ನ್ಯೂಸ್

ವಿಪತ್ತು ನಿರ್ವಹಣಾ ಕೇಂದ್ರಕ್ಕೆ ಕೃಷಿ ಸಚಿವರ ಭೇಟಿ; ರೈತರ ಹಿತ ಕಾಯಲು ಸೂಚನೆ

ಬೆಂಗಳೂರು: ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರಕ್ಕೆ ಕೃಷಿ ಸಚಿವ ಎನ್.

ಚಲುವರಾಯಸ್ವಾಮಿ ಭೇಟಿ ನೀಡಿ ರಾಜ್ಯದ ಹವಾಮಾನ ಪರಿಸ್ಥಿತಿಗಳ ಬಗ್ಗೆ ಅಧ್ಯಯನ ನಡೆಸಿ ನಿಖರ ಮಾಹಿತಿ ಪಡೆದರು.

ವಿಕೋಪ ಉಸ್ತುವಾರಿ ಕೇಂದ್ರದಲ್ಲಿ ವಿಜ್ಞಾನಿಗಳು, ತಜ್ಞರೊಂದಿಗೆ ಚರ್ಚಿಸಿದ ಸಚಿವರು, ಮುಂದಿನ ದಿನಗಳಲ್ಲಿ ರಾಜ್ಯದ ಹವಾಮಾನ ಪರಿಸ್ಥಿತಿ ಹಾಗೂ ರಾಜ್ಯದ ಮೇಲಾಗುವ ಪರಿಣಾಮಗಳ ಬಗ್ಗೆ ಅಧ್ಯಯನ ವರದಿ ಪಡೆದರು.

ಸುಮಾರು ಮೂರು ಗಂಟೆಗಳಿಗೂ ಅಧಿಕ ಕಾಲ ವಿಕೋಪ ಉಸ್ತುವಾರಿ ಕೇಂದ್ರದಲ್ಲಿ ಕಳೆದ ಸಚಿವರು ಮುಂದಿನ ದಿನಗಳಲ್ಲಿ ಹಾಗೂ ಈ ವರ್ಷದಲ್ಲಿ ಜಿಲ್ಲೆ ಮತ್ತು ವಲಯವಾರು ಆಗಬಹುದಾದ ಮಳೆ, ಜಲಾಶಯಕ್ಕೆ ಹರಿದು ಬರಬಹುದಾದ ನೀರು, ಹವಾಮಾನ, ರೈತರಿಗೆ ನೀಡಬಹುದಾದ ಮಾಹಿತಿ

ಇದಕ್ಕೆ ಪೂರಕವಾಗಿ ಕೃಷಿ ಇಲಾಖೆ ರೂಪಿಸಬೇಕಾದ ಯೋಜನೆಗಳ ಕುರಿತು ತಜ್ಞರಿಂದ ಮಾಹಿತಿ ಪಡೆದರು.

ಹಾಲಿ ಬರಲಿರುವ ಮಳೆ ಮಾರುತ, ಕಾವೇರಿ ಕೊಳ್ಳ ಸೇರಿದಂತೆ ಜಲಾನಯನ ಪ್ರದೇಶಗಳಲ್ಲಿ ಮತ್ತು ಉತ್ತರ ಕರ್ನಾಟಕದಲ್ಲಿ ಮುಂದಿನ ದಿನಗಳಲ್ಲಿ ಸುರಿಯಬಹುದಾದ ಮಳೆ, ಹಾಲಿ ಇರುವ ಬೆಳೆಗಳು ಉಳಿಯುವ ಸಾಧ್ಯತೆ ಹಾಗೂ ಮುಂದಿನ ದಿನಗಳಲ್ಲಿ ರೈತರು ಅನುಸರಿಸಬೇಕಾದ ಕ್ರಮಗಳ ಬಗ್ಗೆ ವಿಚಾರ ವಿನಿಯಮ ಮಾಡಿಕೊಂಡರು.

ಇದೇ ವೇಳೆ ಸಚಿವರು ಹವಾಮಾನ ಮುನ್ಸೂಚನೆ ನೀಡುವ ವರುಣ ಮಿತ್ರ ಸಹಾಯವಾಣಿ ಕೇಂದ್ರಕ್ಕೆ ಭೇಟಿ ನೀಡಿ ಸ್ವತಃ ಕರೆ ಸ್ವೀಕರಿಸಿ ಮಾತನಾಡಿದರು.

ಅಲ್ಲದೆ ಮಳೆ ಮಾಪನ, ಹವಾಮಾನ, ಗಾಳಿ ಮಾಪನ, ಭೂ ಕಂಪ ಮಾಪನ ಸಾಧನಳು ಹಾಗೂ ಅವುಗಳ ಕಾರ್ಯ ಸ್ವರೂಪದ ಬಗ್ಗೆ ಮಾಹಿತಿ ಪಡೆದರು.

ಇದೇ ವೇಳೆ ಮಾತನಾಡಿದ ಸಚಿವ ಚಲುವರಾಯಸ್ವಾಮಿ, ಅನ್ನದಾತ ರಾಜ್ಯದ ಜೀವಾಳ. ಸರ್ಕಾರ, ಇಲಾಖೆಗಳು, ಸಂಸ್ಥೆಗಳು ಒಗ್ಗೂಡಿ ರೈತರ ಹಿತ ಕಾಯುವ ಮಾರ್ಗ ಹುಡುಕಿ ಕ್ರಮ ವಹಿಸಬೇಕಿದೆ. ಕೃಷಿಕರಿಗೆ ಯೋಜನೆಗಳ ಸೌಲಭ್ಯದ ಜತೆಗೆ ತಾಂತ್ರಿಕ ನೆರವು, ಮಾಹಿತಿ,ಮಾರ್ಗದರ್ಶನ ನೀಡಬೇಕಿದೆ ಎಂದು ಚಲುವರಾಯಸ್ವಾಮಿ ಹೇಳಿದರು.