ನ್ಯೂಸ್

ಆಂತರಿಕ ಶಾಂತಿಗಾಗಿ ಚಾರ್​ಧಾಮ್​ ಯಾತ್ರೆ

ಉತ್ತರಾಖಂಡ ಹಿಮಾಲಯ ಪರ್ವತದಲ್ಲಿರುವ ಪುಟ್ಟ ರಾಜ್ಯ. ಇಲ್ಲಿನ ತೀರ್ಥಕ್ಷೇತ್ರಗಳು ವಿಶ್ವವಿಖ್ಯಾತಿ. ಚಾರ್​ಧಾಮ್​ ಎಂದೇ ಖ್ಯಾತಿ ಪಡೆದಿರುವ ಕೇದಾರನಾಥ, ಬದರಿನಾಥ, ಗಂಗೋತ್ರಿ ಮತ್ತು ಯಮುನೋತ್ರಿಗೆ ಪ್ರತಿವರ್ಷ ವಿಶ್ವದ ಮೂಲೆ-ಮೂಲೆಗಳಿಂದಲೂ ಹಿಂದೂಗಳು ಮತ್ತು ಇತರರೂ ಆಗಮಿಸುತ್ತಾರೆ. ಮೇ ತಿಂಗಳಲ್ಲಿ ಯಾತ್ರೆ ಆರಂಭ. ಈ ಕುರಿತ ಮಾಹಿತಿ ಇಲ್ಲಿದೆ.

ಚಾರಧಾಮ್​ ಯಾತ್ರೆಯ ಅವಧಿ ಆರು ತಿಂಗಳು. ಸಾಮಾನ್ಯವಾಗಿ ಅಕ್ಷಯತದಿಗೆ ದಿನ ದೇವಾಲಯದ ಬಾಗಿಲು ತೆರೆದರೆ ಅದು ದೀಪಾವಳಿಯ ಬಲಿಪಾಡ್ಯಮಿ ತನಕ ತೆರೆದಿರುತ್ತದೆ (ಪ್ರಾಕೃತಿಕ ಸ್ಥಿತಿಯ ಅನಿವಾರ್ಯತೆ ಹೊರತುಪಡಿಸಿ). ಚಳಿಗಾಲ ಕಾಲಿಡುತ್ತಿದ್ದಂತೆ ದೇವಾಲಯ ಮುಚ್ಚಲ್ಪಡುತ್ತವೆ. ಚಳಿಗಾಲದಲ್ಲಿ ಇವೆಲ್ಲ ಮಂಜುಗಡ್ಡೆಯಿಂದ ಆವರಿಸಿರುತ್ತವೆ. ನೀರ್ಗಲ್ಲ ಪ್ರದೇಶವಾಗಿ ಬದಲಾಗುತ್ತದೆ. ಆಗ ಚಾರ್​ಧಾಮ್​ನಲ್ಲಿರುವ ಜನ ಜೋಷಿಮಠ್​, ಉತ್ತರಕಾಶಿ ಅಥವಾ ರುದ್ರಪ್ರಯಾಗ್​ನಲ್ಲಿರುವ ತಮ್ಮ ಮನೆಗಳಿಗೆ ವಾಪಾಸಾಗುತ್ತಾರೆ. ನಾಲ್ಕೂ ಧಾಮಗಳಲ್ಲಿ ಚಟುವಟಿಕೆ ಬಂದ್​.

ಕೇದಾರನಾಥ: ಇಲ್ಲಿರುವುದು ಜ್ಯೋರ್ತಿಲಿಂಗ. ಗಂಗೋತ್ರಿ ಶ್ರೇಣಿಗೆ ಸೇರುವ ಇದು ಸಮುದ್ರಮಟ್ಟದಿಂದ 22,769 ಅಡಿ ಎತ್ತರದಲ್ಲಿದೆ. ನೇರ ಬಸ್​ ಸಂಪರ್ಕ ಇಲ್ಲ. ದೇವಸ್ಥಾನವಿರುವ ಪರ್ವತದಿಂದ 14 ಕಿ.ಮೀ. ಕೆಳಗೆ ಗೌರಿಕುಂಡ್​ ಎಂಬ ಪ್ರದೇಶವಿದ್ದು, ಅಲ್ಲಿಂದ ಪರ್ವತದ ಕಡಿದಾದ ಕಾಲುದಾರಿಯಲ್ಲಿ ನಡೆದುಕೊಂಡು ಇಲ್ಲವೆ ಡೋಲಿ ಅಥವಾ ಕುದುರೆ ಮೇಲೆ ಸವಾರಿ ಮಾಡಿಕೊಂಡು ಹೋಗಬೇಕು. ಇಲ್ಲಿ ಆಮ್ಲಜನಕದ ಕೊರತೆ ಇರುತ್ತದೆ. ಸುತ್ತಲೂ ನಿರ್ಗಲ್ಲುಗಳಿಂದ ಆವರಿಸಿದ ಪರ್ವತಗಳು. ಈ ಮಂದಿರವು ಪಂಚಪಾಂಡವರಿಂದ ನಿರ್ಮಾಣವಾಗಿದೆ ಎಂದು ಹೇಳುತ್ತಾರೆ. ಏಕೆಂದರೆ ಕುರುೇತ್ರ ಯುದ್ಧದಲ್ಲಿ ಪಾಂಡವರು ಜಯ ಸಾಧಿಸಿದ ನಂತರ& "ನಾವು ನಮ್ಮ ದಾಯಾದಿಗಳನ್ನು ಸಂಹರಿಸಿದೆವು. ಇದರಿಂದ ಪಾಪವುಂಟಾಗಿದೆ' ಎಂದು ತಿಳಿದು ಪಾಪ ಪರಿಹಾರಕ್ಕೆ ಈ ಸ್ಥಳಕ್ಕೆ ಬರುವರು. ಶಿವನನ್ನು ಕುರಿತು ತಪಸ್ಸು ಮಾಡಿದರು. ಆಗ ಶಿವನು ನಂದಿ ರೂಪದಲ್ಲಿ ಪ್ರತ್ಯಕ್ಷನಾದ ಎಂಬುದರ ಪ್ರತಿಕವಾಗಿ ಕೇದಾರೇಶ್ವರನ ಲಿಂಗವನ್ನು ಪ್ರತಿಷ್ಠಾಪನೆ ಮಾಡಿದರು ಎಂಬ ಪ್ರತಿತಿಯಿದೆ. ಪಕ್ಕದಲ್ಲಿ ಮಂದಾಕಿನಿ ನದಿಯ ಉಗಮ ಸ್ಥಾನವಿದೆ. ಈ ಕೇದಾರನಾಥನ ದರ್ಶನ ಮಾಡಿದರೆ ರುದ್ರಲೋಕ ಪ್ರಾಪ್ತಿ ಆಗುವುದು ಎಂಬ ನಂಬಿಕೆಯಿದೆ. ಈ ದೇವಾಲಯದ ಹಿಂದೆ ಗುಹೆ ಇದೆ. ಈ ಗುಹೆ ಒಳಗೆ ಹೋಗಿ ಶ್ರೀ ಶಂಕರಾಚಾರ್ಯರು ಅಂತರ್ಧಾನವಾದರು. ಪ್ರಧಾನಮಂತ್ರಿ ನರೇಂದ್ರ ಮೋದಿ ಕೂಡ ಕೇದಾರನಾಥನ ಗುಹೆಯಲ್ಲಿ ಕೆಲ ಹೊತ್ತು ಧ್ಯಾನಸ್ಥರಾಗಿದ್ದರು.

ಕೇದಾರದಲ್ಲಿ ಭಕ್ತಸಾಗರ!

ಕೇದಾರನಾಥಕ್ಕೆ ಭೇಟಿ ನೀಡುವ ಭಕ್ತಾದಿಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದೆ. ದೇವಸ್ಥಾನದ ಬಾಗಿಲು ತೆರೆಯುವ ಮೊದಲ ದಿನವಾದ ಶುಕ್ರವಾರದಂದು ಬೆಳಗ್ಗೆಯೇ 20 ಸಾವಿರಕ್ಕೂ ಅಧಿಕ ಭಕ್ತಾದಿಗಳು ದರ್ಶನಕ್ಕಾಗಿ ಕಾದು ನಿಂತಿದ್ದರು. ಕೊರೆಯುವ ಚಳಿಯಲ್ಲಿ ಬಯಲಲ್ಲೇ ಗುರುವಾರದ ರಾತ್ರಿಯನ್ನು ಕಳೆದ ಸಾವಿರಾರು ಭಕ್ತರು ಹರ್​ ಹರ್​ ಮಹಾದೇವ್​ ಘೋಷಣೆ ಹಾಕಿದರು. ಭಾರಿ ಚಳಿ ನಡುವೆಯೂ ಅವರ ಉತ್ಸಾದ ಒಂದಿಷ್ಟೂ ಕುಂದಿರಲಿಲ್ಲ. ಪಶ್ಚಿಮ ಬಂಗಾಳ, ಕೇರಳ, ಅಸ್ಸಾಂ, ಕರ್ನಾಟಕ, ಮಹಾರಾಷ್ಟ್ರ, ತಮಿಳುನಾಡಿನ ಭಕ್ತಾದಿಗಳು ಇಲ್ಲಿ ತಲುಪಿದ್ದಾರೆ. ಮುಖ್ಯಮಂತ್ರಿ ಪುಷ್ಕರ್​ ಸಿಂಗ್​ ಧಾಮಿ ಪತ್ನಿಸಮೇತ ಬೆಳಗ್ಗೆ 06 .25 ಕ್ಕೆ ಪೂಜೆ ಸಲ್ಲಿಸಿದ ಬಳಿಕ, ಯಾತ್ರಾರ್ಥಿಗಳಿಗೆ ದೇಗುಲ ದರ್ಶನಕ್ಕೆ ಅವಕಾಶ ಮಾಡಿಕೊಡಲಾಯಿತು. ದೇವಾಲಯವನ್ನು 15 ಸಾವಿರ ಕ್ವಿಂಟಾಲ್​ ಹೂವುಗಳಿಂದ ಅಲಂಕರಿಸ ಲಾಗಿದೆ. ಕರೊನಾ ಕಾರಣದಿಂದ ಕಳೆದ ಎರಡು ವರ್ಷದಿಂದ ಜನರಿಗೆ ದರ್ಶನದ ಅವಕಾಶ ಇರಲಿಲ್ಲ. ದೀಪಾವಳಿ ಹೊತ್ತಲ್ಲಿ ದೇವಾಲಯದ ಬಾಗಿಲು ಮುಚ್ಚುವಾಗ ಹೊತ್ತಿಸಿದ ದೀಪವು ಆರು ತಿಂಗಳವರೆಗೂ ಬೆಳಗುತ್ತಿರುತ್ತದೆ.

ದೇಗುಲ ದರ್ಶನ

ಗಂಗೋತ್ರಿ, ಯಮುನೋತ್ರಿ: ಮೇ 3 ರಿಂದ ಆರಂಭವಾಗಿದೆ.

ಕೇದಾರನಾಥ: ಮೇ 6ರಂದು ಆರಂಭವಾಗಿದೆ.

ಬದರಿನಾಥ: ಮೇ 8 ರಿಂದ ಆರಂಭ

ದೀಪಾವಳಿ ಸಮಯದಲ್ಲಿ ಎಲ್ಲ ದೇವಾಲಯ ದರ್ಶನ ಮುಗಿಯುವುದು.

ಬದರಿನಾಥ

ಸಮುದ್ರ ಮಟ್ಟದಿಂದ 10,800 ಅಡಿ ಎತ್ತರ ದಲ್ಲಿರುವ ಬದರಿಗೆ ನೇರ ಬಸ್​ ಸಂಪರ್ಕ ಇದೆ. ಇಲ್ಲಿ ಬದರಿ ನಾರಾಯಣನ ದೇವಸ್ಥಾನವಿದೆ. ಚೀನಾಗಡಿಗೆ ಹತ್ತಿರವಿರುವ ಬದರಿಗೆ ಸಮೀಪದಲ್ಲಿರುವ ಮಾಣ ಗ್ರಾಮ ಭಾರತದ ಕೊನೆ ಗ್ರಾಮ. ಪ್ರಖ್ಯಾತ ವ್ಯಾಸ ಗುಹೆ ಇರುವುದೂ ಇಲ್ಲೇ. ಬದರಿನಾಥದಲ್ಲಿ ರಾತ್ರಿ ಆರತಿ ವಿಶೇಷ. ಇಲ್ಲಿ ನರ ಹಾಗೂ ನಾರಾಯಣ ಎಂಬ ಬೆಟ್ಟವಿದೆ. ಮುಖ್ಯವಾಗಿ, ವ್ಯಾಸ ಮುನಿಗಳು ತಪಸ್ಸು ಮಾಡಿದ ಗುಹೆಯೂ ಇದೆ. ಇದನ್ನು "ವ್ಯಾಸ ಗುಹೆ' ಎನ್ನುವರು. ಪ್ರಯಾಣಕ್ಕೆ ಕುದುರೆ ಹಾಗೂ ಡೋಲಿ ವ್ಯವಸ್ಥೆ ಇದೆ.

ಯಮುನೋತ್ರಿ

ಮತ್ತೊಂದು ಮಹಾನದಿ ಯುಮನೆಯ ಉಗಮ ಸ್ಥಾನವೇ ಯಮುನೋತ್ರಿ. ಸಮುದ್ರದಿಂದ 10,708 ಅಡಿ ಎತ್ತರದಲ್ಲಿದೆ. ಯುಮುನೆಗೊಂದು ದೇಗುಲವೂ ಇದೆ. ಯಮುನೋತ್ರಿಗೆ ಹೋಗಬೇಕಾದರೆ ಗಂಗೋತ್ರಿಯಿಂದ ಮತ್ತೆ ಹಿಂದೆ ಬಂದು ಉತ್ತರಕಾಶಿಯಿಂದ ಪ್ರಯಾಣ ಮಾಡಬಹುದು. ಉತ್ತರಕಾಶಿಯಿಂದ ಹೊರಟರೆ 120 ಕಿ.ಮೀ. ಸಾಗಿದ ನಂತರ ಹನುಮಾನ್​ ಚಟ್ಟಿ ಎಂಬ ಊರು ಸಿಗುತ್ತದೆ. ಇಲ್ಲಿಂದ 10 ಕಿ.ಮೀ. ದೂರ ಹೋದರೆ "ಜಾನಿಕಿಚಟ್ಟಿ' ಸಿಗುವುದು. ಇಲ್ಲಿಂದ ಮುಂದೆ ಇರುವುದೇ "ಯಮುನೋತ್ರಿ'. ಇಲ್ಲಿ ಬಿಸಿನೀರಿನ ಬುಗ್ಗೆಯೂ ಇದೆ.

ವಿಶಿಷ್ಟ ಅನುಭವ: ಹಿಮಾಲಯ ದಲ್ಲಿರುವ ಚಾರ್​ಧಾಮ್​ಗಳಿಗೆ ತೆರಳಲು ಆರಂಭದ ಬಿಂದು ಹರಿದ್ವಾರ್​. ಇದು ಹೃಷಿಕೇಶ ಪರ್ವತದ ತಪ್ಪಲಿನಲ್ಲಿದೆ. ಇಲ್ಲಿಂದ ಬದರಿ ಅಥವಾ ಕೇದಾರನಾಥ್​ ತಲುಪಲು ಅಗಲ ಕಿರಿದಾದ ರಸ್ತೆಯಲ್ಲಿ 12 ರಿಂದ 14 ಗಂಟೆ ವಾಹನದಲ್ಲಿ ಪ್ರಯಾಣ ಮಾಡಬೇಕು. ಆಳವಾದ ಕಂದಕಗಳು, ಪ್ರಪಾತಗಳು ಭಯ ಹುಟ್ಟಿಸುವಂತಿರುತ್ತವೆ. ಈ ಚಾರ್​ಧಾಮ್​ ಯಾತ್ರೆಯಲ್ಲಿ ಶೈವ ಹಾಗೂ ವೈಷ್ಣವ ಸಂಪ್ರದಾಯಗಳ ಬೆಸುಗೆ ಇದೆ. ಹಿಮಾಲಯದಲ್ಲಿ ಚಾರಣ(ಯಾತ್ರೆ) ಮಾಡುವುದು ಒಂದು ಸಾಹಸದ ಕೆಲಸ. ಕೊರೆಯುವ ಚಳಿ, ಹಿಮ, ಮಳೆ ಇರುವುದರಿಂದ ಕಷ್ಟಕರ. ಚಾರಣ ಮಾಡುವಾಗ ಒಂದೊಂದು ಹೆಜ್ಜೆಯೂ ಕಷ್ಟಕರ. ಶ್ರೀರಾಮಕೃಷ್ಣ ಪರಮಹಂಸರು ಹೇಳಿದಂತೆ& "ನಾವು ಭಗವಂತನ ಕಡೆ ಒಂದು ಹೆಜ್ಜೆಯಿಟ್ಟರೆ ಅವನು ಹತ್ತು ಹೆಜ್ಜೆ ಮುಂದೆ ನಡೆಸುತ್ತಾನೆ'. ಆದರೆ ನಾವು ಭಗವಂತನಲ್ಲಿ ಪೂರ್ಣ ಶರಣಾಗಬೇಕು, ಜೀವನದಲ್ಲಿ ಒಮ್ಮೆಯಾದರೂ ಚಾರ್​ಧಾಮ್​ ಯಾತ್ರೆ ಮಾಡಲೇಬೇಕು.

ಗಂಗೋತ್ರಿ

ಭಾರತದ ಜೀವನದಿ ಪವಿತ್ರ ಗಂಗೆಯ ಉಗಮ ಸ್ಥಾನವೇ ಗಂಗೋತ್ರಿ. ಇದು ಸಮುದ್ರ ಮಟ್ಟದಿಂದ 11,204 ಅಡಿ ಎತ್ತರದಲ್ಲಿದೆ. ಗಂಗೆಯ ದೇವಸ್ಥಾನವೂ ಇಲ್ಲಿದೆ. ಇಲ್ಲಿ ಇದಕ್ಕೆ ಭಾಗೀರಥಿ ಎಂದು ಕರೆಯುತ್ತಾರೆ. ಗಂಗೋತ್ರಿಗೆ ಹರಿದ್ವಾರ&ಋಷಿಕೇಶದ ಮೂಲಕ ಹೋಗಬೇಕು. ಹರಿದ್ವಾರದಿಂದ ಮಿನಿ ಬಸ್ಸು, ಜೀಪು, ಕಾರು, ಇತರ ವಾಹನಗಳು ಹಾಗೂ ವಿಮಾನದ ವ್ಯವಸ್ಥೆ ಇದೆ. ಗಂಗೋತ್ರಿಯಿಂದ ಅಂದರೆ ಬೆಟ್ಟದ ಮೇಲೆ 18 ಕಿ.ಮೀ. ದೂರ ಚಾರಣ ಮಾಡಿದರೆ "ಗೋಮುಖ'. ಈ ಬೆಟ್ಟವು "ಗೋವಿನ ಮುಖ'ದ ರೀತಿಯಲ್ಲಿ ಇರುವುದರಿಂದ ಈ ಹೆಸರು ಬಂದಿದೆ. ಇಲ್ಲಿ ನಾಲ್ಕು ಆಶ್ರಮಗಳಿವೆ. ಗೋಮುಖದಿಂದ 4 ಕಿ.ಮೀ. ದೂರ ಚಾರಣ ಮಾಡಿದರೆ "ತಪೋವನ' ಎಂಬ ಸ್ಥಳ. ಇಲ್ಲಿಯೇ "ಗಂಗಾ' ಉಗಮಸ್ಥಾನ. ಇಲ್ಲಿ ಸಾಧುಗಳು ಧ್ಯಾನ, ಜಪ ಮಾಡಿಕೊಂಡು ಅಧ್ಯಾತ್ಮಿಕ ಸಾಧನೆ ಮಾಡಿಕೊಂಡು ಇರುತ್ತಾರೆ.

ಸಮಾಧಿಸ್ಥಿತಿಯಿಂದ ಜಾಗೃತ...

ಲೋಕಕಲ್ಯಾಣಾರ್ಥ ಧ್ಯಾನಕ್ಕಾಗಿ ಕೇದಾರ (ಈಶ್ವರ) ಆರು ತಿಂಗಳು ಸಮಾಧಿಸ್ಥಿತಿಯಲ್ಲಿ ಇರುತ್ತಾನೆ. ಆ ಹೊತ್ತಲ್ಲಿ ದೇವಸ್ಥಾನದ ಬಾಗಿಲುಗಳನ್ನು ಮುಚ್ಚಲಾಗುತ್ತದೆ. ಸಮಾಧಿಸ್ಥಿತಿಯಿಂದ ಜಾಗೃತವಾಗುವ ದಿನದಂದು (ಸಾಮಾನ್ಯವಾಗಿ ಅಕ್ಷಯ ತೃತೀಯ) ಮತ್ತೆ ದೇವಸ್ಥಾನವನ್ನು ತೆರೆಯಲಾಗುತ್ತದೆ. ಕರ್ನಾಟಕದ ಅರ್ಚಕರೇ ಇಲ್ಲಿ ಪೂಜಾಕೈಂಕರ್ಯ ನಡೆಸುತ್ತಿದ್ದು, ಎಲ್ಲ ವಿಧಿವಿಧಾನ, ಶಿವನಿಗೆ ಆರತಿ ಕನ್ನಡದಲ್ಲೇ ನಡೆಯುತ್ತವೆ. ಸುಶಾಂತ್​ ಸಿಂಗ್​ ರಜಪೂತ್​ ನಟನೆಯ "ಕೇದಾರನಾಥ್​' ಬಾಲಿವುಡ್​ ಚಿತ್ರವು ಕೆಲ ವರ್ಷಗಳ ಹಿಂದೆ ತೆರೆಕಂಡಿತು. ಆ ಬಳಿಕ ಕೇದಾರಕ್ಕೆ ಭೇಟಿ ನೀಡುವ ಯುವಕರ ಸಂಖ್ಯೆ ಹೆಚ್ಚಾಗುತ್ತಿದೆ.

ಪೂರಕ ಮಾಹಿತಿ: ಮಂಡಗದ್ದೆ ಪ್ರಕಾಶ್​ಬಾಬು ಕೆ.ಆರ್​.