ಸೊರಬ: ಚಂದ್ರಗುತ್ತಿ ಉಪ ಪೊಲೀಸ್ ಠಾಣೆಗೆ ಸ್ವಂತ ಕಟ್ಟಡವಿಲ್ಲದೆ ಎರಡು ವರ್ಷದಿಂದ ರಥಬೀದಿಯಲ್ಲಿರುವ ರೇಣುಕಾಂಬೆ ದೇವಾಲಯಕ್ಕೆ ಸಂಬಂಧಿಸಿದ ಮೂಲ ಸೌಕರ್ಯವಿಲ್ಲದ ಚಿಕ್ಕ ಮಳಿಗೆಯಲ್ಲಿ ಪೊಲೀಸ್ ಸಿಬ್ಬಂದಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ಎರಡು ವರ್ಷಗಳ ಹಿಂದೆ ಕುಮಾರ್ ಬಂಗಾರಪ್ಪ ಶಾಸಕರಾಗಿದ್ದ ಸಂದರ್ಭ ಚಂದ್ರಗುತ್ತಿ ಉಪ ಪೊಲೀಸ್ ಠಾಣೆಯನ್ನು ಮೇಲ್ದರ್ಜೆಗೇರಿಸಲು ಒಂದು ಕೋಟಿ ರೂ. ಮಂಜೂರಾಗಿತ್ತು. ಹಾಗಾಗಿ ಹಳೇ ಕಟ್ಟಡವನ್ನು ಕೆಡವಲಾಗಿತ್ತು. ನೂತನ ಕಟ್ಟಡದಲ್ಲಿ ಒಂದು ಕಚೇರಿ, 4 ವಸತಿಗೃಹಗಳನ್ನು ನಿರ್ಮಿಸುವ ಉದ್ದೇಶ ಹೊಂದಲಾಗಿತ್ತು. ಆದರೆ ಅಷ್ಟರಲ್ಲಿ ಚುನಾವಣೆ ನಡೆದು ಕಾಂಗ್ರೆಸ್ ಅಧಿಕಾರಕ್ಕೆ ಬಂದು ಅನುದಾನ ವಾಪಸ್ ಪಡೆದಿದೆ ಎಂಬ ಆರೋಪ ಕೇಳಿಬಂದಿದೆ.
ಚಂದ್ರಗುತ್ತಿ ಹೋಬಳಿಯ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 52ಕ್ಕೂ ಹೆಚ್ಚಿನ ಹಳ್ಳಿಗಳು ಒಳಪಡುತ್ತವೆ. ಆದರೆ ಸಿಬ್ಬಂದಿ ವಾಸ್ತವ್ಯಕ್ಕೆ ವಸತಿಗೃಹಗಳಿಲ್ಲ. ದಿನವಿಡೀ ಕೆಲಸ ಮಾಡಿ ಸೊರಬ ಪಟ್ಟಣದ ವಸತಿಗೃಹಕ್ಕೆ ಬಂದು ಬೆಳಗ್ಗೆ ಮತ್ತೆ ಹೋಗಬೇಕು. ಠಾಣೆಯಲ್ಲಿ ಎಎಸ್‌ಐ, ಒಬ್ಬ ಹೆಡ್ ಕಾನ್‌ಸ್ಟೆಬಲ್, ಮೂವರು ಪೇದೆಗಳಿದ್ದಾರೆ.
ಬ್ರಿಟಿಷರ ಕಾಲದಲ್ಲಿ ನಿರ್ಮಾಣವಾದ ಪೊಲೀಸ್ ಠಾಣೆಯ ಹಳೇ ಕಟ್ಟಡವನ್ನು ನೆಲಸಮ ಮಾಡಿ ಪೊಲೀಸ್ ಸಿಬ್ಬಂದಿ ಸಣ್ಣ ಶೆಡ್‌ನಲ್ಲಿ ಕೆಲಸ ಮಾಡುವಂತಾಗಿದೆ. ಈಗ ಮಧು ಬಂಗಾರಪ್ಪ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದರೂ ಈ ಬಗ್ಗೆ ಗಮನ ನೀಡಿಲ್ಲ. ಪೊಲೀಸ್ ಠಾಣೆ ನಿರ್ಮಾಣದ ಜಾಗದಲ್ಲಿ ಗಿಡ-ಗಂಟಿ ಬೆಳೆದು ಪಾಳುಬಿದ್ದಿದೆ.
ಚಂದ್ರಗುತ್ತಿ ಪೊಲೀಸ್ ಠಾಣೆಗೆ ಹೊಸ ಕಟ್ಟಡ ನಿರ್ಮಿಸಬೇಕು ಎಂದು ಇಲಾಖೆಯಿಂದ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಅಂದಿನ ಶಾಸಕ ಕುಮಾರ್ ಬಂಗಾರಪ್ಪ ನೂತನ ಕಟ್ಟಡಕ್ಕೆ ಸೂಕ್ತ ಜಾಗ ನೋಡುವಂತೆ ಪೊಲೀಸ್ ಮತ್ತು ಗ್ರಾಪಂ ಅಧಿಕಾರಿಗಳಿಗೆತಿಳಿಸಿದ್ದರು. ಹುಣ್ಣಿಮೆ, ಅಮಾವಾಸ್ಯೆ ಹಾಗೂ ಮಹಾರಥೋತ್ಸವದಲ್ಲಿ ಲಕ್ಷಾಂತರ ಭಕ್ತರು ಸೇರುತ್ತಾರೆ. ಪೊಲೀಸ್ ಠಾಣೆ ದೂರ ಇರಬಾರದು ಎಂದು ರಥಬೀದಿ ಪಕ್ಕದಲ್ಲೇ ಇರುವ ಈ ಹಿಂದಿನ ಕಟ್ಟಡ ಇದ್ದ ಕಡೆಯಲ್ಲೇ ನಿರ್ಮಿಸಲು ನಿರ್ಧರಿಸಲಾಗಿತ್ತು. ಆದರೆ ಈ ಜಾಗ ಅರಣ್ಯ ವ್ಯಾಪ್ತಿಗೆ ಸೇರುತ್ತದೆ. ಇದರಿಂದ ಅರಣ್ಯ ಇಲಾಖೆಯಿಂದ ಅನುಮತಿ ದೊರೆಯದೆ ಅನುದಾನ ಸಿಗುವುದು ಕಷ್ಟಸಾಧ್ಯ ಎನ್ನಲಾಗುತ್ತಿದೆ.
ಚಂದ್ರಗುತ್ತಿಯಲ್ಲಿ ಉಪಠಾಣೆ ನಿರ್ಮಿಸಲು ಗುರುತಿಸಿರುವ ಸ್ಥಳ ಅರಣ್ಯ ಇಲಾಖೆಯದು. ಇದನ್ನು ಬಿಟ್ಟು ಬೇರೆ ಕಡೆ ಜಾಗ ಗುರುತಿಸಿದರೆ ಅದು ಜನರಿಗೆ ದೂರವಾಗುತ್ತದೆ. ಜಾಗ ನೀಡುವಂತೆ ಅರಣ್ಯ ಇಲಾಖೆಯೊಂದಿಗೆ ಪತ್ರ ವ್ಯವಹಾರ ನಡೆದಿದೆ. ಆದಷ್ಟು ಬೇಗ ಸುಸಜ್ಜಿತ ಕಟ್ಟಡ ನಿರ್ಮಿಸಲಾಗುವುದು ಎಂದು ಎಸ್ಪಿ ಜಿ.ಕೆ.ಮಿಥುನ್‌ಕುಮಾರ್ ವಿಜಯವಾಣಿಗೆ ತಿಳಿಸಿದ್ದಾರೆ.