ಸಾಲಿಗ್ರಾಮ: ಲಿಂಗೈಕ್ಯರಾದ ಕರ್ಪೂರವಳ್ಳಿ ಜಂಗಮ ಮಠದ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಅವರ ಅಂತ್ಯಕ್ರಿಯೆ ಸೋಮವಾರ ಕರ್ಪೂರವಲ್ಲಿ ಜಂಗಮಠದಲ್ಲಿ ಹಲವು ಸ್ವಾಮೀಜಿಗಳ ಸಮ್ಮುಖದಲ್ಲಿ ನಡೆಯಿತು.
ಬಾಳೆಹೊನ್ನೂರು ಮಹಾಮಠದ ಶ್ರೀ ರೇಣುಕಾಚಾರ್ಯ ಸ್ವಾಮೀಜಿ, ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಸೇರಿದಂತೆ ಕೆ.ಆರ್.ನಗರ ಕನಕ ಮಠ, ಗಾವಡಗೆರೆ ಮಠ, ಬಸವಪಟ್ಟಣ ಸ್ವಾತಂತ್ರ್ಯ ಮಠ ಸೇರಿದಂತೆ ಹಲವು ಮಠದ ಸ್ವಾಮೀಜಿಗಳ ಸಮ್ಮುಖದಲ್ಲಿ ಅಂತ್ಯಕ್ರಿಯ ನಡೆಯಿತು.
ಚಂದ್ರಶೇಖರ ಶಿವಾನಂದ ಸ್ವಾಮೀಜಿ ಅವರು ಎರಡು ವರ್ಷಗಳ ಹಿಂದೆಯೇ ತಮ್ಮ ಸಮಾಧಿಯನ್ನು ಕಟ್ಟಿಸಿದರು. ಕೋವಿಡ್ ಸಂದರ್ಭದಲ್ಲಿ ಜನರ ಸಾವು-ನೋವು ಮತ್ತು ಅಂತ್ಯಕ್ರಿಯೆಗಳನ್ನು ಗಮನಿಸಿದ ಪೂಜ್ಯರು ತಮ್ಮ ಸಾವಿನ ದಿನಗಳು ಅವರಿಗೆ ಮೊದಲೇ ಗೊತ್ತಿದ್ದರಿಂದ ಅವರ ಸಮಾಧಿಯನ್ನು ಅವರೇ ಮಾಡಿಸಿಕೊಂಡಿದ್ದರು ಎನ್ನಲಾಗಿದೆ. 1955ರಲ್ಲಿ ಸಾಲಿಗ್ರಾಮ ತಾಲೂಕಿನ ಕೋಡಿಯಾಲ ಗ್ರಾಮದಲ್ಲಿ ಜನಿಸಿದ ಶ್ರೀಗಳು ಸುಮಾರು 70 ವರ್ಷಗಳ ಕಾಲ ದೇವರ ಸೇವೆಯಲ್ಲಿ ತೊಡಗಿಸಿಕೊಂಡಿದ್ದರು.
ಪ್ರಾಥಮಿಕ ಶಿಕ್ಷಣದಿಂದ ಡಿಇಡಿ ಕಾಲೇಜುವರೆಗೆ ಶಿಕ್ಷಣ ಸಂಸ್ಥೆ ತೆರೆಯುವ ಮೂಲಕ ಸಾವಿರಾರು ಬಡ ವಿದ್ಯಾರ್ಥಿಗಳಿಗೆ ಶಿಕ್ಷಣ ದಾಸೋಹ ಕೊಟ್ಟ ಸ್ವಾಮೀಜಿಗಳು, ನೂರಾರು ಶಿಕ್ಷಕರಿಗೆ ಉದ್ಯೋಗ ಕಲ್ಪಿಸಿಕೊಟ್ಟಿದ್ದರು.
ನನ್ನ ಗೆಲುವಿಗೆ ಪರಮಪೂಜ್ಯ ಚಂದ್ರಶೇಖರ ಶಿವಾಚಾರ್ಯರು ಸಾಕಷ್ಟು ಮಾರ್ಗದರ್ಶನ ನೀಡಿ ಗೆಲುವಿಗೆ ಕಾರಣರಾಗಿದ್ದರು. ನನ್ನ ಜೀವನದಲ್ಲೇ ಅವರನ್ನು ಮರೆಯಲು ಸಾಧ್ಯವಿಲ್ಲ. ಅವರ ಕನಸುಗಳನ್ನು ನನಸು ಮಾಡುವುದು ನನ್ನ ಕರ್ತವ್ಯ. ಈ ಮಠದ ಅಭಿವೃದ್ಧಿಗೆ ಎಲ್ಲ ರೀತಿಯ ಸಹಕಾರ ನೀಡುತ್ತೇನೆ ಎಂದು ಶಾಸಕ ಡಿ.ರವಿಶಂಕರ್ ಹೇಳಿದರು.
ಮಾಜಿ ಸಚಿವ ಸಾ.ರಾ.ಮಹೇಶ್ ಅಂತಿಮ ದರ್ಶನ ಪಡೆದರು. ತಾಲೂಕಿನ ಕಾಂಗ್ರೆಸ್, ಜೆಡಿಎಸ್ ಮತ್ತು ಬಿಜೆಪಿ ಪಕ್ಷಗಳ ಮುಖಂಡರು ಮತ್ತು ಸಾರ್ವಜನಿಕರು ಭಾಗವಹಿಸಿದ್ದರು.