ನ್ಯೂಸ್

3 ವರ್ಷಗಳಲ್ಲಿ ಬೆಂಗಳೂರು ಸೌತ್​, ಚನ್ನಪಟ್ಟಣ ಕ್ಷೇತ್ರದ ಚಿತ್ರಣ ಬದಲು: DK ಶಿವಕುಮಾರ್ ಭರವಸೆ

ಚನ್ನಪಟ್ಟಣ: ಮತದಾರರು ಈ ಜಿಲ್ಲೆಯಲ್ಲಿ ನಾಲ್ಕು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಶಾಸಕರನ್ನು ಆಯ್ಕೆ ಮಾಡಿ ಸರ್ಕಾರಕ್ಕೆ ಶಕ್ತಿ ನೀಡಿದ್ದು, ಮುಂದಿನ ಮೂರು ವರ್ಷಗಳಲ್ಲಿ ಎಲ್ಲಾ ನಾಯಕರು ಸೇರಿ ಚನ್ನಪಟ್ಟಣ ಹಾಗೂ ಇಡೀ ಜಿಲ್ಲೆಯ ಚಿತ್ರಣ ಬದಲಿಸುತ್ತೇವೆ ಎಂದು ಡಿಸಿಎಂ DK ಶಿವಕುಮಾರ್ ತಿಳಿಸಿದರು.

ಚನ್ನಪಟ್ಟಣದಲ್ಲಿ ನಡೆದ "ಕೃತಜ್ಞತಾ ಸಮಾವೇಶ"ದಲ್ಲಿ ಭಾನುವಾರ ಮಾತನಾಡಿದರು. ಈ ಚುನಾವಣೆಯಲ್ಲಿ ಹಗಲು ರಾತ್ರಿ ಶ್ರಮಿಸಿದ ಎಲ್ಲಾ ನಾಯಕರು, ಮಂತ್ರಿಗಳು, ಕಾರ್ಯಕರ್ತರಿಗೆ ಅಭಿನಂದನೆ ಸಲ್ಲಿಸುತ್ತೇನೆ. ನೀವು ಅಭಿವೃದ್ಧಿಗೆ ಮತ ಕೊಟ್ಟಿದ್ದೀರಿ. ನಾನು 1989ರಿಂದ ಈ ಜಿಲ್ಲೆಯ ಶಾಸಕನಾಗಿ ಕೆಲಸ ಮಾಡುತ್ತಿದ್ದೇನೆ. ಜಿಲ್ಲೆಯಲ್ಲಿ ಮೊದಲ ಬಾರಿಗೆ ಕಾಂಗ್ರೆಸ್ ಪಕ್ಷಕ್ಕೆ ನಾಲ್ಕು ಸ್ಥಾನಗಳನ್ನು ಗೆಲ್ಲಿಸಿದ್ದೀರಿ ಎಂದರು.

ನಮ್ಮನ್ನು ಟೀಕಿಸಿದವರಿಗೆ ತಟ್ಟೆ ಮರೆ ಏಟಿನ ಉತ್ತರ

ನಾನು ಯಾರನ್ನೂ ಟೀಕಿಸುವ ಅಗತ್ಯವಿಲ್ಲ. ನಮ್ಮನ್ನು ಅಪೂರ್ವ ಸಹೋದರರು ಎಂದವರು, ನಮ್ಮ ಬಗ್ಗೆ ತುಚ್ಛವಾಗಿ ಮಾತನಾಡಿದ ದೇವೇಗೌಡರು, ಕುಮಾರಸ್ವಾಮಿ, ಯಡಿಯೂರಪ್ಪ ಸೇರಿದಂತೆ ಬಿಜೆಪಿ ಹಾಗೂ ದಳದ ಎಲ್ಲ ನಾಯಕರಿಗೆ ನಿಮ್ಮ ತಟ್ಟೆ ಮರೆ ಏಟು ಉತ್ತರವಾಗಿದೆ. ನೀವು ಕೇವಲ ಚನ್ನಪಟ್ಟಣಕ್ಕೆ ಮಾತ್ರ ಉತ್ತರ ನೀಡಿಲ್ಲ, ಇಡೀ ದೇಶಕ್ಕೆ ಸಂದೇಶ ರವಾನಿಸಿದ್ದೀರಿ. ನಮ್ಮ ಅಧಿಕಾರ ನಶ್ವರ, ನಾವು ಮಾಡುವ ಸಾಧನೆ ಅಜರಾಮರ, ಮತದಾರರೇ ಈಶ್ವರ ಎಂದು ಹೇಳಿದರು.

ನಾನು ಮುಂದಿನ ಒಂದು ವಾರದಲ್ಲಿ ಮತ್ತೆ ಕ್ಷೇತ್ರಕ್ಕೆ ಬಂದು ಕೊಟ್ಟ ಮಾತು ಈಡೇರಿಸುವ ಕೆಲಸದ ಬಗ್ಗೆ ಪರಿಶೀಲನೆ ಮಾಡುತ್ತೇನೆ. ಚುನಾವಣೆ ಸಮಯದಲ್ಲಿ ನಾನು ಕುಮಾರಸ್ವಾಮಿ ಅವರಿಗೆ ಪ್ರಶ್ನೆ ಮಾಡಿದೆ. ನೀವು ಶಾಸಕರಾಗಿ ಮುಖ್ಯಮಂತ್ರಿಯಾಗಿ ಯಾವ ಸಾಧನೆ ಮಾಡಿದ್ದೀರಿ ಎಂದು. ಯೋಗೇಶ್ವರ್ ಅವರು ಅನೇಕ ದೇವಾಲಯ ಕಟ್ಟಿಸಿದ್ದಾರೆ, ನೀವು ಯಾವ ದೇವಾಲಯ ಕಟ್ಟಿದ್ದೀರಿ, ಶಾಲೆಗಾಗಿ ನೀವು 2 ಎಕರೆ ಜಮೀನು ದಾನ ಮಾಡಿದ್ದೀರಾ ಎಂದು ಸವಾಲು ಹಾಕಿದ್ದೆ. ನನ್ನ ಪ್ರಶ್ನೆಗೆ ಅವರಿಂದ ಉತ್ತರ ಬರಲಿಲ್ಲ ಎಂದರು.

ಸುರೇಶ್ ಸವಾಲನ್ನು ನಾಲ್ಕು ಶಾಸಕರು ಸ್ವೀಕರಿಸುತ್ತೇವೆ

ಈಗ ನಮ್ಮ ಮೇಲೆ ಜವಾಬ್ದಾರಿ ಹೆಚ್ಚಾಗಿದೆ. ಈ ಕಾರ್ಯಕ್ರಮದ ಉದ್ಘಾಟನೆ ಸಮಯದಲ್ಲಿ ನಾವು ಜ್ಯೋತಿ ಬೆಳಗುವಾಗ, ನೀವು ನಾಲ್ಕು ಜನ ಶಾಸಕರು ಸೇರಿ ಏನು ಸಾಧನೆ ಮಾಡುತ್ತೀರಿ ನೋಡುತ್ತೇವೆ ಎಂದು ಸುರೇಶ್ ಸವಾಲು ಹಾಕಿದ್ದಾರೆ. ನಾವೆಲ್ಲರೂ ಶಾಸಕರು ಸೇರಿ ಈ ಸವಾಲು ಸ್ವೀಕರಿಸಬೇಕು ಎಂದರು.

ಚನ್ನಪಟ್ಟಣದ ಮತದಾರರಿಗೆ ಮಂಕು ಬೂದಿ ಎರಚಲು ಸಾಧ್ಯವಿಲ್ಲ ಎಂಬುದನ್ನು ತೋರಿಸಿದ್ದೀರಿ. ನಮ್ಮ ಮೇಲೆ ಹಾಗೂ ಗ್ಯಾರಂಟಿ ಯೋಜನೆಗೆ ಮತ ನೀಡಿದ್ದೀರಿ. ಈ ಕ್ಷೇತ್ರಕ್ಕೆ ಈಗಾಗಲೇ 600 ಕೋಟಿ ರೂಪಾಯಿ ಅನುದಾನ ತಂದು ಕೆಲಸ ಆರಂಭಿಸಿದ್ದೇವೆ. ಚುನಾವಣೆಗೆ ಬಂದಾಗ ಅಭಿವೃದ್ಧಿ ಬೇಕೋ, ಕಣ್ಣೀರು ಬೇಕೋ ನಿರ್ಧಾರ ಮಾಡಿ ಎಂದು ನಿಮ್ಮ ಹತ್ತಿರ ಮನವಿ ಮಾಡಿದ್ದೆ. ನೀವು ಅಭಿವೃದ್ಧಿಯನ್ನೇ ಆಯ್ಕೆ ಮಾಡಿದ್ದೀರಿ ಎಂದರು.