ಹನೂರು: ಜಿಲ್ಲೆಯಲ್ಲಿಯೇ ಹೆಚ್ಚು ವಿಸ್ತಿರ್ಣವನ್ನು ಹೊಂದಿರುವ ಹನೂರು ತಾಲೂಕಿನ ಅಭಿವೃದ್ಧಿಗೆ ಈ ಬಾರಿಯ ಬಜೆಟ್‌ನಲ್ಲಿ ಕಿಂಚಿತ್ತೂ ಆದ್ಯತೆ ನೀಡದ ಹಿನ್ನೆಲೆಯಲ್ಲಿ ತಾಲೂಕಿನ ಜನರ ನಿರೀಕ್ಷೆಗಳು ಹುಸಿಯಾಗಿವೆ.
ಹನೂರು ತಾಲೂಕಾಗಿ ರಚನೆಯಾಗಿ 6 ವರ್ಷ ಕಳೆದಿದೆ. 2018 ರಲ್ಲಿ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿ ಆಗಿದ್ದ ಸಂದರ್ಭದಲ್ಲಿ ಘೋಷಣೆ ಮಾಡಿದ್ದ ತಾಲೂಕಿಗೆ ಈ ಬಾರಿಯ ಬಜೆಟ್‌ನಲ್ಲಿ ಒಂದೇ ಒಂದು ಸಣ್ಣ ಯೋಜನೆಯನ್ನೂ ನೀಡದ ಹಿನ್ನೆಲೆಯಲ್ಲಿ ಬೆಟ್ಟದಷ್ಟು ನಿರೀಕ್ಷೆ ಇಟ್ಟುಕೊಂಡಿದ್ದ ಜನರಲ್ಲಿ ಅಸಮಾಧಾನ ಮನೆ ಮಾಡಿದೆ.
ಏನಾಗಬೇಕಿತ್ತು?: ತಾಲೂಕು ಕೇಂದ್ರದಲ್ಲಿ ಗ್ರಾಮ ಮಟ್ಟದ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರವಿದ್ದು, ತುರ್ತು ಚಿಕಿತ್ಸೆಗಷ್ಟೇ ಸೀಮಿತವಾಗಿದೆ. ಇದರಿಂದ ಸಮರ್ಪಕ ಆರೋಗ್ಯ ಸೇವೆ ದೊರಕುತ್ತಿಲ್ಲ. ಆಸ್ಪತ್ರೆಯನ್ನು ಮೇಲ್ದರ್ಜೆಗೇರಿಸಬೇಕು ಎನ್ನುವುದು ತಾಲೂಕಿನ ಜನತೆಯ ಮಹಾದಾಸೆಯಾಗಿತ್ತು. ಇದು ಈಡೇರಿಲ್ಲ. ಇನ್ನು ತಾಲೂಕು ಆಡಳಿತಸೌಧ ನಿರ್ಮಾಣ ಜತೆಗೆ ತಾಲೂಕಿಗೆ ಸಂಬಂಧಿಸಿದ ವಿವಿಧ ಇಲಾಖೆಯ ಕಚೇರಿ ನಿರ್ಮಾಣ ಹಾಗೂ ಹಾಳಾಗಿರುವ ಹನೂರು-ಮ.ಬೆಟ್ಟದ ರಸ್ತೆ, ಬಂಡಳ್ಳಿ ರಸ್ತೆ ಸೇರಿದಂತೆ ಇನ್ನಿತರ ಮುಖ್ಯ ರಸ್ತೆಗಳು ಅಭಿವೃದ್ಧಿ ಬಗ್ಗೆ ಯಾವುದೇ ಉಲ್ಲೇಖವಿಲ್ಲ.
ನದಿ ಮೂಲದಿಂದ ಕೆರೆಗಳಿಗೆ ನೀರು ತುಂಬಿಸುವ ಯೋಜನೆಯಡಿ ನನೆಗುದಿಗೆ ಬಿದ್ದಿರುವ ರಾಮನಗುಡ್ಡೆ ಹಾಗೂ ಹುಬ್ಬೆಹುಣಸೆ ಜಲಾಶಯಗಳ ಪೈಪ್‌ಲೈನ್ ಕಾಮಗಾರಿಯನ್ನು ಕೈಗೊಳ್ಳಬೇಕು. ಉಡುತೊರೆ ಜಲಾಶಯಕ್ಕೆ ನದಿ ಮೂಲದಿಂದ ನೀರು ತುಂಬಿಸಬೇಕು. ಸಾರಿಗೆ ಬಸ್ ಘಟಕ ಸ್ಥಾಪನೆಯಾಗಬೇಕು ಎಂಬ ಬೇಡಿಕೆಗಳು ಈಡೇರಿಲ್ಲ. ಕರ್ನಾಟಕ ಹಾಗೂ ತಮಿಳುನಾಡಿನ ಪ್ರವಾಸಿಗರು ಹೆಚ್ಚು ಭೇಟಿ ನೀಡುವ ಹೊಗೇನಕಲ್ ಜಲಾಶಯ ಅಭಿವೃದ್ಧಿ ಮರಿಚಿಕೆಯಾಗಿಯೇ ಉಳಿದಿದೆ. ಚಂಗಡಿ ಗ್ರಾಮಕ್ಕೆ ಸ್ಥಳಾಂತರದ ಪುನರ್ವಸತಿ ಸೌಕರ್ಯ ಒದಗಿಸಬೇಕು. ಕಾಡಂಚಿನ ಗ್ರಾಮಗಳಿಗೆ ಕನಿಷ್ಠ ಮೂಲಸೌಕರ್ಯ ಒದಗಿಸಬೇಕು ಎಂಬ ಬಗ್ಗೆ ಗಮನ ಹರಿಸಿಲ್ಲ. ನಿರುದ್ಯೋಗವನ್ನು ನಿರುದ್ಯೋಗ ನಿವಾರಿಸುವ ನಿಟ್ಟಿನಲ್ಲಿ ಕೈಗಾರಿಕೆ ಸ್ಥಾಪನೆ ಸೇರಿದಂತೆ ಇನ್ನು ಕೆಲವು ಕಾರ್ಯಗಳು ತಾಲೂಕಿನ ಅಭಿವೃದ್ಧಿಗೆ ಅಗತ್ಯವೂ ಅನಿವಾರ್ಯವೂ ಆಗಿತ್ತು. ಆದರೆ ಉದ್ಯೋಗಕಾಂಕ್ಷಿಗಳ ಆಸೆಗೆ ತಣ್ಣೀರೆರಚಿದಂತಾಗಿದೆ.
ಹನೂರು ಕ್ಷೇತ್ರ ಹೆಚ್ಚು ವಿಸ್ತೀರ್ಣವನ್ನು ಹೊಂದಿದ್ದು, ತೀರಾ ಹಿಂದುಳಿದಿದೆ. ಈ ದಿಸೆಯಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳು ಆಗಬೇಕಿದ್ದು, ಈ ಬಗ್ಗೆ ಬಜೆಟ್‌ನಲ್ಲಿ ನಿರೀಕ್ಷೆ ಹೊಂದಲಾಗಿತ್ತು. ಆದರೆ ನಿರೀಕ್ಷೆ ಹುಸಿಯಾಗಿದೆ. ಆದರೂ ಮುಂದಿನ ದಿನಗಳಲ್ಲಿ ಸಂಬಂಧಪಟ್ಟ ಇಲಾಖೆಯ ಸಚಿವರು ಹಾಗೂ ಹಿರಿಯ ಅಧಿಕಾರಿಗಳೊಂದಿಗೆ ಚರ್ಚೆ ಚರ್ಚಿಸಿ ಆಗಬೇಕಿರುವ ಅಭಿವೃದ್ಧಿಯ ಕಡೆ ಗಮನಹರಿಸಲಾಗುವುದು. ಎಂ.ಆರ್.ಮಂಜುನಾಥ್ ಶಾಸಕ ಹನೂರು ತಾಲೂಕು ರಚನೆಯಾಗಿ 6 ವರ್ಷ ಕಳೆದಿದೆ. ಆದರೆ ತಾಲೂಕಿಗೆ ಸಂಬಂಧಪಟ್ಟ ಬಹುತೇಕ ಕಚೇರಿಗಳು ಸ್ಥಾಪನೆಯಾಗಿಲ್ಲ. ಆಸ್ಪತ್ರೆ ಮೇಲ್ದರ್ಜೇಗೇರಿಲ್ಲ. ಕೆರೆಗಳಿಗೆ ನೀರು ತುಂಬಿಸುವ ಕಾರ್ಯ ಸೇರಿದಂತೆ ಇನ್ನು ಅನೇಕ ಅಭಿವೃದ್ಧಿ ಕಾರ್ಯಗಳು ಆಗಬೇಕಿದ್ದು, ಈ ಬಗ್ಗೆ ಬಜೆಟ್‌ನಲ್ಲಿ ನಿರೀಕ್ಷೆ ಹೊಂದಲಾಗಿತ್ತು. ಆದರೆ ತಾಲೂಕಿಗೆ ಯಾವುದೇ ಆದ್ಯತೆ ನೀಡದಿರುವುದು ಬೇಸರದ ಸಂಗತಿ.ಚಂಗಡಿ ಕರಿಯಪ್ಪಅಧ್ಯಕ್ಷ ರೈತ ಸಂಘ ಹಾಗೂ ಹಸಿರು ಸೇನೆ ಹನೂರು