ಬೆಟ್ಟದಪುರ: ಪಿರಿಯಾಪಟ್ಟಣ ತಾಲೂಕಿನ ಚಪ್ಪರದಹಳ್ಳಿ ಗ್ರಾಮ ಪಂಚಾಯಿತಿಯ ನೂತನ ಕಟ್ಟಡ ಉದ್ಘಾಟನೆ ಕಾರ್ಯಕ್ರಮ ಜು.22ರ ಮಂಗಳವಾರ ನಡೆಯಲಿದೆ.
ಗ್ರಾಮ ಪಂಚಾಯಿತಿಯ 2023-24ನೇ ಮತ್ತು 2024-25ನೇ ಸಾಲಿನ 15ನೇ ಹಣಕಾಸು ಯೋಜನೆಯ ಮತ್ತು ನಿಧಿ 1ರ ಯೋಜನೆಯಡಿಯಲ್ಲಿ ಸುಮಾರು 42 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಲಾದ ನೂತನ ಗ್ರಾಮ ಪಂಚಾಯಿತಿ ಕಟ್ಟಡವಾಗಿದೆ. ಬೆಳಗ್ಗೆ 10.30ಕ್ಕೆ ಉದ್ಘಾಟನೆ ಕಾರ್ಯಕ್ರಮ ನಡೆಯಲಿದೆ. ಹಾಗಾಗಿ ಪಂಚಾಯಿತಿ ನೂತನ ಕಟ್ಟಡ ಹಾಗೂ ಹಳೆಯ ಪಂಚಾಯಿತಿ ಕಟ್ಟಡಗಳಿಗೆ ವಿದ್ಯುತ್ ದೀಪಾಲಂಕಾರ ಮಾಡಿ, ಹಸಿರು ತಳಿರು-ತೋರಣಗಳಿಂದ ಸಿಂಗರಿಸಲಾಗಿದೆ.
ಕಾರ್ಯಕ್ರಮಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ, ಗ್ರಾಮೀಣಾಭಿವೃದ್ಧಿ ಪಂಚಾಯತ್‌ರಾಜ್ ಮತ್ತು ಐಟಿ-ಬಿಟಿ ಸಚಿವ ಪ್ರಿಯಾಂಕ್ ಖರ್ಗೆ, ಪಶು ಸಂಗೋಪನಾ ಮತ್ತು ರೇಷ್ಮೆ ಸಚಿವ ಕೆ.ವೆಂಕಟೇಶ್, ಮೈಸೂರು-ಕೊಡಗು ಸಂಸದ ಯದುವೀರ್ ಒಡೆಯರ್, ವಿಧಾನ ಪರಿಷತ್ ಸದಸ್ಯರಾದ ಎಚ್.ವಿಶ್ವನಾಥ್, ಡಾ.ಡಿ.ತಿಮ್ಮಯ್ಯ, ಸಿ.ಎನ್. ಮಂಜೇಗೌಡ, ಮಧು ಜಿ.ಮಾದೇಗೌಡ, ಡಾ.ಯತೀಂದ್ರ ಸಿದ್ದರಾಮಯ್ಯ, ಕೆ.ವಿವೇಕಾನಂದ, ಆಶ್ರಯ ಸಮಿತಿ ಹಾಗೂ ಗ್ಯಾರಂಟಿ ಯೋಜನೆ ಸಮಿತಿ ಅಧ್ಯಕ್ಷ ನಿತೀನ್ ವೆಂಕಟೇಶ್, ಜಿಪಂ ಸಿಇಒ ಉಕೇಶ್ ಕುಮಾರ್, ಉಪಕಾರ್ಯದರ್ಶಿ ಡಾ.ಎಂ.ಕೃಷ್ಣರಾಜು, ತಾ.ಪಂ. ಇಒ ಸುನಿಲ್‌ಕುಮಾರ್, ಜನಪ್ರತಿನಿಧಿಗಳು ಮತ್ತು ವಿವಿಧ ಇಲಾಖೆಯ ಅಧಿಕಾರಿಗಳು ಆಗಮಿಸಲಿದ್ದಾರೆ.
ಸಮಾನ ಅಧಿಕಾರ ಹಂಚಿಕೆ: ಕಳೆದ 2020ರಲ್ಲಿ ನಡೆದ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಆಯ್ಕೆಯಾದ ಎಲ್ಲ ಸದಸ್ಯರಿಗೂ ಸಮಾನವಾಗಿ ಅಧಿಕಾರ ಹಂಚಿಕೆ ಮಾಡಿದ ರಾಜ್ಯದಲ್ಲಿಯೇ ವಿಶೇಷ ಗ್ರಾಮ ಪಂಚಾಯಿತಿಯಾಗಿದೆ. ಪ್ರಸ್ತುತ ಅಧ್ಯಕ್ಷರಾಗಿ ಜಯಶ್ರೀ ಸ್ವಾಮಿ, ಉಪಾಧ್ಯಕ್ಷರಾಗಿ ಸುನೀತಾ ಮಂಜು, ಸದಸ್ಯರಾಗಿ ಸಿ.ಕೆ ವೆಂಕಟೇಶ್, ಸಿ.ಪಿ ಸುರೇಶ್, ಎಚ್.ಎಸ್.ದೇವೇಗೌಡ, ಸಿ.ಎಸ್.ಗಣೇಶ್, ಎ.ಸಿ. ಧರಣೇಶ್, ಶಶಿಕಲಾ ಕುಮಾರ್, ಮೀನಾಕ್ಷಿ ಯೋಗೇಶ್, ಪ್ರೇಮಮ್ಮ ಮಲ್ಲೇಶಚಾರಿ, ಸರಸ್ವತಿ ಅರುಣ್, ಶೋಭಾ ರಾಜನಾಯಕ್, ಬಸವರಾಜು, ಮಂಜುಳಾ ಶಿವಣ್ಣ ಅಧಿಕಾರದಲ್ಲಿದ್ದಾರೆ. ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಕೆ.ಕೆ.ಶ್ರೀದೇವಿ, ಕಾರ್ಯದರ್ಶಿ ಎಚ್.ಪಿ ಕುಮಾರ್, ಎಸ್.ಡಿ.ಎ. ಮಂಜುನಾಥ್, ಬಿಲ್ ಕಲೆಕ್ಟರ್ ರಮಣಯ್ಯ, ಕ್ಲರ್ಕ್ ಮಹೇಂದ್ರ ಸೇರಿದಂತೆ ಒಟ್ಟು 12 ಸಿಬ್ಬಂದಿ ಕೆಲಸ ನಿರ್ವಹಿಸುತ್ತಿದ್ದಾರೆ.
ದಶಕಗಳ ಇತಿಹಾಸ: ಸುಮಾರು 1987ರ ಹಿಂದೆ ಈ ಭಾಗದಲ್ಲಿ ಗ್ರೂಪ್ ಪಂಚಾಯಿತಿಯಾಗಿ ಆರಂಭವಾದ ಚಪ್ಪರದಹಳ್ಳಿ ಪಂಚಾಯಿತಿಯೂ, 1987ರಲ್ಲಿ ಸುಮಾರು 34 ಹಳ್ಳಿಗಳನ್ನು ಒಳಗೊಂಡು ಮಂಡಲ ಪಂಚಾಯಿತಿಯಾಗಿತ್ತು. ಬಳಿಕ 1987ರಿಂದ 1994ರಲ್ಲಿ ಮಂಡಲ ಪಂಚಾಯಿತಿಯಿಂದ ಸಮೀಪದ ಚಿಕ್ಕನೇರಳೆ ಮತ್ತು ಹಲಗನಹಳ್ಳಿ ಎರಡು ಪಂಚಾಯಿತಿಗಳು ವಿಂಗಡಣೆಯಾದವು. ಇದಾದ ಬಳಿಕ 2015ರಲ್ಲಿ ಸಮೀಪದ ಹಾರನಹಳ್ಳಿ ಗ್ರಾಮದಲ್ಲಿ ನೂತನ ಗ್ರಾಮ ಪಂಚಾಯಿತಿ ಆರಂಭವಾದ ಹಿನ್ನೆಲೆ ಅಲ್ಲಿಂದ ಗ್ರಾಮ ಪಂಚಾಯಿತಿಯಾಗಿ ಏಳು ಗ್ರಾಮಗಳನ್ನು ಒಳಗೊಂಡು ಕರ್ತವ್ಯ ನಿರ್ವಹಿಸುತ್ತಿದೆ.
ನರೇಗಾ ಯೋಜನೆ ಹಾಗೂ ವಿವಿಧ ಯೋಜನೆಯ ಮೂಲಕ ಅಭಿವೃದ್ಧಿ ಕೆಲಸಗಳಾಗಿದ್ದು, ಘನತ್ಯಾಜ್ಯ ವಿಲೇವಾರಿ ಘಟಕ, ಎಸ್.ಬಿ.ಎಂ.ಜಿ ಯೋಜನೆಯಡಿ ಶೌಚಗೃಹ ನಿರ್ಮಾಣ, ಕೆರೆ ಅಭಿವೃದ್ಧಿ, ರಸ್ತೆ ನಿರ್ಮಾಣ, ಅಂಗನವಾಡಿಗಳಿಗೆ ಆಟಿಕೆ ಸಾಮಾನುಗಳ ವಿತರಣೆ ಸೇರಿದಂತೆ ಹಲವು ಅಭಿವೃದ್ಧಿ ಕೆಲಸಗಳು ಆಗಿವೆ. ಇದಲ್ಲದೆ ಡಿಜಿಟಲ್ ಗ್ರಂಥಾಲಯವನ್ನು ಹೊಂದುವ ಮೂಲಕ ವಿಶೇಷ ಗ್ರಾಮ ಪಂಚಾಯಿತಿಯಾಗಿದೆ.