ನ್ಯೂಸ್

ನೀರು, ಮೇವಿಗೆ ಕೊರತೆಯಾಗದಿರಲಿ

ಚಾಮರಾಜನಗರ : ಬೇಸಿಗೆ ಸಮಯದಲ್ಲಿ ಜನರು ಮತ್ತು ಜಾನುವಾರುಗಳಿಗೆ ಕುಡಿಯುವ ನೀರು ಹಾಗೂ ಮೇವಿಗೆ ಕೊರತೆಯಾಗದಂತೆ ಮುನ್ನೆಚ್ಚರಿಕಾ ಕ್ರಮಗಳನ್ನು ಸಮರ್ಪಕವಾಗಿ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಶಿಲ್ಪಾನಾಗ್ ಸೂಚನೆ ನೀಡಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಿದ್ದ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಜಿಲ್ಲೆಯಾದ್ಯಂತ ತುರ್ತು ಪರಿಹಾರಕ್ಕಾಗಿ ಕೈಗೆತ್ತಿಕೊಳ್ಳಲಾಗುತ್ತಿರುವ ಕುಡಿಯುವ ನೀರಿನ ಯೋಜನೆಗಳನ್ನು ಶೀಘ್ರವಾಗಿ ಪೂರ್ಣಗೊಳಿಸಬೇಕು. ಕ್ರಿಯಾ ಯೋಜನೆ ಅನುಸಾರ ಕಾಮಗಾರಿ ನಡೆಯಬೇಕು. ನಗರ ಮತ್ತು ಗ್ರಾಮೀಣ ಪ್ರದೇಶದಲ್ಲಿ ಈಗಿನಿಂದಲೇ ನೀರು ಒದಗಿಸಲು ಸಿದ್ದತಾ ಕ್ರಮಗಳನ್ನು ಮಾಡಿಕೊಳ್ಳಬೇಕು ಎಂದು ಸೂಚಿಸಿದರು.

ಸಕಾಳಕ್ಕೆ ಶುದ್ದ ಕುಡಿಯುವ ನೀರು ಪೂರೈಕೆಯಾಗಬೇಕು. ಓವರ್‌ಹೆಡ್ ಟ್ಯಾಂಕ್, ತೊಂಬೆ, ಇನ್ನಿತರ ಕುಡಿಯುವ ನೀರಿನ ಸಂಗ್ರಹಗಾರಗಳಲ್ಲಿ ಸ್ವಚ್ಚತೆ ಕಾಪಾಡಿಕೊಳ್ಳಬೇಕು. ನೀರಿನ ಮಾದರಿಗಳನ್ನು ಪರೀಕ್ಷಿಸಿ ಕುಡಿಯಲು ಯೋಗ್ಯವೇ ಎಂದು ಖಾತರಿ ಪಡಿಸಿಕೊಳ್ಳಿ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಖುದ್ದು ಪರಿಶೀಲಿಸಿ, ಆರೋಗ್ಯ ಇಲಾಖೆ, ಗ್ರಾಮೀಣ ನೀರು ಮತ್ತು ನೈರ್ಮಲ್ಯ ಇಲಾಖೆಯ ಅಧಿಕಾರಿಗಳ ಸಹಕಾರದಿಂದ ಕುಡಿಯುವ ನೀರಿನ ಮಾದರಿ ಪರೀಕ್ಷೆ ವರದಿಗಳನ್ನು ಪಡೆದುಕೊಳ್ಳಿ ಎಂದರು.

ಜಾನುವಾರುಗಳಿಗೆ ಅವಶ್ಯವಿರುವ ಪ್ರಮಾಣದಲ್ಲಿ ಮೇವು ದಾಸ್ತಾನು ಮಾಡಿಕೊಳ್ಳಿ. ಅಗತ್ಯವಿರುವೆಡೆ ಸರ್ಕಾರಿ ಭೂಮಿಗಳಲ್ಲಿ ಮೇವು ಬೆಳೆಯಲು ಕ್ರಮವಹಿಸಬೇಕು. ಈಗಾಗಲೇ ಮೇವಿನ ಬೀಜದ ಪೊಟ್ಟಣಗಳನ್ನು ವಿತರಿಸಿರುವ ಪ್ರದೇಶಗಳಲ್ಲಿ ಯಾವ ಪ್ರಮಾಣದಲ್ಲಿ ಮೇವು ಬೆಳೆಯಲಾಗುತ್ತಿದೆ. ಬೇಸಿಗೆ ಸಂದರ್ಭದಲ್ಲಿ ಕಾಣಿಸಿಕೊಳ್ಳಬಹುದಾದ ಸಾಂಕ್ರಾಮಿಕ ರೋಗಗಳ ತಡೆಗೆ ಆರೋಗ್ಯ ಇಲಾಖೆ ವಿಶೇಷ ಕಣ್ಗಾವಲು ಇಡಬೇಕು. ಕಲುಷಿತ ನೀರು ಮತ್ತು ಆಹಾರದಿಂದ ಹರಡಬಹುದಾದ ಸಾಂಕ್ರಾಮಿಕ ರೋಗಗಳನ್ನು ನಿಯಂತ್ರಿಸಲು ವ್ಯಾಪಕವಾದ ಕ್ರಮಗಳಿಗೆ ಮುಂದಾಗಬೇಕಿದೆ ಎಂದು ತಿಳಿಸಿದರು.

ತಾಲೂಕುಗಳಲ್ಲಿಯೂ ತಹಶೀಲ್ದಾರರು ಟಾಸ್ಕ್ ಫೋರ್ಸ್ ಸಮಿತಿ ಸಭೆಯನ್ನು ಇನ್ನು 10 ದಿನಗಳೊಳಗೆ ಕರೆದು ಕುಡಿಯುವ ನೀರು, ಮೇವು, ಕೃಷಿ ಚಟುವಟಿಕೆಗಳಂತಹ ಇನ್ನಿತರ ಪ್ರಮುಖ ವಿಷಯಗಳನ್ನು ಚರ್ಚಿಸಿ ಕೈಗೊಳ್ಳಬೇಕಿರುವ ಮುಂಜಾಗ್ರತಾ ಕ್ರಮಗಳ ಬಗ್ಗೆ ನಿರ್ಣಯ ತೆಗೆದುಕೊಳ್ಳಬೇಕು. ಕೃಷಿ, ತೋಟಗಾರಿಕೆ ಚಟುವಟಿಕೆಗಳು, ರೈತರಿಗೆ ಪರಿಹಾರ, ಫ್ರೂಟ್ಸ್ ಪ್ರಗತಿ ಸೇರಿದಂತೆ ಇನ್ನಿತರ ವಿಷಯಗಳ ಕುರಿತು ಸುಧೀರ್ಘವಾಗಿ ಸಭೆಯಲ್ಲಿ ಪರಿಶೀಲಿಸಲಾಯಿತು.

ಸಭೆಯಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಗೀತಾ ಹುಡೇದ, ಉಪವಿಭಾಗಾಧಿಕಾರಿ ಮಹೇಶ್, ಜಿಲ್ಲಾ ಪಂಚಾಯಿತಿ ಮುಖ್ಯ ಯೋಜನಾಧಿಕಾರಿ ಪ್ರಭುಸ್ವಾಮಿ, ತಹಶೀಲ್ದಾರರಾದ ಬಸವರಾಜು, ಮಂಜುಳ, ಗುರುಪ್ರಸಾದ್, ರಮೇಶ್ ಬಾಬು, ಜಯಪ್ರಕಾಶ್, ಜಂಟಿ ಕೃಷಿ ನಿರ್ದೇಶಕ ಎಸ್.ಎಸ್.ಆಬಿದ್, ತೋಟಗಾರಿಕೆ ಉಪನಿರ್ದೇಶಕ ಶಿವಪ್ರಸಾದ್, ಪಶುಸಂಗೋಪನೆ ಇಲಾಖೆಯ ಉಪನಿರ್ದೇಶಕ ಡಾ.ಹನುಮೇಗೌಡ, ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಸ್.ಚಿದಂಬರ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಕಾರ್ಯಪಾಲಕ ಎಂಜಿನಿಯರ್ ಮಧುಸೂದನ್, ಜಿಲ್ಲಾ ನಗರಾಭಿವೃದ್ದಿ ಕೋಶದ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ರಾಮಚಂದ್ರ ಹಾಗೂ ಇತರರು ಉಪಸ್ಥಿತರಿದ್ದರು.