ಅಧಿಕಾರಿಗಳು ಹಾಗೂ ಸಮುದಾಯಗಳ ಮುಖಂಡರ ಗೈರಿನ ಹಿನ್ನೆಲೆಯಲ್ಲಿ ಶುಕ್ರವಾರ ತಾಲೂಕು ರಾಷ್ಟ್ರೀಯ ಹಬ್ಬಗಳ ಸಮಿತಿ ವತಿಯಿಂದ ಕರೆಯಲಾಗಿದ್ದ ನಾಡಪ್ರಭು ಕೆಂಪೇಗೌಡರ ಜಯಂತಿ ಪೂರ್ವಭಾವಿ ಸಭೆಯನ್ನು ಮುಂದೂಡಲಾಯಿತು.
ನಗರದ ತಾಲೂಕು ಸಭಾಂಗಣದಲ್ಲಿ ತಹಸೀಲ್ದಾರ್ ಮಹೇಂದ್ರ ಅಧ್ಯಕ್ಷತೆಯಲ್ಲಿ ಕೆಂಪೇಗೌಡ ಜಯಂತಿ ಕಾರ್ಯಕ್ರಮ ನಡೆಸುವ ಬಗ್ಗೆ ಪೂರ್ವಭಾವಿ ಸಭೆ ಕರೆಯಲಾಗಿತ್ತು. ಆದರೆ, ಸಭೆಯಲ್ಲಿ ಬೆರಣಿಕೆಯಷ್ಟು ಮಂದಿ ಮಾತ್ರ ಭಾಗವಹಿಸಿದ್ದರು. ಕ್ಷೇತ್ರ ಶಿಕ್ಷಣಾಧಿಕಾರಿ ಹೊರತುಪಡಿಸಿ, ಉಳಿದ ಎಲ್ಲಾ ಇಲಾಖೆಗಳ ಮುಖ್ಯಸ್ಥರು ಸಹ ಸಭೆಯಿಂದ ದೂರ ಉಳಿದಿದ್ದರು. ಈ ಕಾರಣದಿಂದ ಪೂರ್ವಭಾವಿ ಸಭೆಯ ಬಗ್ಗೆ ಅಸಮಾಧಾನ ವ್ಯಕ್ತವಾಯಿತು.
ಸಭೆಯ ಆರಂಭದಲ್ಲೇ ಸಭೆಯ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಕಾಂಗ್ರೆಸ್ ಮುಖಂಡ ಪಿ.ಡಿ.ರಾಜು, ಇದೊಂದು ಕಾಟಾಚಾರದ ಸಭೆ. ಸಭೆಯಲ್ಲಿ ಕೇವಲ ಮೂರುಮಂದಿ ಸಾರ್ವಜನಿಕರು ಮಾತ್ರ ಭಾಗವಹಿಸಿದ್ದೇವೆ. ಕೊನೆಪಕ್ಷ ಅಧಿಕಾರಿಗಳು ಕೂಡ ಸಭೆಗೆ ಬಂದಿಲ್ಲ. ಈ ಪೂರ್ವಭಾವಿ ಸಭೆಯ ಉದ್ದೇಶವೇನು? ಜಯಂತಿಯ ಬಗ್ಗೆ ಅಸಡ್ಡೆವಹಿಸುವುದು ಸರಿ ಅಲ್ಲ. ದಂಡಾಧಿಕಾರಿಗಳು ಗೈರಾಗಿರುವ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು. ಇದರೊಂದಿಗೆ ಈ ಸಭೆಯನ್ನು ರದ್ದುಪಡಿಸಿ, ಎಲ್ಲರನ್ನು ಕರೆದು ಮತ್ತೊಂದು ಸಭೆ ನಡೆಸಿ ಎಂದು ಆಗ್ರಹಿಸಿದರು. ಇದಕ್ಕೆ ನಗರಸಭೆ ಸದಸ್ಯ ಸತೀಶ್ ಬಾಬು, ರಾಜ್ಯ ಎಸ್ ಡಿಎಂಸಿ ಸಮನ್ವಯ ವೇದಿಕೆ ರಾಜ್ಯ ಉಪಾಧ್ಯಕ್ಷ ನಾಗವಾರ ಶಂಭೂಗೌಡ ಸೇರಿದಂತೆ ಕೆಲ ಪತ್ರಕರ್ತರು ಧ್ವನಿ ಗೂಡಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ತಹಸೀಲ್ದಾರ್ ಮಹೇಂದ್ರ, ಜಯಂತಿಗಳನ್ನು ಅರ್ಥಪೂರ್ಣವಾಗಿ ಆಚರಿಸುವುದು ತಾಲೂಕು ಆಡಳಿತದ ಜವಾಬ್ದಾರಿ. ಜಯಂತಿಗಳ ಯಶಸ್ವಿಗೆ ಸರ್ವರ ಸಹಕಾರ ಅಗತ್ಯ. ಪೂರ್ವಭಾವಿ ಸಭೆಯ ಬಗ್ಗೆ ಎಲ್ಲರಿಗೂ ಮಾಹಿತಿ ನೀಡಲಾಗಿತ್ತು. ಆದರೆ, ಸಭೆಗೆ ಹೆಚ್ಚಿನ ಮಂದಿ ಬಂದಿಲ್ಲ. ನಿಮ್ಮಗಳ ಸಲಹೆ, ಅಭಿಪ್ರಾಯವನ್ನು ಸ್ವೀಕರಿಸಲು ಸಿದ್ದವಿದ್ದು, ಮತ್ತೊಂದು ಪೂರ್ವಭಾವಿ ಸಭೆ ನಡೆಸಲಾಗುವುದು ಎಂದು ಭರವಸೆ ನೀಡಿದರು.
ನಾಡಪ್ರಭು ಕೆಂಪೇಗೌಡರ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸುವ ಉದ್ದೇಶದಿಂದ ಸೋಮವಾರ ಸಂಜೆ 4 ಗಂಟೆಗೆ ಕಚೇರಿಯ ಸಭಾಂಗಣದಲ್ಲಿ ಮತ್ತೊಂದು ಪೂರ್ವಭಾವಿ ಸಭೆ ನಡೆಸಲಾಗುವುದು. ಈ ಸಭೆಗೆ ತಾಲೂಕಿನ ಎಲ್ಲಾ ಇಲಾಖೆಗಳ ಅಧಿಕಾರಿಗಳು ಭಾಗವಹಿಸುವಂತೆ ನೋಟೀಸ್ ನೀಡಲಾಗುವುದು. ಈ ಸಭೆಗೆ ತಾಲೂಕಿನ ಎಲ್ಲಾ ಸಮುದಾಯದ ಮುಖಂಡರು, ವಿವಿಧ ಸಂಘಸಂಸ್ಥೆಗಳ ಪದಾಧಿಕಾರಿಗಳು ಹಾಗೂ ಸಾರ್ವಜನಿಕ ಆಗಮಿಸಿ ಸಲಹೆ, ಸಹಕಾರ ನೀಡುವಂತೆ ತಹಸೀಲ್ದಾರ್ ಮನವಿ ಮಾಡಿದರು.
ಸಭೆಯಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಮರೀಗೌಡ, ಉಪ ತಹಸೀಲ್ದಾರ್ ಸೋಮೇಶ್, ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಚಂದ್ರಶೇಖರ್, ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ರಾಮಣ್ಣ ಸೇರಿದಂತೆ ಕೆಲವರು ಇದ್ದರು.