ನ್ಯೂಸ್

ಪಲ್ಸ್ ಪೋಲಿಯೋ ಅಭಿಯಾನಕ್ಕೆ ಎಲ್ಲರ ಸಹಕಾರ ಅಗತ್ಯ

ಚಾಮರಾಜನಗರ : ಪಲ್ಸ್ ಪೋಲಿಯೋ ಅಭಿಯಾನ ಮಾ.3ರಂದು ಆರಂಭವಾಗಲಿದ್ದು, ಈ ಸಂಬಂಧ ತಾಲೂಕು ಮಟ್ಟದ ಸಂಬಂಧಪಟ್ಟ ಅಧಿಕಾರಿಗಳು ಸೇರಿದಂತೆ ಎಲ್ಲರ ಸಹಕಾರ ಅಗತ್ಯವಾಗಿದೆ ಎಂದು ತಹಸೀಲ್ದಾರ್ ಬಸವರಾಜು ತಿಳಿಸಿದರು.

ನಗರದ ಜಿಲ್ಲಾಡಳಿತ ಭವನದಲ್ಲಿರುವ ಹಳೇ ಕೆಡಿಪಿ ಸಭಾಂಗಣದಲ್ಲಿ ರಾಷ್ಟ್ರೀಯ ಪಲ್ಸ್ ಪೋಲಿಯೋ ಕಾರ್ಯಕ್ರಮದ ಅಂಗವಾಗಿ ಶುಕ್ರವಾರ ಆಯೋಜಿಸಿದ್ದ ತಾಲೂಕು ಮಟ್ಟದ ಟಾಸ್ಕ್‌ಪೋರ್ಸ್ ಸಭೆಯ ಆಧ್ಯಕ್ಷತೆ ವಹಿಸಿ ಮಾತನಾಡಿದರು.

ಚಾಮರಾಜನಗರ ತಾಲೂಕಿನಲ್ಲಿ ಈ ಬಾರಿ 20 ಸಾವಿರಕ್ಕೂ ಹೆಚ್ಚಿನ ಮಕ್ಕಳಿಗೆ ಪೋಲಿಯೋ ಹನಿ ಹಾಕಲು ಗುರಿ ಹೊಂದಲಾಗಿದ್ದು, ಪಟ್ಟಣ ಪ್ರದೇಶದಲ್ಲಿ 39 ಹಾಗೂ ಗ್ರಾಮೀಣ ಭಾಗದಲ್ಲಿ 150 ಸೇರಿದಂತೆ ಒಟ್ಟು 189 ಬೂತ್‌ಗಳನ್ನು ತೆರೆಯಲಾಗುವುದು. ನಿರ್ವಹಣೆಗಾಗಿ 41 ಮೇಲ್ವಿಚಾರಕರು, 779 ಲಸಿಕಾ ಕಾರ್ಯಕರ್ತರನ್ನು ನಿಯೋಜಿಸಲಾಗಿದೆ. ತಾಲೂಕಿನಲ್ಲಿ 7 ಟ್ರಾನ್ಸಿಟ್ ಬೂತ್ ಹಾಗೂ ಒಂದು ಸಂಚಾರಿ ಬೂತ್ ಕಾರ್ಯನಿರ್ವಹಿಸಲಿದ್ದು, ಪಲ್ಸ್ ಪೋಲಿಯೋ ಕಾರ್ಯಕ್ರಮದ ಶೇ.100ರಷ್ಟು ಪ್ರಗತಿಗೆ ಎಲ್ಲರೂ ಸಹಕರಿಸಬೇಕು ಎಂದರು.

ತಾಲೂಕಿನ ಪಟ್ಟಣ ಹಾಗೂ ಗ್ರಾಮಾಂತರ ಪ್ರದೇಶದಲ್ಲಿ ಮೊದಲ ದಿನ ಅಂದರೆ ಮಾ.3ರಂದು ಲಸಿಕಾ ಕೇಂದ್ರಗಳಲ್ಲಿ ಪೋಲಿಯೋ ಹನಿ ಹಾಕಲಾಗುವುದು. 2ನೇ ದಿನ ಗ್ರಾಮೀಣ ಭಾಗದಲ್ಲಿ ಹಾಗೂ ಮೂರು ಮತ್ತು ನಾಲ್ಕನೇ ದಿನ ಮನೆಮನೆಗೆ ಭೇಟಿ ನೀಡಿ 5 ವರ್ಷದೊಳಗಿನ ಮಕ್ಕಳಿಗೆ ಪೋಲಿಯೋ ಲಸಿಕೆ ಹನಿ ನೀಡಲಾಗುವುದು. ಇದಕ್ಕಾಗಿ ಪಟ್ಟಣದ 16215 ಹಾಗೂ ಗ್ರಾಮೀಣ ಪ್ರದೇಶದ 70164 ಸೇರಿದಂತೆ ಒಟ್ಟು 86379 ಮನೆಗಳನ್ನು ಗುರುತಿಸಲಾಗಿದೆ. ಯಾವುದೇ ಮಕ್ಕಳು ಪೋಲಿಯೋ ಲಸಿಕೆ ಹನಿಯಿಂದ ವಂಚಿತರಾಗದಂತೆ ನೋಡಿಕೊಳ್ಳಬೇಕು ಎಂದು ಸೂಚಿಸಿದರು.

ಸಭೆಯಲ್ಲಿ ಚಂದಕವಾಡಿ ಪ್ರಾಥಮಿಕ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿ ಡಾ. ನಂದಿನಿ, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಕಚೇರಿಯ ಮಹಿಳಾ ಮೇಲ್ವಿಚಾರಕಿ ಶಿವಲೀಲಾ ಬೆಟಗೇರಿ, ನಗರಸಭೆ ಆರೋಗ್ಯ ನಿರೀಕ್ಷಕ ಮಂಜುನಾಥ್ ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.