸಲಾಯಿತು. ಸ್ನೇಹಸಾಗರ ಸ್ವಸಹಾಯ ಮಂಡಳಿಯ ಚೂಡಾಮಣಿ ರಾಮಚಂದ್ರ, ಪದ್ಮಶ್ರೀ, ಎಂ.ವಿ.ಪ್ರತಿಭಾ, ರಮೇಶ್ ಇತರರಿದ್ದರು.
ಗಮನ ಸೆಳೆದ ಉತ್ಪನ್ನಗಳು: ಅವ್ವ ಸಂತೆಯಲ್ಲಿ ಚರಕದ ವಿವಿಧ ರೀತಿಯ ಬಟ್ಟೆ ಉತ್ಪನ್ನಗಳು ಗಮನ ಸೆಳೆದವು. ಎರಕದ ಕಾವಲಿ, ಅಲಂಕಾರಿಕ ಕುಂಡ, ಸಿರಿಧಾನ್ಯ, ಗಾಣದಲ್ಲಿ ತಯಾರಾದ ಶುದ್ಧ ಶೇಂಗಾ ಮತ್ತು ಕೊಬ್ಬರಿ ಎಣ್ಣೆ, ಗೃಹ ಉತ್ಪನ್ನಗಳು ಅವ್ವ ಸಂತೆಯಲ್ಲಿದ್ದವು. ಸ್ವಯಂ ಉದ್ಯೋಗ ನಡೆಸುವ ಮಹಿಳೆಯರ ಕೌಶಲ ಮತ್ತು ಕಸುಬುಗಾರಿಕೆ ಪರಿಚಯವಾಯಿತು. ಬೇರೆ ಬೇರೆ ಜಿಲ್ಲೆಗಳಿಂದ ಆಗಮಿಸಿದ್ದ ಮಹಿಳೆಯರು ತಾವು ತಯಾರಿಸಿದ ಗೃಹೋತ್ಪನ್ನಗಳನ್ನು ಮಾರಾಟ ಮಾಡಿದರು. ಸಿಕ್ಕಿಂನ ಮಹಿಳೆಯೊಬ್ಬರು ಕೂಡ ಸಂತೆಯಲ್ಲಿ ಪಾಲ್ಗೊಂಡಿದ್ದರು. ಬಿಸಿ ಬಿಸಿ ಆಹಾರ ಪದಾರ್ಥಗಳ ಮಾರಾಟ ಮೇಳ ಕೂಡ ಇತ್ತು. ಗ್ರಾಹಕರು ವಿವಿಧ ವಸ್ತು ಖರೀದಿ ಜತೆಗೆ ಖಾದ್ಯಗಳ ರುಚಿ ಸವಿದರು.