ನ್ಯೂಸ್

ಕೊನೆಗೂ ಪಾರ್ಕಿಂಗ್ ಸೇವೆ ಆರಂಭ

ಕಿರಣ್ ಮಾದರಹಳ್ಳಿ

ಕೊಳ್ಳೇಗಾಲ: ಪಟ್ಟಣದ ಬಸ್ ನಿಲ್ದಾಣದಲ್ಲಿ ಕೊನೆಗೂ ಬಹುನಿರೀಕ್ಷಿತ ವಾಹನಗಳ ನಿಲುಗಡೆ(ಪಾರ್ಕಿಂಗ್) ಸೇವೆ ಆರಂಭಗೊಂಡಿದೆ.

2023ರ ಮಾ.20ರಂದು ಈ ಬಸ್ ನಿಲ್ದಾಣ ಲೋಕಾರ್ಪಣೆಗೊಂಡಿತು. ಸುಮಾರು 22 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾದ ಸುಸಜ್ಜಿತ ನಾಲ್ಕು ಅಂತಸ್ತಿನ ಕಟ್ಟಡವಿರುವ ನಿಲ್ದಾಣದ ಕೆಳಮಹಡಿಯಲ್ಲಿ ವಾಹನಗಳ ಪಾರ್ಕಿಂಗ್‌ಗೆ ವ್ಯವಸ್ಥೆ ಕಲ್ಪಿಸಲಾಗಿತ್ತು. ಆದರೆ ನಿಲ್ದಾಣ ಉದ್ಘಾಟನೆಯಾಗಿ 11 ತಿಂಗಳಾದರೂ ವಾಹನಗಳ ಪಾರ್ಕಿಂಗ್ ಸೇವೆಗೆ ಅವಕಾಶ ನೀಡಿರಲಿಲ್ಲ. ಇದರಿಂದ ಬಸ್ ನಿಲ್ದಾಣದ ಪ್ರವೇಶ ಹಾಗೂ ನಿರ್ಗಮನ ದ್ವಾರದಲ್ಲಿಯೇ ಪ್ರಯಾಣಿಕರು ವಾಹನಗಳನ್ನು ನಿಲ್ಲಿಸುತ್ತಿದ್ದರು. ಪರಿಣಾಮ ಬಸ್ ಸಂಚಾರಕ್ಕೆ ತೀವ್ರ ಅಡಚಣೆಯಾಗಿತ್ತು.

ಈ ಬಗ್ಗೆ ‘ವಿಜಯವಾಣಿ’ ಪತ್ರಿಕೆಯಲ್ಲಿ ಸರಣಿ ಲೇಖನ ಪ್ರಕಟಿಸಿ ನಗರಸಭೆ ಹಾಗೂ ಕೆಎಸ್‌ಆರ್‌ಟಿಸಿ ಅಧಿಕಾರಿಗಳ ಗಮನ ಸೆಳೆಯಲಾಗಿತ್ತು. ನಂತರ ಶಾಸಕ ಎರ್.ಕೃಷ್ಣಮೂರ್ತಿ ಹಾಗೂ ಜಿಲ್ಲಾಧಿಕಾರಿ ಶಿಲ್ಪಾನಾಗ್ ಅವರು ನಿಲ್ದಾಣದಲ್ಲಿ ಪಾರ್ಕಿಂಗ್ ಸೇವೆಗೆ ಕ್ರಮವಹಿಸುವಂತೆ ಅಧಿಕಾರಿಗಳಿಗೆ ತಾಕೀತು ಮಾಡಿದ್ದರು.
ಬಳಿಕ ಬೆಂಗಳೂರು ಮೂಲದ ಕೆಂಪೇಗೌಡ ಎಂಬುವರು ಪಾರ್ಕಿಂಗ್ ಟೆಂಡರ್ ಪಡೆದಿದ್ದರು. ಫೆ.1 ರಿಂದ ಪಾರ್ಕಿಂಗ್ ಸೇವೆ ಆರಂಭ ಎಂದು ಕೆಎಸ್‌ಆರ್‌ಟಿಸಿ ನಾಮಫಲಕ ಅಳವಡಿಸಿ ಮಾಹಿತಿ ನೀಡಿತ್ತು. ಆದರೆ ಫೆ.1ರಿಂದಲೂ ಸೇವೆ ಆರಂಭವಾಗಿರಲಿಲ್ಲ. ಈ ಬಗ್ಗೆ ಫೆ.2ರಂದು ‘ಆರಂಭವಾಗದ ವಾಹನಗಳ ಪಾರ್ಕಿಂಗ್ ವ್ಯವಸ್ಥೆ’ ಶೀರ್ಷಿಕೆಯಡಿ ‘ವಿಜಯವಾಣಿ’ ಪತ್ರಿಕೆಯು ವರದಿ ಬಿತ್ತರಿಸಿ ಇಲಾಖಾ ಅಧಿಕಾರಿಗಳ ಗಮನ ಸೆಳೆದಿತ್ತು. ಅದರಂತೆ ಕೊನೆಗೂ ಪಾರ್ಕಿಂಗ್ ಸೇವೆ ಆರಂಭವಾಗಿದೆ. ವಾಹನ ನಿಲುಗಡೆಗೆ ದರ ನಿಗದಿಪಡಿಸಲಾಗಿದೆ.