ನ್ಯೂಸ್

ಸಿಎಂ ಬದಲಾವಣೆ ಪ್ರಶ್ನೆಯೇ ಉದ್ಭವಿಸಿಲ್ಲ: ಡಿಸಿಎಂ ಡಾ. ಸಿ.ಎನ್. ಅಶ್ವತ್ಥನಾರಾಯಣ ಸ್ಪಷ್ಟನೆ

Ramanagara

ಮಾಗಡಿ : ಮುಖ್ಯಮಂತ್ರಿ ಬದಲಾವಣೆಯ ಪ್ರಶ್ನೆಯೇ ಉದ್ಭವವಾಗಿಲ್ಲ ಎಂದು ಉಪಮುಖ್ಯಮಂತ್ರಿ ಡಾ. ಸಿ.ಎನ್. ಅಶ್ವತ್ಥನಾರಾಯಣ ಸ್ಪಷ್ಟಪಡಿಸಿದರು.ಪಟ್ಟಣದ ಸಾರ್ವಜನಿಕ ಸರ್ಕಾರಿ ಆಸ್ಪತ್ರೆ ಬಳಿ ಜಿಲ್ಲೆಯ ಮೊದಲ ಕಂಟೈನರ್ ಐಸಿಯು ಘಟಕವನ್ನು ಗುರುವಾರ ಲೋಕಾರ್ಪಣೆ ಮಾಡಿ ಮಾತನಾಡಿದ ಅವರು, ಮೂರು ಪಕ್ಷದವರು ಸಮುದ್ರಕ್ಕೆ ಬಂದು ಸೇರಿಕೊಂಡು ಒಗ್ಗಟ್ಟಾಗಿರುವಾಗ ಮುಖ್ಯಮಂತ್ರಿಗಳ ಬದಲಾವಣೆ ಬಗ್ಗೆ ಯಾವುದೇ ಚರ್ಚೆ, ಪ್ರಶ್ನೆಯೆ ಇಲ್ಲ ಎಂದು ಬದಲಾವಣೆಗೆ ಪ್ರಯತ್ನಿಸುತ್ತಿರುವವರಿಗೆ ಪರೋಕ್ಷವಾಗಿ ಟಾಂಗ್ ನೀಡಿದರು.

ಜಿಲ್ಲೆಯ ಪ್ರತಿಯೊಂದು ಮನೆಗಳ ಬಳಿ ತೆರಳಿ ಸೋಂಕಿತರನ್ನು ಪತ್ತೆ ಹಚ್ಚಿ ಬಾರ್ ಕೊಡ್ ಮಾಡಲಾಗಿದೆ. ಇದು ರಾಜ್ಯದ ಯಾವುದೇ ಜಿಲ್ಲೆಗಳಲ್ಲೂ ನಡೆದಿಲ್ಲ. ಆರೋಗ್ಯ ಇಲಾಖೆ ಉತ್ತಮವಾಗಿ ನಿರ್ವಹಿಸಿದೆ. ಹೋಮ್ ಐಸೋಲೇಷನ್ ಸಂಪೂರ್ಣವಾಗಿ ನಿಲ್ಲಿಸಿದ್ದು, 2 ಸಾವಿರ ಮಂದಿ ಕೊವಿಡ್ ಕೇರ್ ಸೆಂಟರ್‌ನಲ್ಲಿದ್ದಾರೆ. ಸರ್ಕಾರಕ್ಕೆ ಜನರ ಆರೋಗ್ಯ ಮುಖ್ಯವಾಗಿದೆ ಎಂದರು.

ಪ್ಯಾಕೇಜ್ ಘೋಷಿಸುವಂತೆ ಪತ್ರಕರ್ತರು ಮನವಿ ಮಾಡಿದ ವೇಳೆ ಪ್ರತಿಕ್ರಿಯಿಸಿದ ಡಿಸಿಎಂ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದಿಂದ ಕೇಳಿರುವ ಎಲ್ಲ ಬೇಡಿಕೆಗಳನ್ನು ಸರ್ಕಾರ ಒಪ್ಪಿ ಸ್ಪಂದಿಸಿದೆ ಎಂದರು.ವಿ.ಜಿ.ದೊಡ್ಡಿ ಪ್ರಾಥಮಿಕ ಆರೋಗ್ಯ ಕೇಂದ್ರ, ಹುಲಿಕಟ್ಟೆ ಕೋವಿಡ್ ಸೆಂಟರ್‌ಗೆ ಭೇಟಿ ನೀಡಿ ಪರಿಶೀಲಿಸಿ, ಸಿದ್ದಾರೂಢ ಅಶ್ರಮದಲ್ಲಿ ಕೋವಿಡ್ ವ್ಯಾಕ್ಸಿನೇಷನ್ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಶಾಸಕ ಎ. ಮಂಜುನಾಥ್, ಪುರಸಭಾಧ್ಯಕ್ಷೆ ಭಾಗ್ಯಮ್ಮ, ಜಿಲ್ಲಾಧಿಕಾರಿ ಡಾ.ಕೆ. ರಾಕೇಶ್ ಕುಮಾರ್, ಡಿಎಚ್‌ಒ ನಿರಂಜನ್, ಜಿಪಂ ಸಿಇಒ ಇಕ್ರಂ, ಎಸ್‌ಪಿ ಎಸ್.ಗಿರೀಶ್, ಆರ್‌ಸಿಎಚ್‌ಒ ಡಾ. ಪದ್ಮಾ, ತಹಸೀಲ್ದಾರ್ ಬಿ.ಜಿ. ಶ್ರೀನಿವಾಸ್ ಪ್ರಸಾದ್, ಟಿಎಚ್‌ಒ ಡಾ. ಸತೀಶ್, ಡಾ. ಸಿ.ಕೆ. ರಾಜೇಶ್, ಬಿಜೆಪಿ ಜಿಲ್ಲಾಧ್ಯಕ್ಷ ಹುಲುವಾಡಿ ದೇವರಾಜು, ತಾಲೂಕು ಅಧ್ಯಕ್ಷ ಧನಂಜಯ ಇತರರು ಇದ್ದರು.

ಮಾಗಡಿ ಆಸ್ಪತ್ರೆಯಲ್ಲಿ 100 ಬೆಡ್‌ಗಳು : ಪಟ್ಟಣದ ಸರ್ಕಾರಿ ಆಸ್ಪತ್ರೆ 100 ಬೆಡ್‌ಗಳ ಆಸ್ಪತ್ರೆಯಾಗಿದ್ದು, 50 ಅಕ್ಸಿಜನ್ ಬೆಡ್‌ಗಳಿವೆ. ಎಲ್ಲವನ್ನೂ ಅಕ್ಸಿಜನ್ ಬೆಡ್‌ಗಳನ್ನಾಗಿ ಮಾಡುವ ಜತೆಗೆ 2 ತಿಂಗಳೊಳಗೆ 500ರಿಂದ 600 ಲೀಟರ್ ಆಕ್ಸಿಜನ್ ಉತ್ಪಾದಿಸುವ ಘಟಕ ಸ್ಥಾಪಿಸಿ 25ರಷ್ಟು ಐಸಿಯು, 25ರಷ್ಟು ಎಚ್‌ಯ್ಯೂಡ್ ಅನುಕೂಲ ಕಲ್ಪಿಸುವ ಉದ್ದೇಶವಿದೆ. ಈ ಬಗ್ಗೆ ಸರ್ಕಾರದ ಗಮನ ಸೆಳೆದು ಅನುಕೂಲ ಕಲ್ಪಿಸುವ ಜತೆಗೆ ಸಿಬ್ಬಂದಿ ಹೆಚ್ಚಿಸಲಾಗುವುದು. ಪ್ರಾಥಮಿಕ ಆರೋಗ್ಯ ಕೇಂದ್ರ ಮತ್ತು ಸಮುದಾಯ ಆರೋಗ್ಯ ಕೇಂದ್ರಗಳಲ್ಲಿಯೂ ಆಕ್ಸಿಜನ್ ಬೆಡ್ ಅಳವಡಿಸುವ ಉದ್ದೇಶವಿದೆ. ಲ್ಯಾಬ್‌ಗಳನ್ನು ಮೇಲ್ದರ್ಜೆಗೇರಿಸುವ ಕೆಲಸ ಮಾಡುವುದಾಗಿ ಉಪಮುಖ್ಯಮಂತ್ರಿ ಡಾ. ಸಿ.ಎನ್. ಅಶ್ವತ್ಥನಾರಾಯಣ ತಿಳಿಸಿದರು.