ನ್ಯೂಸ್

ಕಂಗನಾ ರಣಾವತ್​ ನಟನೆಯ 'ಚಂದ್ರಮುಖಿ 2' ರಿಲೀಸ್​ ಡೇಟ್​ ಮುಂದೂಡಿಕೆ!

ತಮಿಳುನಾಡು: ಬಾಲಿವುಡ್​ ಬೆಡಗಿ, ನಟಿ ಕಂಗನಾ ರಣಾವತ್​ ಮತ್ತು ಕಾಲಿವುಡ್​ ನಟ ರಾಘವ್​ ಲಾರೆನ್ಸ್​ ಅಭಿನಯದ ಬಹುನಿರೀಕ್ಷಿತ 'ಚಂದ್ರಮುಖಿ 2' ಚಿತ್ರದ ಬಿಡುಗಡೆ ದಿನಾಂಕದಲ್ಲಿ ಇದೀಗ ಗೊಂದಲ ಸೃಷ್ಟಿಯಾಗಿದ್ದು, ಈ ಹಿಂದೆ ನಿಗದಿಪಡಿಸಲಾಗಿದ್ದ ದಿನದಂದು ಸಿನಿಮಾ ರಿಲೀಸ್​ ಆಗುವುದು ಅನುಮಾನ​ ಎಂದು ಇತ್ತೀಚಿನ ವರದಿ ತಿಳಿಸಿದೆ.

ಸೂಪರ್​ಸ್ಟಾರ್​ ರಜನಿಕಾಂತ್​ ಮತ್ತು ಜೋತಿಕಾ ಅಭಿನಯಿಸಿದ್ದ ಬ್ಲಾಕ್​ಬಸ್ಟರ್​ 'ಚಂದ್ರಮುಖಿ' ಚಿತ್ರದ ಮುಂದುವರಿದ ಭಾಗವಾದ 'ಚಂದ್ರಮುಖಿ 2' ಸಿನಿಮಾವನ್ನು ಹಾರರ್​ ಜಾನರ್​ಗೆ ಸೈ ಎನ್ನಿಸಿಕೊಂಡಿರುವ ನಿರ್ದೇಶಕ ಪಿ. ವಾಸು ನಿರ್ದೇಶಿಸಿದ್ದಾರೆ. ಸದ್ಯ ನಿಗದಿಪಡಿಸಿದಂತೆ ಚಿತ್ರವು ಸೆ.15 ರಂದು ಬಿಡುಗಡೆಯಾಗಬೇಕು. ಆದ್ರೆ, ಇದೀಗ ಎರಡು ವಾರಗಳು ಮುಂದಕ್ಕೆ ಹೋಗಲಿದೆ ಎಂದು ಹೇಳಲಾಗಿದೆ.

ಸೆಪ್ಟೆಂಬರ್ 15, 2023 ರಂದು ಚಿತ್ರ ಬಿಡುಗಡೆಯಾಗುವುದಿಲ್ಲ, ಬದಲಿಗೆ ಅದೇ ತಿಂಗಳ 28 ರಂದು ರಿಲೀಸ್ ಮಾಡಲಾಗುವುದು ಎಂದು ವರದಿ ತಿಳಿಸಿದೆ. ಸದ್ಯ ಈ ಬಗ್ಗೆ ಚಿತ್ರತಂಡ ಅಧಿಕೃತ ಮಾಹಿತಿ ಘೋಷಿಸುವವರೆಗೂ ಕಾಯಬೇಕಿದೆ. ವರದಿ ತಿಳಿಸಿದಂತೆ 'ಚಂದ್ರಮುಖಿ 2' ಬಿಡುಗಡೆ ದಿನಾಂಕ ಮುಂದೂಡಿಕೆಯಾದರೆ, ಆ ವಾರದಲ್ಲಿ ರಿಲೀಸ್​ ಆಗಲಿರುವ ಹಲವು ಚಿತ್ರಗಳೊಂದಿಗೆ ಭಾರೀ ಪೈಪೋಟಿ ಎದುರಿಸುವುದು ನಿಶ್ಚಿತ,(ಏಜೆನ್ಸೀಸ್).