ನ್ಯೂಸ್

ಸಕಾಲದಲ್ಲಿ ಚಿಕಿತ್ಸೆ ಸಿಗದೆ ಪೊಲೀಸ್ ಪ್ರಶಿಕ್ಷಣಾರ್ಥಿ ಸಾವು: ಚನ್ನಪಟ್ಟಣದ ಪಿಟಿಎಸ್‌ನಲ್ಲಿ ತರಬೇತಿ ಪಡೆಯುತ್ತಿದ್ದ ಯಲ್ಲಪ್ಪ

Ramanagara

ಚನ್ನಪಟ್ಟಣ : ತರಬೇತಿ ವೇಳೆ ಕುಸಿದುಬಿದ್ದ ಪೊಲೀಸ್ ಪೇದೆಗೆ ಸಕಾಲದಲ್ಲಿ ಚಿಕಿತ್ಸೆ ದೊರೆಯದೆ ಬುಧವಾರ ಮೃತಪಟ್ಟಿದ್ದಾರೆ. ಗದಗ ಜಿಲ್ಲೆಯ ನರಗುಂದ ತಾಲೂಕಿನ ಮೂಗನೂರ ಗ್ರಾಮದ ಯಲ್ಲಪ್ಪ ಫ. ಕಿಳ್ಳಿಕ್ಯಾತರ (36) ಮೃತ.

ತಾಲೂಕಿನ ವಂದಾರಗುಪ್ಪೆ ಬಳಿ ಇರುವ ಪೊಲೀಸ್ ತರಬೇತಿ ಶಾಲೆಯಲ್ಲಿ (ಪಿಟಿಎಸ್) ಬುಧವಾರ ಬೆಳಗ್ಗೆ ತರಬೇತಿ ನಿರತರಾಗಿದ್ದ ವೇಳೆ ಅಸ್ವಸ್ಥಗೊಂಡು ಮೃತಪಟ್ಟಿದ್ದಾರೆ. ಸೈನಿಕನಾಗಿ ನಿವೃತ್ತಿಗೊಂಡಿದ್ದ ಯಲ್ಲಪ್ಪ ನಂತರ ಪೊಲೀಸ್ ಇಲಾಖೆಯಲ್ಲಿ ಪೇದೆಯಾಗಿದ್ದರು. ಕಳೆದ ಎರಡೂವರೆ ತಿಂಗಳಿಂದ ಪಿಟಿಎಸ್‌ನಲ್ಲಿ ಪ್ರಶಿಕ್ಷಣಾರ್ಥಿಯಾಗಿ ತರಬೇತಿ ಪಡೆಯುತ್ತಿದ್ದರು.

ಬುಧವಾರ ಬೆಳಗ್ಗೆ ತರಬೇತಿ ವೇಳೆ ದಿಢೀರ್ ಕುಸಿದು ಬಿದ್ದಿದ್ದರು. ಅಸ್ವಸ್ಥಗೊಂಡ ಇವರನ್ನು ಆಸ್ಪತ್ರೆಗೆ ಒಯ್ಯದೆ ಕೊಠಡಿಗೆ ಕರೆದುಕೊಂಡು ಬಿಡಲಾಗಿದೆ. ಮಧ್ಯಾಹ್ನದ ನಂತರ, ತೀವ್ರ ಅಸ್ವಸ್ಥಗೊಂಡಾಗ ಆಸ್ಪತ್ರೆಗೆ ರವಾನಿಸಲಾಗಿದೆ. ಚಿಕಿತ್ಸೆ ಫಲಕಾರಿಯಾಗದೆ ಬುಧವಾರ ರಾತ್ರಿ ಬೆಂಗಳೂರಿನ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.

ಯಲ್ಲಪ್ಪ ಸಾವಿಗೆ ತರಬೇತಿ ಕೇಂದ್ರದ ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣ ಎಂದು ಆರೋಪಿಸಿ ಪಿಟಿಎಸ್ ಎಸ್‌ಪಿ ಕಚೇರಿ ಮುಂಭಾಗ ಉಳಿದ ಪೇದೆಗಳು ಪ್ರತಿಭಟನೆ ನಡೆಸಿದರು. ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು. ಮೃತನ ಕುಟುಂಬಕ್ಕೆ ನ್ಯಾಯ ಒದಗಿಸಬೇಕು ಎಂದು ಆಗ್ರಹಿಸಿದರು.

ಡಿವೈಎಸ್‌ಪಿ ಕೆ.ಎನ್.ರಮೇಶ್, ಗ್ರಾಮಾಂತರ ಸಿಪಿಐ ಬಿ.ಶಿವಕುಮಾರ್, ಪಿಎಸ್‌ಐ ಸದಾನಂದ ಸೇರಿ ಹಲವು ಅಧಿಕಾರಿಗಳು ಇದ್ದರು. ಪ್ರತಿಭಟನೆಯಲ್ಲಿ ಮಾಜಿ ಸೈನಿಕರ ಸಂಘದ ಉಪಾಧ್ಯಕ್ಷ ಕುಮಾರಸ್ವಾಮಿ, ಮೈಸೂರು ಘಟಕದ ಜಿಲ್ಲಾಧ್ಯಕ್ಷ ದಿವಾಕರ್, ರಾಮನಗರ ಘಟಕದ ಜಿಲ್ಲಾಧ್ಯಕ್ಷ ಶ್ರೀಧರ್, ಮಂಡ್ಯ ಜಿಲ್ಲಾಧ್ಯಕ್ಷ ಮಲ್ಲರಾಜು, ವೀರ್ ನಾರೀಸ್ ಘಟಕದ ರಾಜ್ಯಾಧ್ಯಕ್ಷೆ ರಜನಿ ಸುಬ್ಬಯ್ಯ, ರೈತಸಂಘದ ಜಿಲ್ಲಾಧ್ಯಕ್ಷ ಅಣಿಗೆರೆ ಮಲ್ಲಯ್ಯ, ರೈತಮುಖಂಡ ಕನ್ನಸಂದ್ರ ರಾಜು ಮತ್ತಿತರರು ಇದ್ದರು.

ಇತರ ಪ್ರಶಿಕ್ಷಣಾರ್ಥಿಗಳ ಮಾಹಿತಿ ಪ್ರಕಾರ ಅನಾರೋಗ್ಯದ ಬಗ್ಗೆ ಯಲ್ಲಪ್ಪ ಅಧಿಕಾರಿಗಳ ಗಮನಕ್ಕೆ ತಂದಿದ್ದಾರೆ. ಅಲ್ಲದೆ ಕಳೆದ ಭಾನುವಾರ ಮೃತನ ಕುಟುಂಬದವರು ಭೇಟಿ ಮಾಡಲು ಆಗಮಿಸಿದ್ದರೂ ಅವಕಾಶ ನೀಡಿಲ್ಲ. ತರಬೇತಿ ಶಾಲೆಯಲ್ಲಿ ಹಲವು ಅಕ್ರಮಗಳು ನಡೆಯುತ್ತಿದ್ದು, ಮೃತನ ಸಾವಿಗೆ ಅಧಿಕಾರಿಗಳೇ ನೇರ ಕಾರಣವಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಯಲ್ಲಪ್ಪ ಸಾವಿನ ಬಗ್ಗೆ ಸಮಗ್ರ ತನಿಖೆ ಮಾಡಬೇಕು ಎಂದು ಒತ್ತಾಯಿಸಿದರು. ನಂತರ ಪಿಟಿಎಸ್ ಎಸ್‌ಪಿ ಶೈಲೇಂದ್ರ ಕುಮಾರ್ ಅವರಿಗೆ ಮನವಿ ಸಲ್ಲಿಸಿದರು.

ಮಾಜಿ ಸೈನಿಕರಿಂದಲೂ ತನಿಖೆಗೆ ಒತ್ತಾಯ :  ಮಾಜಿ ಸೈನಿಕ ಹಾಗೂ ಪೇದೆ ಯಲ್ಲಪ್ಪ ಸಾವಿಗೆ ಕಾರಣವಾದವರ ವಿರುದ್ಧ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿ ಗುರುವಾರ ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘದ ವತಿಯಿಂದ ಪಿಟಿಎಸ್ ಎದುರು ಪ್ರತಿಭಟನೆ ನಡೆಸಲಾಯಿತು. ಈ ವೇಳೆ ಮಾತನಾಡಿದ ಸಂಘದ ಅಧ್ಯಕ್ಷ ಡಾ.ಎನ್.ಕೆ. ಶಿವಣ್ಣ, ಅನಾರೋಗ್ಯಕ್ಕೆ ಒಳಗಾಗಿದ್ದ ಯಲ್ಲಪ್ಪಗೆ ಸೂಕ್ತ ಚಿಕಿತ್ಸೆ ಕೊಡಿಸದೆ ನಿರ್ಲಕ್ಷ್ಯ ವಹಿಸಿದ ಅಧಿಕಾರಿಗಳನ್ನು ತಕ್ಷಣ ಅಮಾನತು ಮಾಡಬೇಕು. ಆರೋಗ್ಯ ಸರಿಯಿಲ್ಲದ ಮೇಲೂ ಸಂಬಂಧಪಟ್ಟವರು ಚಿಕಿತ್ಸೆ ಕೊಡಿಸಿಲ್ಲ. ತರಬೇತಿ ಹೆಸರಿನಲ್ಲಿ ಸಾಕಷ್ಟು ಮಾನಸಿಕ ಹಿಂಸೆ ನೀಡಲಾಗುತ್ತಿದೆ. ಪಿಟಿಎಸ್‌ನಲ್ಲಿ 70ಕ್ಕೂ ಹೆಚ್ಚು ಮಾಜಿ ಸೈನಿಕರು ತರಬೇತಿ ಪಡೆಯುತ್ತಿದ್ದಾರೆ. ತರಬೇತಿ ಪಡೆಯುತ್ತಿರುವ ಪ್ರತಿಯೊಬ್ಬರ ಮೇಲೂ ಸಂಬಂಧಪಟ್ಟವರಿಗೆ ಕಾಳಜಿ ಎಲ್ಲ ಎಂದು ಆರೋಪಿಸಿದರು.