ಚಾಮರಾಜನಗರ: ಇಲ್ಲಿನ ಜಿಲ್ಲಾಸ್ಪತ್ರೆ ಆವರಣದಲ್ಲಿರುವ ಸೈಕಲ್ ನಿಲ್ದಾಣದಲ್ಲಿ 2017ರ ಸೆ.17ರಲ್ಲಿ ಜನಿಸಿದ 1 ದಿನದ ಗಂಡು ಮಗುವನ್ನು ಬಿಟ್ಟು ಹೋಗಲಾಗಿತ್ತು…, 2018 ಏ.14ರಂದು ಗುಂಡ್ಲುಪೇಟೆ ಪಟ್ಟಣದಲ್ಲಿ ಜನ್ಮ ಪಡೆದ 1 ದಿನದ ಹೆಣ್ಣುಮಗು ಚರಂಡಿಯೊಂದರಲ್ಲಿ ಪತ್ತೆಯಾಗಿತ್ತು…, 2020ರ ೆ.3 ರಂದು ನಗರದ ರಂಗನಾಥ ಕಲ್ಯಾಣ ಮಂಟಪದ ಬೀದಿಯಲ್ಲಿ ಮಗುವನ್ನು ಎಸೆದು ಹೋಗಲಾಗಿತ್ತು..!
ಇದು ಹೆತ್ತಮಕ್ಕಳನ್ನೇ ಪಾಲಕರು ತ್ಯಜಿಸಿದ ಅಮಾನವೀಯ ಸ್ಥಿತಿ. ಜಿಲ್ಲೆಯಲ್ಲಿ ವಿವಾಹಪೂರ್ವ ಲೈಂಗಿಕ ಸಂಬಂಧ, ಅಂಗವಿಕಲ ಮಗು ಜನನ, ಹೆಣ್ಣು ಮಗು ಎಂಬ ಕಾರಣಕ್ಕೆ ಕರುಳಬಳ್ಳಿಗಳನ್ನು ಬಿಟ್ಟು ಹೋಗಲಾಗುತ್ತಿದೆ. ಇತ್ತೀಚೆಗೆ ಗುಂಡ್ಲುಪೇಟೆ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಹಾಸನದ ಮಹಿಳೆ ತನ್ನ ಮಗುವನ್ನು ವೃದ್ಧೆಯೊಬ್ಬರಿಗೆ ನೀಡಿ ಶೌಚಗೃಹಕ್ಕೆ ಹೋಗುವುದಾಗಿ ಹೇಳಿ ಪರಾರಿಯಾಗಿದ್ದಳು. 1.3 ವರ್ಷದ ಹೆಣ್ಣು ಮಗುವಿನ ಪಾಲಕರ ಪತ್ತೆಗಾಗಿ ಪ್ರಕಟಣೆ ಹೊರಡಿಸಿದ ಬಳಿಕ ಮಾಹಿತಿ ತಿಳಿದು ತಂದೆ (ಹಾಸನ ನಿವಾಸಿ) ಕಂದನನ್ನು ಪಡೆದುಕೊಳ್ಳಲು ಬಂದಿದ್ದರು. ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಮಗುವನ್ನು ಹಾಸನದ ಜಿಲ್ಲಾ ಮಕ್ಕಳ ರಕ್ಷಣಾ ಘಟಕಕ್ಕೆ ನೀಡಿ ತಂದೆಗೆ ಮಗುವನ್ನು ಒಪ್ಪಿಸಲು ತಿಳಿಸಿತ್ತು.
ಈ ರೀತಿಯ ಅಮಾನವೀಯ ಘಟನೆಗಳು ಜಿಲ್ಲೆಯಲ್ಲಿ ನಡೆಯುತ್ತಲೇ ಇವೆ. ಹುಟ್ಟಿದ ಕೆಲವೇ ದಿನಗಳ ಮಗುವನ್ನು ಎಲ್ಲೆಂದರಲ್ಲಿ ಬಿಟ್ಟು ಹೋಗುವ ಪಾಪಿ ತಾಯಿ, ಮಗು ಜನ್ಮಕ್ಕೆ ಕಾರಣನಾಗಿ ಆಸರೆಯಾಗದ ನೀಚ ತಂದೆ ಬಹುಪಾಲು ಪ್ರಕರಣಗಳಲ್ಲಿ ಕೈಗೆ ಸಿಕ್ಕಿಲ್ಲ ಹಾಗೂ ಗುರುತು ಪತ್ತೆಯಾಗಿಲ್ಲ.
ಈ ಹಿಂದೆ ಕೊಳ್ಳೇಗಾಲ ತಾಲೂಕಿನ ಹಳ್ಳಿಯೊಂದರಲ್ಲಿ ತಾಯಿಯೊಬ್ಬಳು ತನ್ನ ಮಗುವನ್ನು ಗ್ರಾಮದ ಬಸ್ ನಿಲ್ದಾಣದಲ್ಲಿ ಬಿಟ್ಟು ಹೋಗಿದ್ದಳು. ಗ್ರಾಮಸ್ಥರು ಮಗುವಿನ ಗುರುತು ಪತ್ತೆ ಮಾಡಿದ್ದರು. ಅನೈತಿಕ ಸಂಬಂಧದ ಕಾರಣಕ್ಕೆ ತಾಯಿ ಮಗುವನ್ನು ಬಿಟ್ಟು ಹೋಗಿದ್ದಾಗಿ ತಿಳಿಸಿದ್ದಳು. ಎಲ್ಲೋ ಕೆಲವೇ ಕೆಲವು ಪ್ರಕರಣಗಳಲ್ಲಿ ಮಾತ್ರ ಮಗುವಿನ ತಾಯಿ ಯಾರೆಂದು ಗೊತ್ತಾಗುತ್ತಿದೆ.
ಅನಾಥ, ನಿರ್ಗತಿಕ, ಪರಿತ್ಯಕ್ತ, ಪಾಲಕರಿಂದ ಒಪ್ಪಿಸಲ್ಪಟ್ಟ ಹಾಗೂ ತಿರಸ್ಕರಿಸಲ್ಪಟ್ಟ ಮಕ್ಕಳಿಗಾಗಿಯೇ ಮಮತೆಯ ತೊಟ್ಟಿಲು ಎಂಬ ಯೋಜನೆ ಇದ್ದು, ಜಿಲ್ಲೆಯಲ್ಲಿ ಮಮತೆಯ ತೊಟ್ಟಿಲಲ್ಲಿ ಬೆಳೆದ ಹಲವು ಅನಾಥ ಮಕ್ಕಳಿಗೆ ದತ್ತು ಸ್ವೀಕಾರ ಕಾರ್ಯಕ್ರಮದಡಿ ಹೊಸ ಬದುಕು ಸಿಕ್ಕಿವೆ. ಸರ್ಕಾರದಿಂದ ಮಾನ್ಯತೆ ಪಡೆದ ವಿಶೇಷ ದತ್ತು ಸಂಸ್ಥೆಗಳು ಮಕ್ಕಳನ್ನು ಪೋಷಿಸುತ್ತವೆ. ಕೊಳ್ಳೇಗಾಲದ ಜೀವನ ಜ್ಯೋತಿ ಟ್ರಸ್ಟ್ ಇಂತಹ ಮಕ್ಕಳನ್ನು ನೋಡಿಕೊಳ್ಳುತ್ತಿದೆ. ಇಲ್ಲಿ ಬೆಳೆಯುತ್ತಿರುವ ಅನಾಥ ಮಕ್ಕಳನ್ನು ರಾಜ್ಯದ ವಿವಿಧ ಜಿಲ್ಲೆಗಳು, ಬೇರೆ ರಾಜ್ಯ, ಬೇರೆ ದೇಶಗಳ ಜನರೂ ಕಾನೂನು ಪ್ರಕಾರ ದತ್ತು ತೆಗೆದುಕೊಂಡಿದ್ದಾರೆ. ಆದರೆ ಈ ಬಗ್ಗೆ ಅರಿವಿಲ್ಲದವರು ಮಕ್ಕಳನ್ನು ಎಲ್ಲೆಂದರಲ್ಲಿ ಬಿಟ್ಟು ಹೋಗುತ್ತಿದ್ದಾರೆ.
ಇದು ಅಮಾನವೀಯತೆಗೆ ಉದಾಹರಣೆ
ನವಜಾತ ಶಿಶುಗಳನ್ನು ರಸ್ತೆ ಬದಿ, ಕಸದ ತೊಟ್ಟಿ, ಬಸ್ ನಿಲ್ದಾಣ ಇತರ ಕಡೆಗಳಲ್ಲಿ ಬಿಟ್ಟು ಹೋಗುವ ಅಮಾನವೀಯ ಘಟನೆಗೆ ಹಲವು ಉದಾಹರಣೆಗಳಿವೆ.
2014ರಲ್ಲಿ ತಾಲೂಕಿನ ಹೆಬ್ಬಸೂರು ಗ್ರಾಮದಲ್ಲಿ 3 ದಿನಗಳ ಹೆಣ್ಣುಮಗು ಕಸದ ತೊಟ್ಟಿಯಲ್ಲಿ ಸಿಕ್ಕಿತ್ತು. 2017ರಲ್ಲಿ 1 ದಿನದ ಮಗು ಜಿಲ್ಲಾಸ್ಪತ್ರೆಯ ಆವರಣದಲ್ಲಿರುವ ಸೈಕಲ್ ನಿಲ್ದಾಣದಲ್ಲಿ ದೊರೆತಿತ್ತು. 2018ರಲ್ಲಿ ಗುಂಡ್ಲುಪೇಟೆ ಪಟ್ಟಣದಲ್ಲಿ ಜನಿಸಿದ 1 ದಿನದ ಮಗು ಚರಂಡಿಯೊಂದರಲ್ಲಿ ಪತ್ತೆಯಾಗಿತ್ತು. 2020ರಲ್ಲಿ ನಗರದ ರಂಗನಾಥ ಕಲ್ಯಾಣ ಮಂಟಪದ ಬೀದಿಯಲ್ಲಿ ಮಗುವನ್ನು ಎಸೆದು ಹೋಗಲಾಗಿತ್ತು. ಇದೇ ವರ್ಷ ಹನೂರು ತಾಲೂಕಿನ ಎಲ್ಲೇಮಾಳ-ಬಿ.ಎಂ.ಹಳ್ಳಿ ಗ್ರಾಮದ ಮಧ್ಯಭಾಗದಲ್ಲಿರುವ ಚಾನಲ್ ಬಳಿಯ ರಸ್ತೆ ಬದಿಯಲ್ಲಿ ಹುಟ್ಟಿದ 3 ದಿನಗಳ ಹೆಣ್ಣು ಮಗುವನ್ನು ಬಾಕ್ಸ್‌ನಲ್ಲಿ ಇಟ್ಟು ಹೋಗಲಾಗಿತ್ತು.
ಮಕ್ಕಳನ್ನು ಸಾಕಲು ಆಗದೆ ಇದ್ದರೆ ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಮತ್ತು ಮಕ್ಕಳ ಕಲ್ಯಾಣ ಸಮಿತಿಗೆ ಒಪ್ಪಿಸಬೇಕು. ನಾವು ಮಕ್ಕಳನ್ನು ನೋಡಿಕೊಳ್ಳುತ್ತೇವೆ. ಎನ್.ಚೆಲುವರಾಜು, ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಅಧಿಕಾರಿ, ಚಾಮರಾಜನಗರ