ನ್ಯೂಸ್

ಜು.25ರಂದು ಪಿ.ಆರ್.ತಿಪ್ಪೇಸ್ವಾಮಿ ಜನ್ಮಶತಮಾನೋತ್ಸವ ಸಮಾರಂಭ

ಚಾಮರಾಜನಗರ: ಪಿ.ಆರ್.ತಿಪ್ಪೇಸ್ವಾಮಿ ಪ್ರತಿಷ್ಠಾನ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಶಾಂತಲ ಕಲಾವಿದರು ಸಹಯೋಗದಲ್ಲಿ ಜು.25ರಂದು ನಗರದಲ್ಲಿ ಪಿ.ಆರ್.ತಿಪ್ಪೇಸ್ವಾಮಿ ಜನ್ಮಶತಮಾನೋತ್ಸವ ಸಮಾರಂಭ, ಚಿತ್ರಕಲಾ ಪ್ರದರ್ಶನ, ವಿಚಾರ ಸಂಕಿರಣ, ಜಾನಪದ ಹಾಡು ಮತ್ತು ನೃತ್ಯ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಪ್ರತಿಷ್ಠಾನದ ಅಧ್ಯಕ್ಷ ರಾಜಶೇಖರ ಕದಂಬ ತಿಳಿಸಿದರು.

ನಗರದ ಜೆ.ಎಚ್.ಪಟೇಲ್ ಸಭಾಂಗಣದಲ್ಲಿ ಅಂದು ಬೆಳಗ್ಗೆ 11 ಗಂಟೆಗೆ ಸಮಾರಂಭ ಶುರುವಾಗಲಿದೆ. ಪಿ.ಆರ್.ಟಿ ಚಿತ್ರಕಲಾ ಪ್ರದರ್ಶನವನ್ನು ಜಿಲ್ಲಾಧಿಕಾರಿ ಸಿ.ಟಿ.ಶಿಲ್ಪನಾಗ್, ಜಾನಪದ ಅಕಾಡೆಮಿ ಮಾಜಿ ಸದಸ್ಯ ಸಿ.ಎಂ.ನರಸಿಂಹಮೂರ್ತಿ, ಲಲಿತಕಲಾ ಅಕಾಡೆಮಿ ಮಾಜಿ ಸದಸ್ಯ ಸಿ.ರಾಜಶೇಖರ್ ಉದ್ಘಾಟಿಸುವರು. ಲಲಿತಕಲಾ ಅಕಾಡೆಮಿ ಮಾಜಿ ಸದಸ್ಯ ದುಂಡು ಮಹದೇವಸ್ವಾಮಿ, ಕಲಾವಿದರಾದ ಎ.ಮಹದೇವಸ್ವಾಮಿ, ಬಿ.ಸಿ.ದೇವರಾಜು ಭಾಗವಹಿಸುವರು ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಪಿಆರ್‌ಟಿ ಜನ್ಮಶತಮಾನೋತ್ಸವ ಸಮಾರಂಭ ಸಂಜೆ 3.30ಕ್ಕೆ ಆರಂಭಗೊಳ್ಳಲಿದೆ. ಇದನ್ನು ಶಾಸಕ ಸಿ.ಪುಟ್ಟರಂಗಶೆಟ್ಟಿ ಉದ್ಘಾಟನೆ ಮಾಡುವರು. ಅಧ್ಯಕ್ಷತೆಯನ್ನು ನಾನು ವಹಿಸುತ್ತೇನೆ. ಪಿಆರ್‌ಟಿ ಭಾವಚಿತ್ರವನ್ನು ಚಾಮರಾಜನಗರ ಕುಲಪತಿ ಪ್ರೊ.ಎಂ.ಆರ್.ಗಂಗಾಧರ್ ಅನಾವರಣಗೊಳಿಸುವರು. ಜಾನಪದ ಕ್ಷೇತ್ರದ ಕಾರ್ಯದಲ್ಲಿ ಪಿಆರ್‌ಟಿ ವಿಷಯ ಕುರಿತು ಜಾನಪದ ವಿದ್ವಾಂಸ ಯು.ಎಸ್.ರಾಮಣ್ಣ, ನಿಸರ್ಗ ಚಿತ್ರಕಲೆಯಲ್ಲಿ ಪಿಆರ್‌ಟಿ ವಿಷಯ ಕುರಿತು ಪಿಆರ್‌ಟಿ ಟ್ರಸ್ಟ್‌ನ ನಿರ್ದೇಶಕ ಸಿ.ಚಿಕ್ಕಣ್ಣ ಉಪನ್ಯಾಸ ನೀಡುವರು. ಪಿಆರ್‌ಟಿ ಟ್ರಸ್ಟ್‌ನ ನಿರ್ದೇಶಕಿ ಮಾನಸ ಉಪಸ್ಥಿತರಿರಲಿದ್ದಾರೆ ಎಂದರು.

ಹಿರಿಯ ರಂಗಕರ್ಮಿ ಕೆ.ವೆಂಕಟರಾಜು, ಶಾಂತಲ ಕಲಾವಿದರು ಅಧ್ಯಕ್ಷ ಎ.ಡಿ ಸಿಲ್ವ, ಕಲಾವಿದ ಪಿ.ಮಾದೇಶ್ ಭಾಗವಹಿಸುವರು. ಪಿಆರ್‌ಟಿ ಟ್ರಸ್ಟ್‌ನ ಸಂಚಾಲಕ, ‘ವಿಜಯವಾಣಿ’ ಸಹಾಯಕ ಸಂಪಾದಕ ರುದ್ರಣ್ಣ ಹರ್ತಿಕೋಟೆ ಆಶಯ ನುಡಿಗಳನ್ನಾಡುವರು. ಕಾರ್ಯದರ್ಶಿ ಕೆ.ಸಿ.ಮಹದೇವಶೆಟ್ಟಿ, ಕೋಶಾಧ್ಯಕ್ಷ ಎಚ್.ಎಂ.ಪರಮೇಶ್ವರಯ್ಯ ಮತ್ತು ಜಿಲ್ಲೆಯ ಚಿತ್ರಕಲಾವಿದರು ಪಾಲ್ಗೊಳ್ಳುವರು ಎಂದು ವಿವರಿಸಿದರು. ಗೋಷ್ಠಿಯಲ್ಲಿ ಸಿ.ಎಂ.ನರಸಿಂಹಮೂರ್ತಿ, ಚಂದ್ರಶೇಖರಯ್ಯ, ಕೆ.ವೆಂಕಟರಾಜು, ಎ.ಡಿ.ಸಿಲ್ವ ಮತ್ತು ಇತರರು ಹಾಜರಿದ್ದರು.