ಬೆಂಗಳೂರು: ಪ್ರತಿಭಟನೆ ಒಂದರಲ್ಲಿ ಮಾತನಾಡುವಾಗ ಮುಸ್ಲಿಮರಿಗೆ ಮತದಾನದ ಹಕ್ಕು (Voting Power) ಇಲ್ಲದಂತೆ ಮಾಡಬೇಕು ಎಂದು ಹೇಳುವ ಮೂಲಕ ವಿವಾದವನ್ನು ಹುಟ್ಟುಹಾಕಿದ್ದ ವಿಶ್ವ ಒಕ್ಕಲಿಗೆ ಮಹಾಸಂಸ್ಥಾನ ಮಠದ ಚಂದ್ರಶೇಖರನಾಥ ಸ್ವಾಮೀಜಿ (Chandrashekaranatha Swamiji) ಅವರ ಹೇಳಿಕೆ ವ್ಯಾಪಕ ಖಂಡನೆಗೆ ಗುರಿಯಾಗಿದ್ದು, ಇದೀಗ ಸ್ವಾಮೀಜಿ ತಮ್ಮ ಹೇಳಿಕೆಗೆ ವಿಷಾದವನ್ನು ವ್ಯಕ್ತಪಡಿಸಿದ್ದಾರೆ.
ತಮ್ಮ ಹೇಳಿಕೆ ವಿವಾದಾತ್ಮಕ ರೂಪ ಪಡೆದುಕೊಳ್ಳುತ್ತಿದ್ದಂತೆ ಪತ್ರಿಕಾ ಪ್ರಕಟಣೆ ಮೂಲಕ ಸ್ಪಷ್ಟನೆ ನೀಡಿರುವ ಚಂದ್ರಶೇಖರನಾಥ ಸ್ವಾಮೀಜಿ (Chandrashekaranatha Swamiji), ಇತ್ತೀಚಿನ ದಿನಗಳಲ್ಲಿ ವಕ್ಸ್ ಮಂಡಳಿ ನೂರಾರು ವರ್ಷಗಳಿಂದ ಉಳುಮೆ ಮಾಡಿಕೊಂಡು ಜೀವನ ನಡೆಸುತ್ತಿದ್ದ ರೈತಾಪಿ ಜನಗಳ ಒಕ್ಕಲೆಬ್ಬಿಸಿ ಅವರನ್ನು ಬೀದಿಗೆ ತಳ್ಳುವ ಕೆಲಸ ಮಾಡುತ್ತಿದೆ ಎಂಬುದನ್ನು ನಾವು ಸುದ್ದಿ ಮಾಧ್ಯಮಗಳಲ್ಲಿ ಮತ್ತು ದಿನಪತ್ರಿಕೆಗಳಲ್ಲಿ ಗಮನಿಸಿರುತ್ತೇವೆ. ರೈತನನ್ನು ಒಕ್ಕಲೆಬ್ಬಿಸುವ ಯಾವುದೇ ಸಂಸ್ಥೆಯ ನಡೆಯನ್ನಾಗಲಿ ನಾವು ಒಪ್ಪಲಾಗದು. ವಕ್ಸ್ ಮಂಡಳಿಗೆ ಅವರು ಹೊಂದಿರುವ ಜಮೀನುಗಳು ಯಾವ ರೀತಿ ಅವರಿಗೆ ಬಂದಿವೆ ಎಂಬುದರ ನಿಖರವಾದ ಮಾಹಿತಿಯನ್ನು ಸರ್ಕಾರಕ್ಕೆ ನೀಡಿ ಆ ಜಮೀನುಗಳನ್ನು ಅವರು ಉಳಿಸಿಕೊಳ್ಳುವುದರ ಬಗ್ಗೆ ನಮಗೆ ಯಾವುದೇ ಅಭ್ಯಂತರವಿರುವುದಿಲ್ಲ. ಆದರೆ ತಲತಲಾಂತರಗಳಿಂದ ಕೃಷಿ ಮಾಡುತ್ತಿರುವ ನಮ್ಮ ರೈತನನ್ನು ವಕ್ಸ್ ಮಂಡಳಿಯ ಹೆಸರೇಳಿ ಜಾಗ ಖಾಲಿ ಮಾಡಿಸುವಂತಿಲ್ಲ.
ಮೂಲತಃ ಒಕ್ಕಲಿಗರು ಧರ್ಮ ಸಹಿಷ್ಣುಗಳು, ನಾವು ಎಲ್ಲಾ ಧರ್ಮದವರನ್ನು ಇಲ್ಲಿಯವರೆವಿಗೂ ಸಮಾನವಾಗಿಯೇ ಕಂಡಿರುತ್ತೇವೆ. ನಮ್ಮ ಶ್ರೀಮಠಕ್ಕೆ ಮುಸ್ಲಿಂ ಜನಾಂಗದವರು ಸಹ ಸಂಪರ್ಕವಿಟ್ಟುಕೊಂಡು ಬಂದು ಹೋಗುತ್ತಿರುತ್ತಾರೆ. ನಾವು ಸಹ ಮುಸ್ಲಿಂ ಜನಾಂಗದ ಮದುವೆ ಹಾಗೂ ಇತರೆ ಶುಭ ಸಮಾರಂಭಗಳಿಗೆ ಭಾಗಿಯಾಗಿರುತ್ತೇವೆ. ಆದ್ದರಿಂದ ಈ ಜನಾಂಗದ ಬಗ್ಗೆ ಯಾವುದೇ ಅಸಹಿಷ್ಣುತೆ ಇರುವುದಿಲ್ಲ. ಹಿಂದೆ ಆಡಳಿತಾರೂಢ ಪಕ್ಷಗಳು ವಕ್ಸ್ ಮಂಡಳಿಗೆ ವಿಶೇಷ ಸವಲತ್ತುಗಳು ಹಾಗೂ ವಿಶೇಷ ಕಾನೂನಿನ ವ್ಯವಸ್ಥೆ ಮಾಡಿಕೊಟ್ಟಿರುವುದರ ಬಗ್ಗೆ ಸಂಸತ್ತಿನಲ್ಲಿ ಚರ್ಚೆಗಳು ನಡೆಯುತ್ತಿದ್ದು, ಇದಕ್ಕೆ ಸಂಬಂಧಿಸಿದಂತೆ ಚಾಯಿಂಟ್ ಪಾರ್ಲಿಮೆಂಟರಿ ಕಮಿಟಿ (ಜೆ.ಪಿ.ಸಿ) ಕೂಡ ರಚನೆಯಾಗಿರುತ್ತದೆ. ಈ ವಿಚಾರ ಜೆ.ಪಿ.ಸಿ ಯ ಮುಂದಿದ್ದು ಅದರ ತೀರ್ಮಾನಕ್ಕೆ ಎಲ್ಲರೂ ಬದ್ಧರಾಗಿರಬೇಕಾಗುತ್ತದೆ.
ಒಟ್ಟಾರೆ ನೆನ್ನೆಯ ನಮ್ಮ ಹೇಳಿಕೆಯ ಬಗ್ಗೆ ನಮ್ಮ ಸ್ಪಷ್ಟ ಅಭಿಪ್ರಾಯವೇನೆಂದರೆ, ಮುಸಲ್ಮಾನರೂ ಸಹ ಈ ದೇಶದ ಪ್ರಜೆಗಳೇ, ಎಲ್ಲರಂತೆ ಅವರಿಗೂ ಮತದಾನದ ಹಕ್ಕು ಇರುತ್ತದೆ. ನೆನ್ನೆಯ ದಿನ ನಾವು ಬಾಯಿ ತಪ್ಪಿ ನೀಡಿದ ಹೇಳಿಕೆಯಿಂದ ಮುಸಲ್ಮಾನ ಸಹೋದರರಿಗೆ ಬೇಸರವಾಗಿದ್ದರೆ, ಅದಕ್ಕಾಗಿ ನಾವು ಹೃತ್ತೂರ್ವಕವಾಗಿ ವಿಷಾದ ವ್ಯಕ್ತಪಡಿಸುತ್ತೇವೆ. ಈ ವಿಷಯವನ್ನು ಬೆಳೆಸದಂತೆ ಇಲ್ಲಿಗೆ ಮುಕ್ತಾಯ ಮಾಡಬೇಕೆಂದು ತಮ್ಮಲ್ಲಿ ಮನವಿ ಮಾಡಿಕೊಳ್ಳುತ್ತೇವೆ ಎಂದು ಚಂದ್ರಶೇಖರನಾಥ ಸ್ವಾಮೀಜಿ (Chandrashekaranatha Swamiji) ಪತ್ರಿಕಾ ಪ್ರಕಟಣೆ ಮೂಲಕ ತಮ್ಮ ಹೇಳಿಕೆಗೆ ವಿಷಾದ ವ್ಯಕ್ತಪಡಿಸಿದ್ದಾರೆ.