ಅಮರಾವತಿ: ಆಂಧ್ರಪ್ರದೇಶದ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಒಂದು ದಿನದ ಬಳಿಕ ಟಿಡಿಪಿ ಮುಖ್ಯಸ್ಥ ಚಂದ್ರಬಾಬು ನಾಯ್ಡು ಅವರು ತಮ್ಮ ಕುಟುಂಬದೊಂದಿಗೆ ತಿರುಮಲಕ್ಕೆ ಭೇಟಿ ನೀಡಿ ವೆಂಕಟೇಶ್ವರನ ದರ್ಶನ ಪಡೆದರು. ಇದೇ ಸಮಯದಲ್ಲಿ ಕಳೆದ ಐದು ವರ್ಷಗಳಲ್ಲಿನ ಕೆಟ್ಟ ಆಡಳಿತದಿಂದಾಗಿ ವ್ಯವಸ್ಥೆಯನ್ನು ಶುದ್ಧೀಕರಿಸುವ ಅವಶ್ಯಕತೆಯಿದೆ. ಇದು ತಿರುಮಲ ತಿರುಪತಿ ದೇವಸ್ಥಾನದಿಂದ (ಟಿಟಿಡಿ) ಪ್ರಾರಂಭವಾಗಬೇಕು ಎಂದು ಹೇಳಿದರು.
ರಾಜ್ಯದಲ್ಲಿ ಶುದ್ಧೀಕರಣವು ತಿರುಮಲದಿಂದ ಪ್ರಾರಂಭವಾಗಲಿದೆ. ಪವಿತ್ರ ತಿರುಮಲವನ್ನು ಅಪವಿತ್ರಗೊಳಿಸುವುದು ಸರಿಯಲ್ಲ. ರಾಜಕೀಯ ಉದ್ದೇಶಕ್ಕೆ ಬಳಸಿಕೊಳ್ಳಬಾರದು. ಬೆಟ್ಟಗಳು ರಾಜಕೀಯ ಘೋಷಣೆಗಳಿಗಿಂತ ಆಧ್ಯಾತ್ಮಿಕ ಪಠಣಗಳೊಂದಿಗೆ ಪ್ರತಿಧ್ವನಿಸುವ ಅಗತ್ಯ. ತಿರುಮಲದಲ್ಲಿ ಗೋವಿಂದನ ನಾಮಸ್ಮರಣೆ ಹೊರತುಪಡಿಸಿ ಬೇರೇನೂ ಕೇಳಿಸುವುದಿಲ್ಲ ಎಂದು ಅವರು ಹೇಳಿದರು.
ಕಳೆದು ಐದು ವರ್ಷದಲ್ಲಿ ಬೆಟ್ಟಗಳಲ್ಲಿ ಡ್ರಗ್ಸ್, ಆಲ್ಕೋಹಾಲ್, ಮಾಂಸಾಹಾರಿ ಸೇವನೆಗೆ ಅವಕಾಶ ಕಲ್ಪಿಸಲಾಗಿತ್ತು, ಅಲ್ಲದೆ ಉತ್ತಮ ಗುಣಮಟ್ಟದ ಆಹಾರವನ್ನು ನೀಡುತ್ತಿಲ್ಲ. ನೀವು ತಿರುಮಲಕ್ಕೆ ಬಂದಾಗ ವೈಕುಂಠದ ಅನುಭೂತಿ ಉಂಟಾಗುತ್ತದೆ. ಓಂ ನಮೋ ವೆಂಕಟೇಶಾಯ ಹೊರತುಪಡಿಸಿ ತಿರುಮಲದಲ್ಲಿ ಬೇರೆ ಯಾವುದೇ ಘೋಷಣೆ ಇರಬಾರದು. ಭಕ್ತಾದಿಗಳಿಗೆ ಶಾಂತಿಯುತ ಮತ್ತು ಗೌರವಯುತ ವಾತಾವರಣವನ್ನು ಖಚಿತಪಡಿಸಿಕೊಳ್ಳಲು ಪ್ರಯತ್ನಿಸಬೇಕು ಎಂದು ಹೇಳಿದರು. (ಏಜೆನ್ಸೀಸ್)