ನುಲಿಯ ಚಂದಯ್ಯ ಜಯಂತಿ ಉದ್ಘಾಟಿಸಿದ ಎಸ್.ಎನ್.ಚನ್ನಬಸಪ್ಪ ನುಲಿಯ ಚಂದಯ್ಯ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರು. ಪಕೀರಪ್ಪ ಭಜಂತ್ರಿ, ಜಿ.ಶ್ರೀನಿವಾಸ್, ಗಿರೀಶ್, ಎಚ್.ಉಮೇಶ್, ಸಿ.ಎಸ್.ಚಂದ್ರಭೂಪಾಲ ಮುಂತಾದವರಿದ್ದರು. 
ನ್ಯೂಸ್

ಕಾಯಕ ತತ್ವಕ್ಕೆ ಶಕ್ತಿ ನೀಡಿದ ನುಲಿಯ ಚಂದಯ್ಯ

ಶಿವಮೊಗ್ಗ: ಕಾಯಕವೇ ಶ್ರೇಷ್ಠವೆಂದು ಕಾಯಕ ಪರಂಪರೆಗೆ ಶಕ್ತಿ ನೀಡಿದ ನುಲಿಯ ಚಂದಯ್ಯನವರ ವಚನಗಳನ್ನು ಪ್ರತಿ ಮನೆಗೆ ತಲುಪಿಸುವ ಕಾರ್ಯವಾಗಬೇಕಿದೆ ಎಂದು ಶಾಸಕ ಎಸ್.ಎನ್.ಚನ್ನಬಸಪ್ಪ ಅಭಿಪ್ರಾಯಪಟ್ಟರು.

ಜಿಲ್ಲಾಡಳಿತದಿಂದ ಸೋಮವಾರ ಏರ್ಪಡಿಸಿದ್ದ ನುಲಿಯ ಚಂದಯ್ಯ ಜಯಂತಿ ಉದ್ಘಾಟಿಸಿ ಮಾತನಾಡಿದ ಅವರು, ಚಂದಯ್ಯನವರ ಚಿಂತನೆಗಳು ಸಮಾಜದಲ್ಲಿ ಮುಂದೆ ಸಾಗಬೇಕು. ಎಲ್ಲ ಸಮುದಾಯದವರು ಒಟ್ಟಾಗಿ ಸೇರಿ ಜಯಂತಿ ಆಚರಣೆ ಮಾಡುವ ಮೂಲಕ ಅವರ ಯೋಚನೆ ಮುನ್ನಡೆಸಬೇಕು ಎಂದರು.
ಹುಟ್ಟಿನಿಂದಲೂ ಹಗ್ಗ ಮಾಡುವ ಕೆಲಸ ಮಾಡುತ್ತಿದ ನುಲಿಯ ಚಂದಯ್ಯ ಶೂನ್ಯ ಸಂಪಾದನೆಯಲ್ಲಿ ಕಾಯಕ ಯೋಗ ಮುನ್ನಡೆಸಿದರು. ಇವರ ಸಾಧನೆಯು ನಮ್ಮೆಲ್ಲರಿಗೆ ಮಾದರಿಯಾಗಿದ್ದು ಅವರ ವಚನಗಳ ಸಾರ ಅರಿತು ಬದುಕು ನಡೆಸಬೇಕಿದೆ ಎಂದು ಹೇಳಿದರು.
ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಸಿ.ಎಸ್.ಚಂದ್ರಭೂಪಾಲ ಮಾತನಾಡಿ, ಬಸವಾದಿ ಶರಣರಾದ ನುಲಿಯ ಚಂದಯ್ಯ ತಮ್ಮ ಕಾಯಕದಿಂದ ಹೆಸರಾದವರು. ದುಡಿದು ತಿನ್ನಬೇಕು ಎನ್ನುತ್ತಿದ್ದ ಇವರು ತಮ್ಮ ದುಡಿಮೆಯ ಹಣದಿಂದ ಜಂಗಮ ದಾಸೋಹ ಮಾಡುತ್ತಿದ್ದರು. ಇಂತಹ ಮಹಾನುಭಾವರ ಸಂದೇಶಗಳನ್ನು ನಾವೆಲ್ಲ ಎಲ್ಲೆಡೆ ಪ್ರಚಾರ ಮಾಡಬೇಕು ಎಂದು ತಿಳಿಸಿದರು.
ಶಿವಮೊಗ್ಗ ತಹಸೀಲ್ದಾರ್ ಗಿರೀಶ್, ಜಿಲ್ಲಾ ಕೊರಮ ಜನಾಂಗ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಕೀರಪ್ಪ, ಜಿಲ್ಲಾ ಕೊರಚರ ಮಹಾಸಂಘದ ಅಧ್ಯಕ್ಷ ಜಿ.ಶ್ರೀನಿವಾಸ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಉಮೇಶ್ ಉಪಸ್ಥಿತರಿದ್ದರು.