ನ್ಯೂಸ್

ಮಳೆ ಬಂದರೆ ಮುಳುಗುವ ಕಂದಹಳ್ಳಿ!

ಯಳಂದೂರು: ತಾಲೂಕಿನ ಕಂದಹಳ್ಳಿ ಗ್ರಾಮದ ಬಳಿ ನಡೆಯುತ್ತಿರುವ ರಾಷ್ಟ್ರೀಯ ಹೆದ್ದಾರಿ 209ರ ಕಾಮಗಾರಿ ಇನ್ನೂ ಪೂರ್ಣಗೊಳ್ಳದ ಕಾರಣ ಮಳೆ ಬಂದರೆ ಇಲ್ಲಿನ ಹಲವು ಮನೆಗಳು ಜಲಾವೃತ್ತವಾಗುವ ಜತೆಗೆ ಇಡೀ ಬಡಾವಣೆಗಳು ಮುಳುಗುತ್ತವೆ.

ಹೆದ್ದಾರಿ ಕಾಮಗಾರಿ ಆರಂಭಗೊಂಡು 5 ವರ್ಷಗಳಾಗುತ್ತಿದ್ದರೂ ಈ ಗ್ರಾಮದಲ್ಲಿ ಇನ್ನೂ ಕೂಡ ಇದು ಪೂರ್ಣಗೊಂಡಿಲ್ಲ. ಇಲ್ಲಿ ಈಗಾಗಲೇ ರಸ್ತೆ ವಿಸ್ತರಣೆ ಕಾಮಗಾರಿ ಮುಗಿದಿದೆ. ಆದರೆ ರಸ್ತೆ ಬದಿಯಲ್ಲಿ ನಿರ್ಮಾಣ ಮಾಡಬೇಕಿರುವ ಚರಂಡಿ ಕಾಮಗಾರಿ ಇನ್ನೂ ಪೂರ್ಣಗೊಂಡಿಲ್ಲ. ಇದಕ್ಕಾಗಿ ತೋಡಿರುವ ಹಳ್ಳಗಳು ಹಾಗೇ ಬಿಡಲಾಗಿದೆ. ಅರ್ಧಂಬರ್ಧವಾಗಿರುವ ಚರಂಡಿಯಿಂದ ಕಲುಷಿತ ನೀರು ಇಡೀ ಗ್ರಾಮಕ್ಕೆ ನುಗ್ಗುತ್ತದೆ. ರಸ್ತೆ ಅಭಿವೃದ್ಧಿಯ ನೆಪದಲ್ಲಿ ರಸ್ತೆ ಎತ್ತರೀಕರಣಗೊಂಡಿದೆ. ಇದರಿಂದ ನೀರು ತಗ್ಗು ಪ್ರದೇಶಗಳಿಗೆ ನುಗ್ಗುತ್ತದೆ. ಮಳೆಗಾಲದಲ್ಲಿ ಇಲ್ಲಿನ ನಿವಾಸಿಗಳು ಬವಣೆಪಡುವ ಸ್ಥಿತಿ ನಿರ್ಮಾಣವಾಗಿದೆ.

ಇಲ್ಲಿರುವ ತಗ್ಗು ಪ್ರದೇಶದ ಮನೆಗಳಿಗೆ ಚರಂಡಿಯ ಕೊಳಚೆ ನೀರು ನುಗ್ಗುತ್ತದೆ. ಚರಂಡಿ ನೀರು ಹೊರ ಹೋಗಲು ಇಲ್ಲಿ ದಾರಿ ಮಾಡದ ಕಾರಣ ಮಳೆ ತಗ್ಗಿದ ಮೇಲೆ ಇದು ಇಲ್ಲೇ ನಿಂತು ಕೊಳೆತು ದುರ್ವಾಸನೆ ಬೀರುತ್ತದೆ. ಹಾಗಾಗಿ ಇಲ್ಲಿನ ನಿವಾಸಿಗಳು ರೋಗರುಜಿನಗಳಿಗೆ ತುತ್ತಾಗುವ ಭೀತಿ ಹೆಚ್ಚುತ್ತದೆ.

ಹೆದ್ದಾರಿ ಕಚೇರಿ, ಅಧಿಕಾರಿಗಳೇ ಗೊತ್ತಿಲ್ಲ:
ಈ ಹೆದ್ದಾರಿ ಆರಂಭಗೊಂಡ ನಂತರ ಇಲ್ಲಿ ಅನೇಕ ಸಮಸ್ಯೆಗಳು ಎದುರಾಗಿವೆ. ಇದರ ನಿವಾರಣೆಗೆ ಸಾರ್ವಜನಿಕರು ಯಾರಿಗೆ ದೂರು ನೀಡಬೇಕು ಎಂಬುದು ತೋಚದಾಗಿದೆ. ಈ ಹಿಂದೆ ಮಳವಳ್ಳಿಯಲ್ಲಿ ಇದ್ದ ಹೆದ್ದಾರಿ ಕಚೇರಿಯನ್ನು ಈಗ ರಾಮನಗರಕ್ಕೆ ಸ್ಥಳಾಂತರಿಸಲಾಗಿದೆ. ಆದರೆ ಪ್ರತಿ ಬಾರಿಯೂ ಇಲ್ಲಿಗೆ ಬರುವ ಇಂಜಿನಿಯರ್, ಎಇಇ ಬದಲಾಗುತ್ತಲೇ ಇರುತ್ತಾರೆ. ಅಲ್ಲದೆ ಅನೇಕರಿಗೆ ಕನ್ನಡ ಭಾಷೆಯೇ ಬರುವುದಿಲ್ಲ. ಹಾಗಾಗಿ ಇವರೊಂದಿಗೆ ಸಂವಹನ ನಡೆಸುವುದು ಕಷ್ಟವಾಗುತ್ತದೆ. ಕಾಮಗಾರಿಯನ್ನು ಪೂರ್ಣಗೊಳಿಸುವಂತೆ ಸ್ಥಳೀಯರು ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರಿಗೆ ದೂರು ನೀಡಿದ್ದಾರೆ. ಆದರೆ ಇದರ ಬಗ್ಗೆ ಯಾರೊಬ್ಬರೂ ಕಾಳಜಿ ವಹಿಸುತ್ತಿಲ್ಲ ಎಂಬುದು ಸ್ಥಳೀಯರಾದ ಪ್ರೀತಿ, ಮಹದೇವಮ್ಮ ಸೇರಿದಂತೆ ಹಲವರ ದೂರು.

ರಾತ್ರಿ ವೇಳೆ ಕಗ್ಗತ್ತಲು, ಬಲ್ಬ್‌ಗಳೇ ಇಲ್ಲದ ಕಂಬಗಳು:
ಇಲ್ಲಿ ವಿದ್ಯುತ್ ಕಂಬಗಳಿದ್ದರೂ ಇದಕ್ಕೆ ವಿದ್ಯುತ್ ದೀಪ ಅಳವಡಿಸಿಲ್ಲ. ಹಾಗಾಗಿ ರಾತ್ರಿ ವೇಳೆ ಇಲ್ಲಿ ಕಗ್ಗತ್ತಲು ಆವರಿಸುತ್ತದೆ. ಇಲ್ಲಿ ವಾಹನಗಳು ಅತಿವೇಗವಾಗಿ ಚಲಿಸುತ್ತದೆ. ಪಾದಚಾರಿಗಳು ಪ್ರಾಣವನ್ನು ಕೈಯಲ್ಲಿ ಹಿಡಿದುಕೊಂಡೆ ಚಲಿಸುವ ಸ್ಥಿತಿ ಇದೆ. ಅನೇಕ ರಸ್ತೆ ಅಪಘಾತಗಳು ಈ ಸ್ಥಳದಲ್ಲಿ ನಡೆದಿದ್ದು ಹಲವರು ತಮ್ಮ ಪ್ರಾಣವನ್ನು ಕಳೆದುಕೊಂಡಿರುವ ಉದಾಹರಣೆಯೂ ಸಹ ಈ ರಸ್ತೆಗಿದೆ.

ಪ್ರತಿಭಟನೆಯ ಎಚ್ಚರಿಕೆ: ಈ ಹೆದ್ದಾರಿಯನ್ನು ಆದಷ್ಟು ಬೇಗ ಪೂರ್ಣಗೊಳಿಸಿ ಎಂದು ಹಲವು ಬಾರಿ ಮನವಿ ಮಾಡಿದರೂ ಇದಕ್ಕೆ ಇಲಾಖೆಯ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಸರಿಯಾಗಿ ಸ್ಪಂದಿಸುತ್ತಿಲ್ಲ. ಈಗ ಮಳೆಗಾಲವಾಗಿದ್ದು ಕಲುಷಿತ ನೀರು, ಮಳೆ ನೀರು ಮನೆಯೊಳಗೆ ನುಗ್ಗುತ್ತದೆ. ಪರಿಸ್ಥಿತಿ ದಿನದಿಂದ ದಿನಕ್ಕೆ ಉಲ್ಭಣಿಸುತ್ತಿದೆ. ಸಂಬಂಧಪಟ್ಟವರು ಶೀಘ್ರದಲ್ಲಿ ಪರಿಹಾರ ಒದಗಿಸದಿದ್ದಲ್ಲಿ ನಿರಂತರ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗುವುದು ಎಂದು ಇಲ್ಲಿನ ಗ್ರಾಮಸ್ಥರು ಎಚ್ಚರಿಕೆ ನೀಡಿದ್ದಾರೆ.