ನ್ಯೂಸ್

ಭಗವಂತನ ಭಕ್ತರ ಲಕ್ಷಣಗಳು

lakshmihegde
ಯಮನೇನೋ ಗಡಬಡಿಸಿ ಬಾಗಿಲಿಗೆ ಬರುತ್ತಾನೆ. ಅಷ್ಟರಲ್ಲಿ ಆ ಹಿಂದೆ ನಚಿಕೇತನಾದರೋ ಮೂರು ರಾತ್ರಿ ಕಾಲ ಯಮದ್ವಾರದಲ್ಲಿ ಅನ್ನಾಹಾರವಿಲ್ಲದೆ ಕಾದಿದ್ದನೆಂದು ಶ್ರುತಿ ಹೇಳುತ್ತದೆ. ಯಮನಿಗೂ, ಭಾಗವತಾಪಚಾರದ ಭೀತಿ ಇದೆಯೆಂದ ಮೇಲೆ ಮಾನವರಾದ ನಾವು ಭಗವದ್ಭಕ್ತರನ್ನು ಹೇಗೆ ಕಾಣಬೇಕೆಂದೂ, ಹೇಗೆ ಭಾಗವತಾಪಚಾರಕ್ಕೆ ಹೆದರಬೇಕೆಂದೂ ಶ್ರುತಿಯು ಮಾರ್ವಿುಕವಾಗಿ ಸೂಚಿಸಿದೆ. ಯಮನು ಇದೇ ರೀತಿಯಲ್ಲಿ ಭಾಗವತಾಪಚಾರಕ್ಕೆ ಹೆದರಿ ನಡುಗಿದ ಮತ್ತೊಂದು ಪ್ರಸಂಗವನ್ನು ಇಲ್ಲಿ ಜ್ಞಾಪಿಸಿಕೊಳ್ಳುವುದೂ ಸಹಾಯಕವಾದೀತು. ಶ್ರೀ ವಿಷ್ಣುಪುರಾಣದ ಮೂರನೇ ಅಂಶದ ಏಳನೇ ಅಧ್ಯಾಯದಲ್ಲಿ ಒಂದು ಆಖ್ಯಾನವಿದೆ. ಹಿಂದೆ ಮೈತ್ರೇಯರು ಶ್ರೀ ಪರಾಶರ ಮಹರ್ಷಿಗಳನ್ನು ಕುರಿತು ಎಂತಹ ಮನುಷ್ಯರು ಯಮವಶವರ್ತಿಗಳೆಂದು ಕೇಳುತ್ತಾರೆ. ಅದಕ್ಕೆ ಇದೇ ಪ್ರಶ್ನೆಯನ್ನು ಹಿಂದೆ ಮಹಾತ್ಮನಾದ ನಕುಲನು ಭೀಷ್ಮರನ್ನು ಕೇಳಿದುದಾಗಿಯೂ ಆಗ ಭೀಷ್ಮರು ಕೊಟ್ಟ ಉತ್ತರವನ್ನೇ ಈಗ ತಾವೂ ಹೇಳುವುದಾಗಿಯೂ ಪರಾಶರರು ಹೇಳಿ ಹೀಗೆ ತಿಳಿಸುತ್ತಾರೆ: ಕಾಳಿಂಗನೆಂಬ ಒಬ್ಬ ಬ್ರಾಹ್ಮಣನು ಭೀಷ್ಮರ ಸ್ನೇಹಿತನಾಗಿದ್ದು ಅವರಿಗೆ ಹೀಗೆ ಹೇಳಿದನಂತೆ: ಇದು ಪರಮ ರಹಸ್ಯ. ಇದನ್ನೇ ಯಮಗೀತೆಯೆಂದೂ, ಯಮಕಿಂಕರ ಸಂವಾದವೆಂದೂ ಕರೆಯುತ್ತಾರೆ.

ಭಾಗವತಾಪಚಾರದ ಅಸಹ್ಯತೆ: ‘‘ಯಮಭಟನು ಕೈಯಲ್ಲಿ ಪಾಶವನ್ನು ಹಿಡಿದು ಮರ್ತ್ಯಲೋಕಕ್ಕೆ ಯಮನ ಆಜ್ಞೆಯಂತೆ ಹೊರಟು ನಿಂತನು. ಆಗ ಯಮನು ಅವನನ್ನು ನೋಡಿ ಅವನ ಕಿವಿಯಲ್ಲಿ ಒಂದು ಗುಟ್ಟನ್ನು ಹೇಳಿದನು. ‘ಮಧುಸೂದನನಾದ ಭಗವಂತನನ್ನು ಪ್ರಪತ್ತಿ ಮಾಡಿದ ಮಹಾಭಾಗವತರನ್ನು ಬಿಟ್ಟುಬಿಡು.’ ಏಕೆಂದರೆ ನಾನು, ಬೇರೆಯವರ ಮಟ್ಟಿಗೆ ಪ್ರಭುವೇ ಹೊರತು ವೈಷ್ಣವರಿಗಲ್ಲ.’’ (ಯಮನು ಭಟನ ಕಿವಿಯಲ್ಲೇ ಈ ಮಾತನ್ನು ಏತಕ್ಕೆ ಹೇಳಿದನು, ಎಂದರೆ ತಾನು ಸರ್ವಪ್ರಭು ಎಂದು ಲೋಕವು ತಿಳಿದಿದೆ. ತನ್ನ ಪ್ರಭಾವ ಎಲ್ಲರ ಮೇಲೂ ಇಲ್ಲ ಎಂದು ತಿಳಿದರೆ, ಲೋಕದಲ್ಲಿ ಕೆಲವರಿಗಾದರೂ ತನ್ನ ಬಗ್ಗೆ ಅಗೌರವ ಉಂಟಾಗಬಹುದು, ಧರ್ಮಭೀತಿ ಕೆಡಬಹುದು ಎಂಬುದು ಒಂದು ಭಾವ! ಅಥವಾ, ಪರಮಭಾಗವತರನ್ನು ನಿರ್ದೇಶಿಸಿ ಮಾತನಾಡಲೂ ಸಹ ಯಮನು ಹೆದರಿ ಹೀಗೆ ಮೆಲ್ಲನೆ ಆಡಿದನೆಂದೂ ಹೇಳಬಹುದು.)

‘‘ನಾನು ಸರ್ವನಿಯಾಮಕನಾದ, ಸರ್ವಲೋಕಧಾರಕನಾದ ಭಗವಂತನಿಂದ ಲೋಕದ ಹಿತಕ್ಕಾಗಿ ಯಮನೆಂಬುದಾಗಿ ನಿಯಮಿಸಲ್ಪಟ್ಟಿರುವೆನಷ್ಟೆ! ಅಂದಮೇಲೆ ನಾನೂ ಆ ಪ್ರಭುವಿನ ಒಬ್ಬ ಭೃತ್ಯನೇ ಹೊರತು ಸ್ವತಂತ್ರನಲ್ಲ. ಶ್ರೀಹರಿಯೇ ನನಗೂ ಗುರು. ಆದ್ದರಿಂದ ಈ ಕೆಳಕಂಡ ಲಕ್ಷಣಗಳನ್ನುಳ್ಳ ಮಹಾಭಾಗವತರನ್ನು ದೂರದಿಂದಲೇ ಕೈ ಮುಗಿದು ಅವರ ಬಳಿಯೂ ಸುಳಿಯದಿರು’’ ಎಂದು ಸುಂದರವಾದ ಹಲವು ಶ್ಲೋಕಗಳಲ್ಲಿ ಭಗವದ್ಭಕ್ತಾಗ್ರೇಸರರ ಲಕ್ಷಣಗಳನ್ನು ಉಪದೇಶಿಸುತ್ತಾನೆ. ಈ ಲಕ್ಷಣಗಳೆಲ್ಲವೂ ನಚಿಕೇತನಲ್ಲಿ ಇರುವುದರಿಂದ ಅವುಗಳನ್ನು ಇಲ್ಲಿ ಅನುಸಂಧಿಸುವುದು ಯೋಗ್ಯವೂ, ಭೋಗ್ಯವೂ ಆಗಿದೆ:

ಭಗವದ್ಭಕ್ತನ ಲಕ್ಷಣಗಳು: ‘‘ಭಗವದ್ಭಕ್ತನು ತನ್ನ ವರ್ಣಧರ್ಮಕ್ಕೆ ಎಳ್ಳಷ್ಟೂ ಲೋಪ ಬಾರದ ಆಚರಣೆಯಲ್ಲಿ ಇದ್ದುಕೊಂಡು ಸ್ನೇಹಿತರಲ್ಲಿಯೂ, ದ್ವೇಷಿಗಳಲ್ಲಿಯೂ ಸಮಮತಿಯಾಗಿರುತ್ತಾನೆ. ಇತರರ ಸ್ವತ್ತನ್ನು ಅಪಹಾರ ಮಾಡಲಾರನು. ಪ್ರಾಣಿಹಿಂಸೆಯಿಂದ ದೂರ ಇರುವನು. ಕಲಿಕಾಲುಷ್ಯಕಾರಣವಾದ ರಾಗದ್ವೇಷಗಳಿಂದ ಅವನ ವಿಮಲಮತಿಯು ಮಲಿನಗೊಳ್ಳುವುದಿಲ್ಲ. ಏಕೆಂದರೆ ಜನಾರ್ದನನನ್ನೇ ಅವನು ಸರ್ವದಾ ಧ್ಯಾನಿಸುತ್ತಾನೆ. ಏಕಾಂತದಲ್ಲಿ ಚಿನ್ನವನ್ನು ಕಂಡರೂ ಅವನಿಗೆ ಅದು ಹುಲ್ಲುಕಡ್ಡಿಗೆ ಸಮ. ಸಮಸ್ತ ಸತ್ವ ರಾಶಿಗಳಿಗೂ ಮಿತ್ರನೂ, ಪ್ರಶಾಂತನೂ, ಶುದ್ಧಚಾರಿತ್ರ್ಯೂ ಮತ್ಸರವಿಲ್ಲದವನೂ, ಪ್ರಿಯಹಿತವಾಕ್ಯಗಳನ್ನೇ ಆಡುವವನೂ, ಮಾಯೆಯನ್ನು ಗೆದ್ದವನೂ ಆದ ಇವನ ಹೃದಯದಲ್ಲಿ ವಾಸುದೇವನು ಸರ್ವದಾ ವಾಸಿಸುವನು.’’ ಇಂಥ ಮಹಾಭಕ್ತನು ಯಮನಿಯಮಾದಿ ಅಷ್ಟಾಂಗ ಸಹಿತವಾದ ಯೋಗಾಸಕ್ತನಾಗಿ ಸರ್ವದಾ ಇರುವನಾದ್ದರಿಂದ ಇವನನ್ನು ಕಂಡು ದೂರದಲ್ಲೇ ಇರುವಂತೆ ಯಮನು ತನ್ನ ಭಟನಿಗೆ ಹೇಳುತ್ತಾನೆ.