ಚಾಮರಾಜನಗರ : ಪುರುಷ ಪ್ರಧಾನ ವ್ಯವಸ್ಥೆ ಮಹಿಳೆಯರಿಗೆ ಶಿಕ್ಷಣವನ್ನು ನಿರಾಕರಿಸಿದ ಕಾಲದಲ್ಲಿ ಶಿಕ್ಷಣ ಕಲಿತು ಮಹಿಳೆಯರಿಗಾಗಿ ಶಾಲೆಗಳನ್ನು ತೆರೆದ ಸಾವಿತ್ರಿ ಬಾಫುಲೆ ಎಲ್ಲರಿಗೂ ಪ್ರೇರಣೆಯಾಗಬೇಕು ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಉಪನಿರ್ದೇಶಕ ರಾಮಚಂದ್ರ ರಾಜೇ ಅರಸ್ ಹೇಳಿದರು.
ನಗರದ ವರನಟ ಡಾ.ರಾಜ್ಕುಮಾರ್ ರಂಗಮಂದಿರದಲ್ಲಿ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ವತಿಯಿಂದ ಬುಧವಾರ ಆಯೋಜಿಸಿದ್ದ ಕಲಿಕಾ ಬಲವರ್ಧನೆಗಾಗಿ ವಿದ್ಯಾರ್ಥಿ ಚಟುವಟಿಕೆ ಪುಸ್ತಕಗಳ ಕುರಿತು ಶೈಕ್ಷಣಿಕ ಕಾರ್ಯಾಗಾರ, ಸಾವಿತ್ರಿಬಾಯಿಫುಲೆ ಜನ್ಮದಿನಾಚರಣೆ ಹಾಗೂ ಸಾವಿತ್ರಿಬಾಯಿಫುಲೆ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
ಮಹಾರಾಷ್ಟ್ರದಲ್ಲಿ ಸಾವಿತ್ರಿಬಾಯಿಫುಲೆ ಸಾಮಾನ್ಯ ಕುಟುಂಬದಲ್ಲಿ ಜನಿಸಿದರು. ಶೂದ್ರ ಕುಟುಂಬದಲ್ಲಿ ಜನಿಸಿದ್ದರಿಂದ ಹಲವು ಕಟ್ಟುಪಾಡುಗಳನ್ನು ಎದುರಿಸಬೇಕಾಯಿತು. ಮಹಿಳೆ ಕಲಿತುಬಿಟ್ಟರೆ ಸಮಾಜ ಮುಂದೆ ಬರುತ್ತದೆ ಎಂದು ಪುರುಷ ಪ್ರಧಾನ ವ್ಯವಸ್ಥೆ ಅವರಿಗೆ ಶಿಕ್ಷಣ ಕಲಿಯಲು ಅವಕಾಶ ಮಾಡಿಕೊಡಲಿಲ್ಲ. ಅವರಿಗೆ ಹಲವು ಅಡೆತಡೆಗಳನ್ನು ಉಂಟುಮಾಡಿದರು. ಅದನ್ನು ಧಿಕ್ಕರಿಸಿ ಸಾವಿತ್ರಿಬಾಯಿಫುಲೆ ಶಿಕ್ಷಣ ಕಲಿತರು. ಶಿಕ್ಷಕಿಯಾಗಿ ಕೆಲಸ ಮಾಡುವುದರ ಜತೆಗೆ ಹೆಣ್ಣು ಮಕ್ಕಳಿಗೆ ಮೊದಲ ಬಾರಿಗೆ ಶಾಲೆಗಳನ್ನು ಆರಂಭ ಮಾಡಿದರು ಎಂದು ತಿಳಿಸಿದರು.
ಪುರುಷ ಪ್ರಧಾನ ವ್ಯವಸ್ಥೆಯ ಅನೇಕ ಕಟ್ಟುಪಾಡುಗಳನ್ನು ಎದುರಿಸಿ ಮೇಲೆ ಬಂದ ಅವರಿಗೆ ಪತಿ ಜ್ಯೋತಿಬಾಫುಲೆ ದೊಡ್ಡಮಟ್ಟದ ಸಹಕಾರ ನೀಡಿದ್ದರು. ಈ ದೇಶದ ಪ್ರಥಮ ಶಿಕ್ಷಕಿಯಾದ ಸಾವಿತ್ರಿಬಾಯಿಫುಲೆ ಅಸ್ಪೃಶ್ಯತೆ ಆಚರಣೆಯ ವಿರುದ್ಧ ಹೋರಾಟ ಮಾಡಿದರು. ಸಾವಿತ್ರಿಬಾಯಿಫುಲೆ ಅವರ ಹೆಸರಿನಲ್ಲಿ ಕೇಂದ್ರ ಸರ್ಕಾರ ಅಂಚೆ ಚೀಟಿಗಳನ್ನು ಮುದ್ರಣ ಮಾಡುತ್ತಿದೆ. ಮಹಾರಾಷ್ಟ್ರ ಸರ್ಕಾರ ಅವರ ಹೆಸರಿನಲ್ಲಿ ವಿಶ್ವವಿದ್ಯಾಲಯ ಸ್ಥಾಪನೆ ಮಾಡಿರುವುದು ಅವರ ಸಾಧನೆಗೆ ಸಂದ ಗೌರವ ಎಂದರು. ಡಯಟ್ ಪ್ರಾಂಶುಪಾಲ ಕಾಶಿನಾಥ್, ಕ್ಷೇತ್ರ ಸಂಪನ್ಮೂಲ ಅಧಿಕಾರಿ ಸೋಮಣ್ಣೇಗೌಡ, ಕ್ಷೇತ್ರ ಸಮನ್ವಯ ಸಂಪನ್ಮೂಲ ಅಧಿಕಾರಿ ರಾಜೀವ್, ಸಹಾಯಕ ಪ್ರಾಧ್ಯಾಪಕ ಪ್ರೊ.ಸುರೇಶ್ ಗೌತಮ್, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಕೆ.ಎಸ್.ಮಾದಪ್ಪ, ಪ್ರಧಾನ ಕಾರ್ಯದರ್ಶಿ ಮಹದೇವಸ್ವಾಮಿ, ಮೈಸೂರು ವಿಭಾಗೀಯ ಉಪಾಧ್ಯಕ್ಷ ಲಿಂಗಸ್ವಾಮಿ, ತಾಲೂಕು ಅಧ್ಯಕ್ಷ ಸಿ.ಕೆ.ರಾಮಸ್ವಾಮಿ, ಪ್ರಧಾನ ಕಾರ್ಯದರ್ಶಿ ಸುಧಾ, ಖಜಾಂಚಿ ಕೃಷ್ಣಮೂರ್ತಿ, ಉಪಾಧ್ಯಕ್ಷ ಭರತ್ ಭೂಷಣ್, ನಿರ್ದೇಶಕರಾದ ನಟರಾಜ್, ಮಹದೇವಸ್ವಾಮಿ, ಮಲ್ಲಿಕಾರ್ಜುನಸ್ವಾಮಿ ಹಾಗೂ ಇತರರು ಉಪಸ್ಥಿತರಿದ್ದರು.
ಪ್ರಶಸ್ತಿ ಪ್ರದಾನ: ಸಾವಿತ್ರಿಬಾಯಿಫುಲೆ ಜನ್ಮದಿನಾಚರಣೆ ಅಂಗವಾಗಿ ಬೇಡರಪುರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕಿ ವಿಜಯಕುಮಾರಿ, ಉಮ್ಮತ್ತೂರು ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕಿ ನಾಗರತ್ನ, ಮಂಚುಗುಂಡಿಪುರ ಶಾಲೆಯ ಎಸ್.ಉಮಾಮಹೇಶ್ವರಿ, ನಾಗವಳ್ಳಿ ಶಾಲೆಯ ರಾಜೇಶ್ವರಿ, ಹರವೆ ಶಾಲೆಯ ಬಿ.ಮಂಜುಳಾ ಹಾಗೂ ಶಿಕ್ಷಕಿ ಫಹಿಮುನ್ನಿಸಾ ಅವರಿಗೆ ಸಾವಿತ್ರಿಬಾಯಿಫುಲೆ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಶಿಕ್ಷಕರಾದ ಬಿ.ಕೃಷ್ಣಮೂರ್ತಿ, ಸಿ.ಮಲ್ಲಪ್ಪ, ಎಂ.ಲಿಂಗಪ್ಪ, ಎಂ.ಶಿವರಾಜ್, ಎನ್.ಶಿವಶಂಕರ್ ಹಾಗೂ ಡಿ.ಪುಷ್ಪರಾಜ್ ಅವರಿಗೆ ಜ್ಯೋತಿ ಬಾಫುಲೆ ಪ್ರಶಸ್ತಿ ಪ್ರದಾನ ಮಾಡಲಾಯಿತು.