ನ್ಯೂಸ್

ಸಮಾಜಕ್ಕೆ ಸವಿತಾ ಸಮುದಾಯದ ಕೊಡುಗೆ ಅಪಾರ

ಚಾಮರಾಜನಗರ : ಸವಿತಾ ಸಮುದಾಯದವರು ಇಲ್ಲದೆ ಯಾವುದೇ ಶುಭಕಾರ್ಯಗಳು ಪೂರ್ಣಗೊಳ್ಳುವುದಿಲ್ಲ, ಈ ನಿಟ್ಟಿನಲ್ಲಿ ಸಮಾಜಕ್ಕೆ ಸವಿತಾ ಸಮುದಾಯದ ಕೊಡುಗೆ ಅಪಾರವಾಗಿದೆ ಎಂದು ನಗರಸಭಾ ಸದಸ್ಯೆ ಮಮತಾ ಬಾಲಸುಬ್ರಮ್ಮಣ್ಯಂ ತಿಳಿಸಿದರು.

ನಗರದ ಜಿಲ್ಲಾಡಳಿತ ಭವನದಲ್ಲಿರುವ ಜಿಲ್ಲಾಧಿಕಾರಿ ಕಚೇರಿಯಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಮತ್ತು ಕನ್ನಡ ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಶುಕ್ರವಾರ ಆಯೋಜಿಸಿದ್ದ ಶ್ರೀ ಸವಿತಾ ಮಹರ್ಷಿ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಶಿವನು ಯಾಗ ಮಾಡುವ ಸಂದರ್ಭದಲ್ಲಿ ಗಡ್ಡವು ಸುಟ್ಟು ಹೋಗುತ್ತದೆ. ಈ ವೇಳೆ ಸಾಕ್ಷಾತ್ ಶಿವನೇ ತನ್ನ ಕಣ್ಣಿನಿಂದ ಸವಿತಾ ಮಹರ್ಷಿಯನ್ನು ಸೃಷ್ಟಿಮಾಡಿದ ಎಂದು ಹೇಳಲಾಗುತ್ತದೆ. ಸವಿತಾ ಮಹರ್ಷಿಗಳು ದೇವಾನುದೇವತೆಗಳಿಗೆ ಕ್ಷೌರ ಮಾಡಿದವರು. ಅವರು ಸಾಮವೇದವನ್ನು ಬರೆದಿದ್ದಾರೆ ಎನ್ನುವುದುಂಟು. ಸವಿತಾ ಸಮುದಾಯದವರು ಬರದೇ ಯಾವುದೇ ಶುಭಕಾರ್ಯಗಳು ಪೂರ್ಣಗೊಳ್ಳುವುದಿಲ್ಲ. ಈ ದೃಷ್ಟಿಯಲ್ಲಿ ಸಮಾಜಕ್ಕೆ ಈ ಸಮುದಾಯ ಸಾಕಷ್ಟು ಸೇವೆ ಸಲ್ಲಿಸಿದೆ ಎಂದು ತಿಳಿಸಿದರು.

ಜಿಲ್ಲಾಧಿಕಾರಿ ಸಿ.ಟಿ.ಶಿಲ್ಪಾನಾಗ್ ಮಾತನಾಡಿ, ಪ್ರತಿಯೊಬ್ಬರೂ ತಮ್ಮ ಸಮಾಜದ ಕಷ್ಟಸುಖಗಳನ್ನು ತಿಳಿದುಕೊಳ್ಳಬೇಕು. ಕ್ಷೌರಿಕರು ಸಮಾಜಕ್ಕೆ ತಮ್ಮದೇ ಆದ ಸೇವೆ ಸಲ್ಲಿಸಿದ್ದಾರೆ. ಸವಿತಾ ಮಹರ್ಷಿ ವೇದ ಮಂತ್ರ, ಗಾಯತ್ರಿ ಮಂತ್ರದಲ್ಲಿ ಖ್ಯಾತಿ ಪಡೆದಿದ್ದರು. ಆಯುರ್ವೇದವು ಕೂಡ ಸವಿತಾ ಸಮುದಾಯದ ಮೂಲವಾಗಿದೆ. ಸರ್ಕಾರದಿಂದ ಅನೇಕ ಸವಲತ್ತುಗಳನ್ನು ನೀಡಲಾಗುತ್ತಿದ್ದು, ಅದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು. ಹೆಚ್ಚುವರಿ ಜಿಲ್ಲಾಧಿಕಾರಿ ಗೀತಾ ಹುಡೇದ, ಜಿಲ್ಲಾ ಸವಿತಾ ಸಮಾಜದ ನಿಕಟಪೂರ್ವ ಅಧ್ಯಕ್ಷ ಚಿನ್ನಸ್ವಾಮಿ, ಕನ್ನಡ ಸಂಸ್ಕೃತಿ ಇಲಾಖೆಯ ಕುಮಾರ್, ನಾಗೇಂದ್ರ, ಸಮುದಾಯದ ಮುಖಂಡರು ಹಾಗೂ ಸಾರ್ವಜನಿಕರು ಹಾಜರಿದ್ದರು.