Chanakya Niti : ಭಾರತದ ಉತ್ತಮ ವಿದ್ವಾಂಸರಲ್ಲಿ ಚಾಣಕ್ಯರು ಒಬ್ಬರು. ಆಡು ಮುಟ್ಟದ ಸೊಪ್ಪಿಲ್ಲ ಎಂಬಂತೆ ಚಾಣಕ್ಯ ತಿಳಿಯದ ವಿಷಯವು ಇಲ್ಲ. ಅರ್ಥಶಾಸ್ತ್ರ, ಸಮಾಜ ವಿಜ್ಞಾನ, ರಾಜಕೀಯ, ರಾಜತಾಂತ್ರಿಕತೆ ಮತ್ತು ಮಿಲಿಟರಿ ಸೈನ್ಸ್ ಸೇರಿದಂತೆ ಅನೇಕ ವಿಷಯಗಳ ಮೇಲೆ ಅಗಾಧ ಜ್ಞಾನವನ್ನು ಹೊಂದಿದ್ದಾರೆ. ಪ್ರತಿಯೊಂದು ವಿಷಯದ ಮೇಲೂ ಚಾಣಕ್ಯರ ದೃಷ್ಟಿಕೋನ ತುಂಬಾ ವಿಶಾಲವಾಗಿದೆ. ಈ ಕಾರಣದಿಂದಲೇ ಮಾನವ ಜೀವನದ ಮೇಲೆ ಪರಿಣಾಮ ಬೀರುವ ಸಣ್ಣ ಮತ್ತು ದೊಡ್ಡ ವಿಚಾರಗಳ ಮೇಲೆ ಬಹಳ ಸೂಕ್ಷ್ಮವಾಗಿ ಬೆಳಕು ಚೆಲ್ಲುತ್ತಾರೆ. ಚಾಣಕ್ಯನ ನೀತಿಯು ಒಬ್ಬ ವ್ಯಕ್ತಿಯನ್ನು ಯಶಸ್ವಿಯಾಗಲು ಪ್ರೇರೇಪಿಸುತ್ತದೆ.
ಚಾಣಕ್ಯ ತತ್ವಗಳನ್ನು ಒಳಗೊಂಡಿರುವ ಚಾಣಕ್ಯ ನೀತಿ ಎಂಬ ಪುಸ್ತಕವನ್ನು ಬರೆಯಲಾಗಿದೆ. ಸಂತೋಷದ ಜೀವನದ ಅನೇಕ ರಹಸ್ಯಗಳನ್ನು ಆ ಪುಸ್ತಕದಲ್ಲಿ ತಿಳಿಸಲಾಗಿದೆ. ಅಲ್ಲದೆ, ಮನುಷ್ಯನಾಗಿ ಜನ್ಮ ತಾಳಿದ ವ್ಯಕ್ತಿ ತನ್ನ ಬದುಕನ್ನು ಸುಧಾರಿಸಿಕೊಳ್ಳಲು ಅನುಸರಿಸಬೇಕಾದ ಧರ್ಮ, ಕರ್ಮ, ಪಾಪ ಹಾಗೂ ಪುಣ್ಯಗಳ ಬಗ್ಗೆ ಚಾಣಕ್ಯನ ಪುಸ್ತಕದಲ್ಲಿ ಉಲ್ಲೇಖಿಸಲಾಗಿದೆ. ಮನುಷ್ಯರಾಗಿ ಹುಟ್ಟಿದ ನಾವು ನಮ್ಮ ಜೀವನದಲ್ಲಿ ಯಶಸ್ವಿಯಾಗಬೇಕು ಎಂದು ಭಾವಿಸುತ್ತೇವೆ. ಅದಕ್ಕೆ ದಾರಿಯನ್ನು ಚಾಣಕ್ಯ ಹಾಕಿಕೊಟ್ಟಿದ್ದಾರೆ. ಆ ದಾರಿಯಲ್ಲಿ ನಡೆದರೆ ಯಶಸ್ಸು ಖಂಡಿತವಾಗಿ ಸಿಗುತ್ತದೆ.
ಸಂಪತ್ತು ಹೆಚ್ಚಿಸಿಕೊಳ್ಳಬೇಕೆಂಬ ಆಸೆ ಯಾರಿಗೇ ತಾನೇ ಇಲ್ಲ. ಆದರೆ, ಇಂದಿನ ಆಧುನಿಕ ಜಗತ್ತಿನಲ್ಲಿ ಹಣ ಉಳಿಸುವುದೇ ಒಂದು ದೊಡ್ಡ ಸವಾಲು. ಅದರಲ್ಲೂ ಬೆಲೆ ಏರಿಕೆ ನಡುವೆ ಹಣದ ಉಳಿತಾಯ ತುಂಬಾ ಕಷ್ಟ. ಆದರೆ, ಚಾಣಕ್ಯ ಹೇಳಿದ ಕೆಲವು ನಿಯಮಗಳನ್ನು ತಪ್ಪದೇ ಪಾಲಿಸಿದರೆ, ನೀವು ಖಂಡಿತ ಹಣ ಉಳಿಸಿ, ನಿಮ್ಮ ಸಂಪತ್ತು ಹೆಚ್ಚು ಮಾಡಿಕೊಳ್ಳಬಹುದು. ಆ ನಿಯಮಗಳು ಯಾವುವು ಎಂಬುದನ್ನು ನಾವೀಗ ತಿಳಿದುಕೊಳ್ಳೋಣ.
* ಚಾಣಕ್ಯನ ಪ್ರಕಾರ, ನೀವು ನಿಮ್ಮ ಸಂಪತ್ತನ್ನು ಹೆಚ್ಚಿಸಿಕೊಳ್ಳಲು ಬಯಸಿದರೆ, ಮೊದಲು ವ್ಯರ್ಥ ಖರ್ಚುಗಳನ್ನು ಗುರುತಿಸಿ, ಅದನ್ನು ನಿಲ್ಲಿಸಬೇಕು. ಹಣವನ್ನು ಬಹಳ ಬುದ್ಧಿವಂತಿಕೆಯಿಂದ ನಿರ್ವಹಿಸುವ ಸಾಮರ್ಥ್ಯವಿರುವವರು ಮಾತ್ರ ಸಂಪತ್ತನ್ನು ಗಳಿಸಬಹುದು ಮತ್ತು ಹೆಚ್ಚಿಸಬಹುದು.
* ನೀವು ಹಣವನ್ನು ಉಳಿಸಬೇಕೆಂದರೆ ಜಿಪುಣರಾಗಿರಬಾರದು. ಯಾವುದರಲ್ಲೂ ಹಣವನ್ನು ಹೂಡಿಕೆ ಮಾಡದೆ ಹಣವನ್ನು ಉಳಿಸುವವರು ಜೀವನದಲ್ಲಿ ಎಂದಿಗೂ ತಮ್ಮ ಸಂಪತ್ತನ್ನು ಹೆಚ್ಚಿಸಿಕೊಳ್ಳುವುದಿಲ್ಲ. ಆದ್ದರಿಂದ, ಹಣವನ್ನು ಬುದ್ಧಿವಂತಿಕೆಯಿಂದ ಹೂಡಿಕೆ ಮಾಡುವುದು ತುಂಬಾನೇ ಅವಶ್ಯಕ.
* ಚಾಣಕ್ಯನ ಪ್ರಕಾರ, ದುಷ್ಕೃತ್ಯ ಅಥವಾ ದುಶ್ಚಟಗಳಿಗೆ ಹಣವನ್ನು ಖರ್ಚು ಮಾಡುವ ಅಭ್ಯಾಸ ಹೊಂದಿರುವ ಜನರು ಜೀವನದ ಯಾವುದೇ ಹಂತದಲ್ಲಿ ಸಂಪತ್ತು ಮತ್ತು ಸಮೃದ್ಧಿಯನ್ನು ಪಡೆಯಲು ಸಾಧ್ಯವಾಗುವುದಿಲ್ಲ. ಅವರು ಅಂತ್ಯವಿಲ್ಲದ ಬಡತನದಲ್ಲಿ ಸಿಲುಕಿಕೊಳ್ಳುತ್ತಾರೆ ಎಂದು ಚಾಣಕ್ಯ ಹೇಳುತ್ತಾರೆ.
* ಚಾಣಕ್ಯ ನೀತಿಯ ಪ್ರಕಾರ, ತಮ್ಮ ಸ್ಥಾನಮಾನವನ್ನು ಸುಧಾರಿಸಲು ಕಠಿಣ ಪರಿಶ್ರಮ ಪಡದವರು ಜೀವನದಲ್ಲಿ ಎಂದಿಗೂ ಶ್ರೀಮಂತರಾಗುವುದಿಲ್ಲ. ಕಠಿಣ ಪರಿಶ್ರಮ ಮತ್ತು ಪ್ರಯತ್ನ ಬಹಳ ಮುಖ್ಯ.
* ಚಾಣಕ್ಯನ ಪ್ರಕಾರ, ಹಣವನ್ನು ಗೌರವಿಸದವರು ಮತ್ತು ಅದರ ಮೌಲ್ಯವನ್ನು ತಿಳಿದುಕೊಳ್ಳದವರು ತಮ್ಮ ಜೀವನದಲ್ಲಿ ಎಂದಿಗೂ ಆರ್ಥಿಕ ಸಮೃದ್ಧಿಯನ್ನು ಸಾಧಿಸುವುದಿಲ್ಲ.
ವಿಶೇಷ ಸೂಚನೆ: ಮೇಲಿನ ಮಾಹಿತಿ ಸಾಮಾನ್ಯ ಸಾರ್ವಜನಿಕ ಮಾಹಿತಿಯನ್ನು ಆಧರಿಸಿದೆ. ವಿಜಯವಾಣಿ.ನೆಟ್ ಅದರ ಸತ್ಯಾಸತ್ಯತೆಯನ್ನು ದೃಢೀಕರಿಸುವುದಿಲ್ಲ. ಯಾವುದೇ ಕ್ರಮಗಳನ್ನು ಅಳವಡಿಸಿಕೊಳ್ಳುವ ಮೊದಲು, ಸಂಬಂಧಿತ ಕ್ಷೇತ್ರದ ತಜ್ಞರನ್ನು ಸಂಪರ್ಕಿಸಿ.