ನ್ಯೂಸ್

ವಿವಿಧ ಗ್ರಾಮಗಳಲ್ಲಿ ಸಂವಿಧಾನ ಜಾಗೃತಿ ಜಾಥಾ ಕಾರ್ಯಕ್ರಮ

ಚಾಮರಾಜನಗರ : ಗುಂಡ್ಲುಪೇಟೆ ತಾಲೂಕಿನ ಬಾಚಹಳ್ಳಿ, ವಡ್ಡಗೆರೆ, ಕೊಡಸೋಗೆ ಗ್ರಾಮದಲ್ಲಿ ಸಂವಿಧಾನ ಜಾಗೃತಿ ಜಾಥಾಗೆ ಬುಧವಾರ ಅದ್ದೂರಿ ಸ್ವಾಗತ ನೀಡಲಾಯಿತು.

ಬಾಚಹಳ್ಳಿ ಗ್ರಾಮದಲ್ಲಿ ಬಾಬಾ ಸಾಹೇಬರ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಸ್ವಾಗತಿಸಲಾಯಿತು. ಬಳಿಕ ಅಲಂಕೃತಗೊಂಡ ಎತ್ತಿನಗಾಡಿಗಳು ಸಂವಿಧಾನ ಜಾಗೃತಿ ಸ್ತಬ್ಧಚಿತ್ರ ಮೆರವಣಿಗೆಯಲ್ಲಿ ಪಾಲ್ಗೊಂಡು ವಿಶೇಷ ಮೆರಗು ನೀಡಿದವು. ಬೈಸಿಕಲ್ ರ‌್ಯಾಲಿ, ವಿವಿಧ ಕಲಾತಂಡಗಳು ಸಹ ಸೇರ್ಪಡೆಗೊಂಡು ಇನ್ನಷ್ಟು ಅರ್ಥಪೂರ್ಣಗೊಳಿಸಿದವು. ಯುವಜನರು ಬೈಕ್ ರ‌್ಯಾಲಿ ನಡೆಸಿದರು.

ವೇದಿಕೆ ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶಿವಮ್ಮ, ಉಪಾಧ್ಯಕ್ಷ ವೆಂಕಟಯ್ಯ, ಇತರ ಸದಸ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಕನ್ನಡ ಶಿಕ್ಷಕರಾದ ಗುರುಸಿದ್ದನಾಯಕ ಸಂವಿಧಾನ ಮಹತ್ವದ ಕುರಿತು ಉಪನ್ಯಾಸ ನೀಡಿದರು. ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಮೋಹನ್‌ಕುಮಾರ್, ಡಾ.ಸಿ.ಪಿ.ಜಗದೀಶ್ ಇತರರು ಉಪಸ್ಥಿತರಿದ್ದರು.

ವಡ್ಡಗೆರೆ ಗ್ರಾಮದಲ್ಲಿಯೂ ಡಾ.ಬಿ.ಆರ್. ಅಂಬೇಡ್ಕರ್ ಪ್ರತಿಮೆಗೆ ಪುಷ್ಪಾರ್ಚನೆ ನೆರವೇರಿಸುವ ಮೂಲಕ ಜಾಗೃತಿ ಜಾಥಾವನ್ನು ಬರಮಾಡಿಕೊಳ್ಳಲಾಯಿತು. ಪೂರ್ಣಕುಂಭ ಹಿಡಿದು ಮಹಿಳೆಯರು ಸಂಭ್ರಮದಿಂದ ಪಾಲ್ಗೊಂಡರು. ಯುವಜನರು ಆಟೋ, ಬೈಕ್ ರ‌್ಯಾಲಿ ನಡೆಸಿ ಗಮನ ಸೆಳೆದರು. ವಿವಿಧ ಕಲಾ ತಂಡಗಳು, ವಿದ್ಯಾರ್ಥಿಗಳು ಜಾಗೃತಿ ಕಾರ್ಯಕ್ರಮಕ್ಕೆ ಉತ್ಸಾಹ ತುಂಬಿದರು. ನಂತರ ನಡೆದ ವೇದಿಕೆ ಕಾರ್ಯಕ್ರಮದಲ್ಲಿ ಗ್ರಾಪಂ ಅಧ್ಯಕ್ಷೆ ಮಹದೇವಮ್ಮ, ಉಪಾಧ್ಯಕ್ಷೆ ಮಂಗಳಮ್ಮ, ಇತರ ಸದಸ್ಯರು ಪಾಲ್ಗೊಂಡರು. ಶಿಕ್ಷಕರಾದ ಚೈತ್ರ ಮುಖ್ಯ ಭಾಷಣ ಮಾಡಿದರು.

ಕಾರ್ಯಕ್ರಮದ ನೋಡಲ್ ಅಧಿಕಾರಿ ಅಕ್ಷರ ದಾಸೋಹದ ಸಹಾಯಕ ನಿರ್ದೇಶಕ ಮಂಜಣ್ಣ, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಮೋಹನ್‌ಕುಮಾರ್, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ನವೀನ್ ಮಲ್ಹೋತ್ರ, ವಿವಿಧ ಸಂಘಟನೆಗಳ ಪದಾಧಿಕಾರಿಗಳು ಭಾಗವಹಿಸಿದ್ದರು.
ಕೊಡಸೋಗೆ ಗ್ರಾಮದಲ್ಲಿಯೂ ಸಂವಿಧಾನ ಜಾಗೃತಿ ಜಾಥಾ ಸಂಚರಿಸಿತು. ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸಿದ್ದಮ್ಮಣಿ, ಉಪಾಧ್ಯಕ್ಷ ಪುಟ್ಟಮ್ಮ, ಇತರ ಸದಸ್ಯರು, ಕಾರ್ಯಕ್ರಮ ನೋಡಲ್ ಅಧಿಕಾರಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ದಿಲೀಪ್ ಇತರರು ಪಾಲ್ಗೊಂಡರು.