ಮಂಗಳೂರು: ಚಂದ್ರಯಾನ 3 ಯಶಸ್ವಿಯಾದ ಹಿನ್ನೆಲೆಯಲ್ಲಿ ಬುಧವಾರ ದೇಶವೇ ಸಂಭ್ರಮದಲ್ಲಿ ತೇಲಾಡಿತು. ದಕ್ಷಿಣ ಕನ್ನಡ ಜಿಲ್ಲೆಯಲ್ಲೂ ಚಂದ್ರಯಾನ-3ರ ವಿಕ್ರಮ್ ಲ್ಯಾಂಡಿಂಗ್ ಆಗುವುದನ್ನು ಟಿವಿ ಪರದೆಯಲ್ಲಿ ಕಣ್ತುಂಬಿಕೊಂಡು ಹಲವು ಮಂದಿ ಅರೆ ಕ್ಷಣ ಖುಷಿಯಿಂದ ಭಾವುಕರಾದವರು.
ಪಿಲಿಕುಳ ಪ್ರಾದೇಶಿಕ ವಿಜ್ಞಾನ ಕೇಂದ್ರ ಸೇರಿದಂತೆ ಜಿಲ್ಲೆಯ ಹಲವು ಕಾಲೇಜುಗಳಲ್ಲಿ ಚಂದ್ರಯಾನ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗಿತ್ತು. 45 ದಿನಗಳ ಕಾಲ ಪ್ರಯಾಣ ಮಾಡಿರುವ ವಿಕ್ರಮ್ ಲ್ಯಾಂಡರ್ ಚಂದ್ರನ ಅಂಗಳದಲ್ಲಿ ಯಶಸ್ವಿಯಾಗಿ ಇಳಿಯಲೆಂದು ಜಿಲ್ಲೆಯ ಹಲವು ಪ್ರಮುಖ ಧಾರ್ಮಿಕ ಕೇಂದ್ರಗಳಲ್ಲಿ ವಿಶೇಷ ಪೂಜೆ, ಪ್ರಾರ್ಥನೆ ನೆರವೇರಿತು.
ಮಂಗಳೂರಿನ ಬಂಟ್ಸ್ ಹಾಸ್ಟೆಲ್ ಬಳಿ ಇರುವ ಬಿಜೆಪಿ ಚುನಾವಣಾ ಕಾರ್ಯಾಲಯದಲ್ಲೂ ಎಲ್‌ಇಡಿ ಪರದೆಯ ಮೂಲಕ ಚಂದ್ರಯಾನ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗಿತ್ತು. ಬಿಜೆಪಿ ಕಚೇರಿ ಮುಂಭಾಗ ಸಂಭ್ರಮ ಏರ್ಪಟ್ಟಿತ್ತು. ರಾಷ್ಟ್ರಧ್ವಜ ಹಿಡಿದು ಭಾರತ್ ಮಾತೆಗೆ ಜಯಕಾರ ಕೂಗಿದ ಬಿಜೆಪಿ ಕಾರ್ಯಕರ್ತರು ಇಸ್ರೋ ಸಾಧನೆಯನ್ನು ಕೊಂಡಾಡಿದರು. ಚೆಂಡೆ ವಾದನ ಸಂಭ್ರಮದ ಕಳೆ ಹೆಚ್ಚಿಸಿತ್ತು.
ಸಂಸದರು, ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ ಎಂ., ಪ್ರಮುಖರಾದ ಕಸ್ತೂರಿ ಪಂಜ, ಜಗದೀಶ ಶೇಣವ, ವಿಜಯಕುಮಾರ್ ಶೆಟ್ಟಿ, ಪೂಜಾ ಪೈ, ಶಕಿಲಾ ಕಾವಾ, ಭಾಸ್ಕರಚಂದ್ರ ಶೆಟ್ಟಿ, ಜಯಲಕ್ಷ್ಮೀ ಶೆಟ್ಟಿ ಸೇರಿದಂತೆ ಹಲವು ಮಂದಿ ಪಾಲ್ಗೊಂಡಿದ್ದರು.
ಚಂದ್ರಯಾನ-3ರ ಲ್ಯಾಂಡರ್ ವಿಕ್ರಮ್ ಸುರಕ್ಷಿತವಾಗಿ ಚಂದ್ರನ ಮೇಲೆ ಇಳಿಯುವ ಕ್ಷಣವನ್ನು ವೀಕ್ಷಿಸಲು ಪಿಲಿಕುಳ ಪ್ರಾದೇಶಿಕ ವಿಜ್ಞಾನ ಕೇಂದ್ರದಲ್ಲೂ ಸಕಲ ಸಿದ್ಧತೆ ಮಾಡಲಾಗಿತ್ತು. ಚಂದ್ರನ ಸನಿಹದಲ್ಲಿ ನಡೆಯುವ ಈ ಕೌತುಕವನ್ನು ವೀಕ್ಷಿಸಲು ವಿಜ್ಞಾನ ಕೇಂದ್ರದ ಸಭಾಭವನದಲ್ಲಿ ದೊಡ್ಡ ಪರದೆಯ ಮೇಲೆ ನೇರ ಪ್ರಸಾರದ ವ್ಯವಸ್ಥೆಯನ್ನು ಮಾಡಲಾಗಿತ್ತು. ಸೇರಿದ್ದ ನೂರಾರು ಮಂದಿ ಈ ಕ್ಷಣವನ್ನು ಕಣ್ತುಂಬಿಸಿಕೊಂಡರು.