ನ್ಯೂಸ್

ಅಂಗವಿಕರಿಗೆ ದಕ್ಕದ ಸವಲತ್ತು

ಚಾಮರಾಜನಗರ: ಅಂಗವಿಕಲರ ಮೇಲೆ ಕರುಣೆ ತೋರಿಸುವುದು ಬೇಡ. ಸೌಲಭ್ಯಗಳನ್ನು ಕೊಟ್ಟು ಸ್ವಾವಲಂಬಿಗಳನ್ನಾಗಿ ಮಾಡಬೇಕು ಎನ್ನುವ ಮಾತು ಕಾರ್ಯರೂಪಕ್ಕೆ ಬರಬೇಕಿದೆ.

ಚಾಮರಾಜನಗರ ತಾಲೂಕಿನಲ್ಲಿ 6130, ಗುಂಡ್ಲುಪೇಟೆ ತಾಲೂಕಿನಲ್ಲಿ 4006, ಕೊಳ್ಳೇಗಾಲ ತಾಲೂಕಿನಲ್ಲಿ 3150, ಹನೂರು ತಾಲೂಕಿನಲ್ಲಿ 3277, ಯಳಂದೂರು ತಾಲೂಕಿನಲ್ಲಿ 1938 ಅಂಗವಿಕಲರು ಇದ್ದಾರೆ. ಇವರಿಗಾಗಿ ಮಾಸಾಶನ, ವಿವಿಧ ಸೌಲಭ್ಯಗಳನ್ನು ನೀಡಲಾಗುತ್ತಿದ್ದು, ಕೆಲವರಿಗೆ ಸವಲತ್ತು ತಲುಪುತ್ತಿಲ್ಲ. ಇನ್ನೂ ಕೆಲವರಿಗೆ ಸೌಲಭ್ಯಗಳ ಕುರಿತು ಮಾಹಿತಿಯೇ ಇಲ್ಲ. ಗ್ರಾಮೀಣ ಭಾಗದಲ್ಲಿ ಅಂಗವಿಕಲರಿಗಾಗಿ ಕೆಲಸ ಮಾಡುತ್ತಿರುವ ವಿವಿಧೊದ್ದೇಶ ಪುನರ್ವಸತಿ ಕಾರ್ಯಕರ್ತರಿಗೆ ಸೇವೆಗೆ ತಕ್ಕ ಗೌರವ ಸಿಗುತ್ತಿಲ್ಲ. ಶಕ್ತಿ ಯೋಜನೆ ಜಾರಿಯಾದ ಬಳಿಕ ಬಸ್‌ಗಳಲ್ಲಿ ಅಂಗವಿಕಲರ ಪ್ರಯಾಣವೂ ದುಸ್ತರವಾಗಿದೆ. ಇಲಾಖೆಗಳಲ್ಲಿ ಅಂಗವಿಕಲರಿಗಾಗಿ ಮೀಸಲಿಟ್ಟಿರುವ ಅನುದಾನ ಎಷ್ಟು? ಹೇಗೆ ಖರ್ಚಾಗುತ್ತಿದೆ ಎಂಬುದೂ ತಿಳಿಯುತ್ತಿಲ್ಲ. ಕಡಿಮೆ ಮಾಸಾಶನದಲ್ಲಿ ಜೀವನ ನಿರ್ವಹಣೆ ಕಷ್ಟಕರವಾಗಿದೆ. ಸರ್ಕಾರದ ನಿಯಮದಂತೆ ಇಲಾಖೆಗಳ ತಾತ್ಕಾಲಿಕ ಹುದ್ದೆಗಳಲ್ಲಿ ಮೀಸಲಾತಿ ಇದ್ದರೂ ಕಾರ್ಯರೂಪಕ್ಕೆ ಬರುತ್ತಿಲ್ಲ. ಸಂಬಂಧಪಟ್ಟ ಇಲಾಖೆಗಳಿಂದ ಸೌಲಭ್ಯವೂ ದೊರೆಯತ್ತಿಲ್ಲ. ಸೌಲಭ್ಯ ಪಡೆಯಲು ಇಲಾಖೆಗಳಿಗೆ ತೆರಳಿದರೂ ಸಂಬಂಧಪಟ್ಟ ಕಚೇರಿ ತಲುಪಲು ರ‌್ಯಾಂಪ್ ಸೇರಿದಂತೆ ಪೂರಕ ವ್ಯವಸ್ಥೆಗಳು ಇಲ್ಲದೆ ಅಂಗವಿಕಲರು ತೊಂದರೆ ಪಡುತ್ತಿದ್ದಾರೆ. ಅಂಗವಿಕಲರ ಇಂತಹ ಹಲವು ಸಮಸ್ಯೆಗಳ ಕುರಿತು ಲೌಡ್ ಸ್ಪೀಕರ್‌ನಲ್ಲಿ ಅಭಿಪ್ರಾಯ ವ್ಯಕ್ತವಾಗಿದೆ.

ಅನುದಾನ ಬಳಕೆ ಮಾಡುತ್ತಿಲ್ಲ
ಜಿಲ್ಲೆಯಲ್ಲಿ ಅಂಗವಿಕಲರ ಸಮಸ್ಯೆಗಳು ಬಗೆಹರಿಯದೆ ಹಾಗೇ ಇವೆ. ಶಾಲೆ-ಕಾಲೇಜುಗಳಲ್ಲಿ ರ‌್ಯಾಂಪ್‌ವಾಕ್, ಶೌಚಗೃಹಗಳಿಲ್ಲ. ಜಿಲ್ಲಾಡಳಿತ ಭವನದಲ್ಲಿರುವ ಅಂಗವಿಕಲರ ಕಚೇರಿ ಮುಂಭಾಗದಲ್ಲಿರುವ ಶೌಚಗೃಹಕ್ಕೆ ಬೀಗ ಜಡಿಯಲಾಗಿದೆ. ಚೆನ್ನಾಗಿರುವವರಿಗೆ ಶಕ್ತಿ ಯೋಜನೆಯಡಿ ಉಚಿತ ಬಸ್ ಪ್ರಯಾಣ ಕಲ್ಪಿಸಲಾಗಿದ್ದು, ಅಂಗವಿಕಲರಿಗೆ ಉಚಿತ ಪ್ರಯಾಣಕ್ಕೆ ಅವಕಾಶವಿಲ್ಲದಂತಾಗಿದೆ. ಅಂಗವಿಕಲರ ಮಾಸಾಶನ ಹೆಚ್ಚಳದ ಬಗ್ಗೆ ಸರ್ಕಾರ ತುಟಿ ಬಿಚ್ಚುತ್ತಿಲ್ಲ. ಮೀಸಲಾದ ಅನುದಾನವನ್ನು ಯಾವ ಇಲಾಖೆಯವರೂ ಸಮರ್ಪಕವಾಗಿ ಬಳಕೆ ಮಾಡುತ್ತಿಲ್ಲ. ಜಿಲ್ಲಾಧಿಕಾರಿ ನೇತೃತ್ವದಲ್ಲಿ ಕುಂದುಕೊರತೆ ಸಭೆ ಕರೆದು, ಒಂದು ತಿಂಗಳಲ್ಲಿ ಅಂಗವಿಕಲರ ಸಮಸ್ಯೆ ಬಗೆಹರಿಸಿ ಎಂದರೂ 3 ತಿಂಗಳಾದರೂ ಅಧಿಕಾರಿಗಳು ಕ್ರಮ ವಹಿಸಿಲ್ಲ.
ರಮೇಶ್
ಅಧ್ಯಕ್ಷ, ಜಿಲ್ಲಾ ಅಂಗವಿಕಲರ ಕ್ಷೇಮಾಭಿವೃದ್ಧಿ ಸಂಘ, ಚಾಮರಾಜನಗರ

ಬಸ್‌ಗಳಲ್ಲಿ ಸೀಟು ಸಿಗುತ್ತಿಲ್ಲ
ಸಾರಿಗೆ ಬಸ್‌ಗಳಲ್ಲಿ ಸಂಚಾರ ಮಾಡುವ ಅಂಗವಿಕಲರಿಗೆ ಶಕ್ತಿ ಯೋಜನೆಯ ಪರಿಣಾಮ ಆಸನಗಳು ಸಿಗುತ್ತಿಲ್ಲ. ಅಂಗವಿಕಲರಿಗೆ ಕೂರಲು ಅವಕಾಶ ಮಾಡಿಕೊಡಬೇಕು. ಶೇ.75 ಕ್ಕಿಂತ ಕಡಿಮೆ ಅಂಗವಿಕಲತೆ ಹೊಂದಿರುವವರಿಗೆ 800 ರೂ. ಮಾಸಾಶನ ಬರುತ್ತಿದೆ. ಪ್ರಸ್ತುತ ಬೆಲೆ ಏರಿಕೆಯಲ್ಲಿ ಇದು ಸಾಕಾಗುವುದಿಲ್ಲ. ಅದನ್ನು 2000 ರೂ.ಗಳಿಗೆ ಏರಿಕೆ ಮಾಡಬೇಕು. ಶೇ.75 ಕ್ಕಿಂತ ಹೆಚ್ಚು ಅಂಗವಿಕಲತೆ ಹೊಂದಿರುವವರಿಗೆ 3000 ರೂ. ಮಾಸಾಶನ ಹೆಚ್ಚಳ ಮಾಡಬೇಕು.
ಮಹೇಶ್ವರಿ
ಅಂಗವಿಕಲೆ, ಚಾಮರಾಜನಗರ

ಮಾಸಾಶನ ಹೆಚ್ಚಳ ಮಾಡಿ
ಅಂಗವಿಲಕರಿಗೆ ಉಚಿತ ಬಸ್ ಪ್ರಯಾಣ ನೀಡಬೇಕು. ಹಾಗೆಯೆ, ಗ್ಯಾರಂಟಿ ಯೋಜನೆಯಂತೆ ನಮಗೂ ವಿಶೇಷ ಪ್ಯಾಕೇಜ್ ಘೋಷಣೆ ಮಾಡಬೇಕಿದೆ. ಶೇ.75 ರಷ್ಟು ಅಂಗವಿಲಕತೆ ಇದ್ದರೆ ತಿಂಗಳಿಗೆ 1400 ರೂ. ಮಾಸಾಶನ ನೀಡಲಾಗುತ್ತಿದೆ. ಇದು ನಮಗೆ ಸಾಲುತ್ತಿಲ್ಲ. ಜೀವನ ನಿರ್ವಹಣೆ ಕಷ್ಟವಾಗಿದೆ. ಅಂಗವೈಕಲ್ಯದಿಂದ ಶ್ರಮದ ಕೆಲಸಗಳನ್ನು ಮಾಡಲು ಸಾಧ್ಯವಾಗುವುದಿಲ್ಲ. ಮಾಸಾಶನ ಹೆಚ್ಚು ಮಾಡಿದರೆ ಸಾಮಾಜಿಕ ಭದ್ರತೆ ನೀಡಿದಂತಾಗುತ್ತದೆ.
ಆರ್.ಯತೀಶ್
ಶ್ರೀಸುಬ್ರಮಣ್ಯ ದೇವಾಲಯ ರಸ್ತೆ, ಕೊಳ್ಳೇಗಾಲ

ಮಲತಾಯಿ ಧೋರಣೆ
ನಿಜವಾದ ಅಂಗವಿಕಲರು ಸೌಲಭ್ಯಗಳಿಂದ ವಂಚಿತರಾಗುತ್ತಿದ್ದಾರೆ. ಮಹಿಳೆಯರು ಉಚಿತವಾಗಿ ಬಸ್ ಪ್ರಯಾಣ ಮಾಡುತ್ತಿದ್ದಾರೆ. ಅಂಗವಿಕಲರಿಗೆ ಈ ಸೌಲಭ್ಯ ದೊರೆಯುತ್ತಿಲ್ಲ. ಇದು ಮಲತಾಯಿ ಧೋರಣೆಯಾಗಿದೆ. ಸರ್ಕಾರಗಳು ಮತಕ್ಕಾಗಿ ಈ ರೀತಿ ಮಾಡಿವೆ. ಕೇಂದ್ರ ಸರ್ಕಾರ ಬಜೆಟ್‌ನಲ್ಲಿ ಅಂಗವಿಕಲರಿಗೆ ಏನೂ ನೀಡಿಲ್ಲ. ರಾಜ್ಯ ಸರ್ಕಾರದಲ್ಲಿ ಮೀಸಲಿರುವ ಶೇ.5 ರಷ್ಟು ಅನುದಾನವನ್ನು ಸಮರ್ಪಕವಾಗಿ ಬಳಸುತ್ತಿಲ್ಲ. ನಗರಸಭೆಯಲ್ಲಿ ಶೇ.5 ರಷ್ಟು ಹಣ ಅಂಗವಿಕಲರಿಗೆ ಮೀಸಲಿದ್ದರೂ 3 ವರ್ಷಗಳಿಂದ ಇದನ್ನು ನಮಗಾಗಿ ಬಳಸುತ್ತಿಲ್ಲ.
ಕುಮಾರ್
ರಾಜ್ಯ ಅಂಗವಿಕಲರ ಒಕ್ಕೂಟದ ಉಪಾಧ್ಯಕ್ಷ, ಮಂಜುನಾಥ್‌ನಗರ, ಕೊಳ್ಳೇಗಾಲ

ಸೌಲಭ್ಯ ದೊರೆಯುತ್ತಿಲ್ಲ
ನಾನು ದೃಷ್ಟಿದೋಷ ಉಳ್ಳವನಾಗಿದ್ದು, ಪ್ರತಿ ತಿಂಗಳು 1,400 ರೂ. ಮಾಸಾಶನವಷ್ಟೇ ಬರುತ್ತಿದೆ. ಇದನ್ನು ಹೊರತುಪಡಿಸಿ ಯಾವುದೇ ಸರ್ಕಾರಿ ಸವಲತ್ತು ದೊರೆತಿಲ್ಲ. ಇತ್ತ ಗ್ರಾಮ ಪಂಚಾಯಿತಿಯಲ್ಲಿ ಅಂಗವಿಕಲರಿಗೆ ಅನುದಾನ ಮೀಸಲಿದ್ದರೂ ಸಿಗುತ್ತಿಲ್ಲ. ಇನ್ನು ಬಸ್‌ಪಾಸ್ ಮಾಡಿಸಿಕೊಳ್ಳಲು ನನ್ನಿಂದ ಸಾಧ್ಯವಾಗುತ್ತಿಲ್ಲ. ಹೇಗೋ ಕೂಲಿ ಮಾಡಿಕೊಂಡು ಜೀವನ ಸಾಗಿಸುತ್ತಿದ್ದೇನೆ. ಸರ್ಕಾರ ಮಾಸಾಶನವನ್ನು ಹೆಚ್ಚಿಸಬೇಕು. ಬಸ್‌ಪಾಸ್ ಮಾಡಿಸಿಕೊಡಬೇಕು.
ಮಹೇಶ್
ಅಂಗವಿಕಲ, ಕೆಂಚಯ್ಯನದೊಡ್ಡಿ, ಹನೂರು

ನನಗೊಂದು ಉದ್ಯೋಗ ಕೊಡಿ
ನಾನು ಎಂ.ಕಾಂ ಪದವಿ ಮುಗಿಸಿದ್ದೇನೆ. ಆದರೆ ಉದ್ಯೋಗವಿಲ್ಲ. ಪ್ರತಿ ತಿಂಗಳು 800 ರೂ. ಮಾತ್ರ ಮಾಸಾಶನ ಬರುತ್ತಿದೆ. ಇದರಿಂದ ಜೀವನ ನಡೆಸಲು ಹೇಗೆ ಸಾಧ್ಯ? ಹಾಗಾಗಿ, ತುಂಬ ತೊಂದರೆ ಅನುಭವಿಸುವಂತಾಗಿದೆ. ಸರ್ಕಾರದಿಂದ ಯಾವುದೇ ಸವಲತ್ತು ನನಗೆ ಸಿಕ್ಕಿಲ್ಲ. ಸಂಬಂಧಪಟ್ಟವರು ಇತ್ತ ಗಮನಹರಿಸಿ ನನಗೆ ಯಾವುದಾದರೂ ಉದ್ಯೋಗವನ್ನು ದೊರಕಿಸಿಕೊಟ್ಟರೆ ಅನುಕೂಲವಾಗುತ್ತದೆ.
ವಿ.ಶ್ರೀನಿವಾಸ್
ಅಂಗವಿಕಲ, ಹನೂರು

ಗುರುತಿನಚೀಟಿಗೆ ಶಿಬಿರ ಆಯೋಜಿಸಿ
ಯಳಂದೂರು ತಾಲೂಕಿನಲ್ಲಿ 1,600ಕ್ಕೂ ಹೆಚ್ಚು ಅಂಗವಿಕಲರು ಇದ್ದು, ಗುರುತಿನಚೀಟಿ ಪಡೆಯಲು ಜಿಲ್ಲಾ ಕೇಂದ್ರಕ್ಕೆ ಬರಬೇಕು. ಇದರಿಂದ ಇನ್ನೂ ಕೆಲವರು ಗುರುತಿನಚೀಟಿ ಮಾಡಿಸಿಲ್ಲ. ಮದ್ಯವರ್ತಿಗಳ ಮೊರೆ ಹೋಗಬೇಕಾದ ಪರಿಸ್ಥಿತಿ ಇದೆ. ತಾಲೂಕು ಮಟ್ಟದಲ್ಲಿ ಶಿಬಿರಗಳನ್ನು ಆಯೋಜಿಸುವ ಮೂಲಕ ಗುರುತಿನ ಚೀಟಿ ನೀಡುವ ವ್ಯವಸ್ಥೆ ಮಾಡಿದರೆ ಎಲ್ಲರಿಗೂ ಅನುಕೂಲವಾಗಲಿದೆ.
ಬಸವಣ್ಣ
ಬೂದಿತಿಟ್ಟು, ಯಳಂದೂರು

ಸಂಚಾರಕ್ಕೆ ವ್ಯವಸ್ಥೆ ಕಲ್ಪಿಸಿ
ಜಿಲ್ಲೆಯ ಕೆಲವು ಸರ್ಕಾರಿ ಕಚೇರಿಗಳಲ್ಲಿ ಅಂಗವಿಕಲರು ಸಂಚರಿಸಲು ಸೂಕ್ತ ರ‌್ಯಾಂಪ್ ವ್ಯವಸ್ಥೆ ಇಲ್ಲ. ಹೀಗಾಗಿ, ಕಚೇರಿಗಳ ಮುಂಭಾಗವೇ ನಿಂತುಕೊಳ್ಳಬೇಕು. ನಾವು ಓಡಾಡಲು ರ‌್ಯಾಂಪ್ ವ್ಯವಸ್ಥೆ ಕಲ್ಪಿಸಿಕೊಡುವ ಮೂಲಕ ಸರ್ಕಾರಿ ಕಚೇರಿಗಳಿಗೆ ಬಂದು ನಮ್ಮ ಕೆಲಸಗಳನ್ನು ನಾವೇ ಮಾಡಿಸಿಕೊಳ್ಳಲು ನೆರವಾಗುತ್ತದೆ.
ಮಂಜುನಾಥ್
ಮದ್ದೂರು ಗ್ರಾಮ, ಯಳಂದೂರು

3 ತಿಂಗಳಿಗೊಮ್ಮೆ ಸಭೆ ಮಾಡಿ
ಅಂಗವಿಕಲರ ಕುಂದುಕೊರತೆ ಆಲಿಸಲು 3 ತಿಂಗಳಿಗೊಮ್ಮೆ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಸಭೆ ನಡೆಸಬೇಕು. ಅಂಗವಿಕಲರಿಗೆ ಯುಡಿಐಡಿ ಕಾರ್ಡ್ ಮಾಡಿಕೊಡಲು ಶಿಬಿರ ಆಯೋಜನೆ ಮಾಡಬೇಕು. ಸಾಧನ-ಸಲಕರಣೆಗಳ ವಿತರಣೆ ಶಿಬಿರಗಳನ್ನೂ ಹಮ್ಮಿಕೊಳ್ಳಬೇಕು. ಅಂಗವಿಕಲರಿರುವ ಮನೆಗಳಲ್ಲಿ ವಿಶೇಷ ಶೌಚಗೃಹ ನಿರ್ಮಾಣ ಮಾಡಿಸಿಕೊಡಬೇಕು. ಗ್ರಾಮೀಣ ಪುನರ್ವಸತಿ ಕಾರ್ಯಕರ್ತರು ಗ್ರಾಮ ಪಂಚಾಯಿತಿ ಸಭೆಗಳಲ್ಲಿ ಭಾಗವಹಿಸುವಂತೆ ಮಾಡಬೇಕು.
ವೆಂಕಟೇಶ
ಹೊಂಗಹಳ್ಳಿ, ಗುಂಡ್ಲುಪೇಟೆ

ಗ್ರಾಪಂಗಳಲ್ಲಿ ಅನುದಾನ ಬಳಸುತ್ತಿಲ್ಲ
ಬಹುತೇಕ ಗ್ರಾಮ ಪಂಚಾಯಿತಿಗಳಲ್ಲಿ ಶೇ.5 ಅನುದಾನ ಬಳಕೆಯಾಗುತ್ತಿಲ್ಲ. 2013-14ರಲ್ಲಿ ಮಹದೇವಪ್ರಸಾದ್ ಅವರ ಶಾಸಕರ ಪ್ರದೇಶಾಭಿವೃದ್ಧಿ ಅನುದಾನ ಹೊರತುಪಡಿಸಿ ನಂತರ ಇದುವರೆಗೆ ಬಳಕೆಯಾಗಿಲ್ಲ.
ಜಿ.ಎಸ್.ಮಂಜುಳಾ
ತಾಲೂಕು ವಿವಿಧೊದ್ದೇಶ ಪುನರ್ವಸತಿ ಕಾರ್ಯಕರ್ತೆ, ಗುಂಡ್ಲುಪೇಟೆ

ಮಾರ್ಚ್‌ನಲ್ಲಿ ಸಭೆ
ಯುಡಿಐಡಿ ಕಾರ್ಡ್ ಮಾಡಿಸಲು ಈಗಾಗಲೇ ಶಿಬಿರವನ್ನು ಮಾಡಿದ್ದೇವೆ. ಬಸ್‌ಗಳಲ್ಲಿ ಅಂಗವಿಕಲರಿಗೆ ಸೀಟ್‌ಗಳು ಮೀಸಲಿತ್ತು. ಶಕ್ತಿ ಯೋಜನೆ ಜಾರಿಯಾದ ಬಳಿಕ ಅಂಗವಿಕಲರಿಗೆ ಸೀಟುಗಳು ಸಿಗುತ್ತಿಲ್ಲ. ಬಸ್ ಡ್ರೈವರ್ ಮತ್ತು ನಿರ್ವಾಹಕರು ಸೀಟ್ ಬಿಡಿಸಿಕೊಡಬೇಕು. ಸಾರ್ವಜನಿಕರು ಮಾನವೀಯತೆ ತೋರಬೇಕು. ಕಳೆದ ಬಾರಿ ಡಿಸೆಂಬರ್‌ನಲ್ಲಿ ಕುಂದುಕೊರತೆ ಸಭೆಯನ್ನು ಹಮ್ಮಿಕೊಳ್ಳಲಾಗಿತ್ತು. ಮುಂದಿನ ಸಲ ಮಾರ್ಚ್‌ನಲ್ಲಿ ಸಭೆ ಕರೆಯಲಾಗುವುದು.
ಸುರೇಶ್
ಜಿಲ್ಲಾ ಅಂಗವಿಕಲರ ಮತ್ತು ಹಿರಿಯ ನಾಗರಿಕರ ಕಲ್ಯಾಣಾಧಿಕಾರಿ(ಪ್ರಭಾರ), ಚಾಮರಾಜನಗರ