ಚಾಮರಾಜನಗರ : ಪಶುಸಂಗೋಪನೆ, ರೇಷ್ಮೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೆ.ವೆಂಕಟೇಶ್ ಅವರು ಮಂಗಳವಾರ ಸಾರ್ವಜನಿಕರ ಅಹವಾಲುಗಳನ್ನು ಆಲಿಸಿದರು.
ನಗರದ ಜಿಲ್ಲಾಡಳಿತ ಭವನದಲ್ಲಿರುವ ತಮ್ಮ ಕಚೇರಿಯಲ್ಲಿ ಸಾರ್ವಜನಿಕರನ್ನು ಭೇಟಿ ಮಾಡಿದ ಜಿಲ್ಲಾ ಉಸ್ತುವಾರಿ ಸಚಿವರು, ಕುಂದು ಕೊರತೆಗಳನ್ನು ವಿಚಾರಿಸಿ, ಸಮಸ್ಯೆ ಅಹವಾಲುಗಳನ್ನು ಕೇಳಿ ಸಂಬಂಧಪಟ್ಟ ಅಧಿಕಾರಿಗಳಿಗೆ ಪರಿಹಾರಕ್ಕೆ ಸೂಚನೆ ನೀಡಿದರು. ರಸ್ತೆ ವಿಸ್ತರಣೆಯಿಂದ ಇನ್ನು ಪರಿಹಾರ ಲಭಿಸದಿರುವ ಹಾಗೂ ನಿವೇಶನ ಕೂಡ ನೀಡದಿರುವ ಬಗ್ಗೆ ಸ್ಥಳೀಯರೊಬ್ಬರು ದೂರು ಸಲ್ಲಿಸಿದರು. ಜೀತ ವಿಮುಕ್ತರಿಗೆ ಪರಿಹಾರ ಸೌಲಭ್ಯಗಳು ನೀಡಬೇಕು ಎಂಬ ಮನವಿ ಮತ್ತೊಬ್ಬರಿಂದ ಸಲ್ಲಿಕೆಯಾಯಿತು. ಗಂಗಾ ಕಲ್ಯಾಣ ಸೌಲಭ್ಯ ಇನ್ನೂ ಸಿಕ್ಕಿಲ್ಲ ಎಂದು ಕಾಮಗೆರೆ ನಿವಾಸಿಯೊಬ್ಬರು ಮನವಿ ಮಾಡಿದರು. ಅತಿಥಿ ಉಪನ್ಯಾಸಕರು ತಮ್ಮ ಬೇಡಿಕೆ ಕುರಿತು ಮನವಿ ನೀಡಿದರು.
ನಗರಸಭೆಯಲ್ಲಿ ಇ-ಸ್ವತ್ತು ಪಡೆಯಲು ಸಾಧ್ಯವಾಗುತ್ತಿಲ್ಲ ಎಂಬ ಸಾರ್ವಜನಿಕ ದೂರು ವ್ಯಾಪಕವಾಗಿದೆ. ಈ ಬಗ್ಗೆ ಗಮನಹರಿಸಬೇಕು ಎಂದು ಗಮನ ಸೆಳೆದ ಪ್ರಸ್ತಾವಕ್ಕೆ ಉತ್ತರಿಸಿದ ಜಿಲ್ಲಾ ಉಸ್ತುವಾರಿ ಸಚಿವರು, ಈ ಬಗ್ಗೆ ಅಗತ್ಯ ಕ್ರಮ ವಹಿಸಲು ಸೂಚಿಸಲಾಗುವುದು ಎಂದು ತಿಳಿಸಿದರು. ಜಿಲ್ಲಾ ಮಟ್ಟದ ಜನಸಂಪರ್ಕ ಸಭೆಯನ್ನು ಈ ತಿಂಗಳಿನಲ್ಲಿ ನಡೆಸಲಾಗುವುದು. ಈ ಹಿಂದೆ ನಡೆದ ಜನಸಂಪರ್ಕ ಸಭೆಯಲ್ಲಿ ಸಲ್ಲಿಕೆಯಾದ ದೂರುಗಳ ಇತ್ಯರ್ಥಕ್ಕೆ ಕ್ರಮ ವಹಿಸಲಾಗಿದೆ. ಬಾಕಿ ಇರುವ ಸಮಸ್ಯೆಗಳನ್ನು ತ್ವರಿತವಾಗಿ ಪರಿಹರಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ತಿಳಿಸಿದರು.
ಶಾಸಕರಾದ ಸಿ.ಪುಟ್ಟರಂಗಶೆಟ್ಟಿ, ಎ.ಆರ್.ಕೃಷ್ಣಮೂರ್ತಿ, ಹೆಚ್ಚುವರಿ ಜಿಲ್ಲಾಧಿಕಾರಿ ಗೀತಾ ಹುಡೇದ, ಉಪವಿಭಾಗಾಧಿಕಾರಿ ಮಹೇಶ್, ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಲಕ್ಷ್ಮೀ, ಬಿಆರ್‌ಟಿ ಹುಲಿ ಸಂರಕ್ಷಿತ ಪ್ರದೇಶದ ಅರಣ್ಯ ಸಂರಕ್ಷಣಾಧಿಕಾರಿ ದೀಪಾ ಜೆ.ಕಂಟ್ರಾೃಕ್ಟರ್ ಮತ್ತಿತರರಿದ್ದರು.