ನ್ಯೂಸ್

ದೇವೇಗೌಡರಿಗೆ ಕುಟುಂಬದವರಿಂದಲೇ ಕಣ್ಣೀರು: ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಹೇಳಿಕೆ

ಮಂಡ್ಯ: ಮಾಜಿ ಪ್ರಧಾನಮಂತ್ರಿ ಎಚ್.ಡಿ.ದೇವೇಗೌಡ ಅವರಿಂದ ನೂರಾರೂ ರಾಜಕಾರಣಿಗಳು ಕಣ್ಣೀರು ಹಾಕಿದ್ದಾರೆ. ಅದೇ ದೇವೇಗೌಡರು ಕಣ್ಣಲ್ಲಿ ನೀರು ಹಾಕಿಸುವುದಕ್ಕೆ ಅವರ ಕುಟುಂಬ ಕಾರಣ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಹೇಳಿದರು.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯಸರ್ಕಾರದ ಸಚಿವರನ್ನು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಬಿಡಾಡಿ ಮಂತ್ರಿಗಳು ಎಂದಿದ್ದಾರೆ. ಅವರು ಮಾತ್ರ ಒಳ್ಳೆಯವರು, ನಾವು ಬಿಡಾಡಿಗಳು. ಎಚ್‌ಡಿಕೆ ಸಿಎಂ ಆಗಿದ್ದಾಗ ಏನು ನಡೆಯಿತು?. ಅವರು ಮಂತ್ರಿ ಆಗಿರಲಿಲ್ಲ ಪಾಪಾ, ನೇರವಾಗಿ ಮುಖ್ಯಮಂತ್ರಿಯಾದರು. ಬೇರೆಯವರು ಮಂತ್ರಿಯಾಗಿ ಮುಖ್ಯಮಂತ್ರಿ ಆಗಿದ್ದಾರೆ. ಆದರೆ ಇವರು ನೇರವಾಗಿ ಸಿಎಂ, ಈಗ ಇವಾಗ ಕೇಂದ್ರಕ್ಕೆ ಮಂತ್ರಿಯಾಗಿದ್ದಾರೆ ಎಂದು ವ್ಯಂಗ್ಯವಾಡಿದರು.

ಎಚ್‌ಡಿಡಿ ಅವರಿಗೆ ಕಣ್ಣಿರು ಹಾಕಿಸಿದ್ದು ಯಾರು?. ದೇವೇಗೌಡರ ಬಗ್ಗೆ ಒಂದು ಸತ್ಯ ಹೇಳುತ್ತೇನೆ ಕೇಳಿ. ದೇವೇಗೌಡರು ನೂರಾರು ರಾಜಕಾರಣಿಗಳಿಗೆ ಕಣ್ಣಿರು ಹಾಕಿಸಿದ್ದಾರೆ. ಆದರೂ ಅವರ ಬಗ್ಗೆ ಹಿಂತಿರುಗಿ ಯಾರು ಮಾತನಾಡಿಲ್ಲ. ಹಿರಿಯರು, ಮಾಜಿ ಪ್ರಧಾನಿ, ರಾಜಕೀಯ ಮತ್ಸದಿ ಗೌರವ ಕೊಟ್ಟಿದ್ದಾರೆ. ಕಣ್ಣಲ್ಲಿ ನೀರು ಹಾಕಿದವರು ಸಹ ತಡೆದುಕೊಂಡಿದ್ದಾರೆ. ಬಹಳಷ್ಟು ಜನ ಅವರ ಮೇಲೆ ಇವತ್ತಿಗೂ ಗೌರವ ಇಟ್ಟುಕೊಂಡಿದ್ದಾರೆ. ಆದರೂ ಅವರ ಕಣ್ಣಲ್ಲಿ ನೀರು ಬಿದ್ದಿರುವುದಕ್ಕೆ ಅವರ ಕುಟುಂಬ ಕಾರಣ. ಇದೆಲ್ಲ ಕುಮಾರಸ್ವಾಮಿಗೆ ಗೊತ್ತಿದೆ, ನಾವು ಹೇಳುವುದು ಬೇಡ. ಎಚ್‌ಡಿಕೆ ಯಾರ ಮೇಲೆ ಬೇಕಾದರೂ ಆರೋಪ ಮಾಡುತ್ತಾರೆಂದು ಗಂಭೀರ ಆರೋಪ ಮಾಡಿದರು.

ಮಾಜಿ ಸಿಎಂಗಳಾದ ಬಿ.ಎಸ್.ಯಡಿಯೂರಪ್ಪ, ಎಚ್.ಡಿ.ಕುಮಾರಸ್ವಾಮಿ ಪ್ರಕರಣದ ರೀತಿ ಇದಿದ್ದರೆ ಸಿದ್ದರಾಮಯ್ಯ ಖಂಡಿತ ರಾಜೀನಾಮೆ ಕೊಡುತ್ತಿದ್ದರು. ಸಿದ್ದರಾಮಯ್ಯ ನೇರವಾಗಿ ಭಾಗಿಯಾಗಿದರೆ ಖಂಡಿತ ರಾಜೀನಾಮೆ ಕೊಡುತ್ತಾರೆ. ಅವರು ಕೂಡ ಹಿಂದೆ ಕೆಲವರಿಗೆ ರಾಜೀನಾಮೆಗೆ ಆಗ್ರಹ ಮಾಡಿರುವುದು ಸತ್ಯ. ಯಡಿಯೂರಪ್ಪ, ಕುಮಾರಸ್ವಾಮಿ ಡಿ ನೋಟಿಫಿಕೇಷನಲ್ಲಿ ಭಾಗಿಯಾಗಿದ್ದಾರೆ. ಸುಪ್ರೀಂ ಕೋರ್ಟ್ ಕೇಸ್ ತನಿಖೆ ಮಾಡಿದೆ. ಲೋಕಾಯುಕ್ತದಲ್ಲೂ ತನಿಖೆ ಆಗುತ್ತಿದೆ. ಆ ಸನ್ನಿವೇಶದಲ್ಲಿ ಸಿದ್ದರಾಮಯ್ಯ ಇದ್ದರೆ ಖಂಡಿತ ರಾಜೀನಾಮೆ ಕೊಡುತ್ತಿದ್ದರು. ಪಕ್ಷ ಕೂಡ ಸೂಚಿಸಿ, ನಾವು ಬದ್ದರಾಗುತ್ತಿದ್ದೆವು. ಮುಡಾ ಹಗರಣದಲ್ಲಿ ನೂರಕ್ಕೆ ನೂರರಷ್ಟು ಸಿದ್ದರಾಮಯ್ಯ ಪಾತ್ರ ಇಲ್ಲ. ಮುಖ್ಯಮಂತ್ರಿ ಕುಟುಂಬ ಎನ್ನುವುದು ಬಿಟ್ಟರೆ ಯಾವ ಸಂಬಂಧವೂ ಇಲ್ಲ ಎಂದು ಸ್ಪಷ್ಟಪಡಿಸಿದರು.

ಮುಡಾ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾನೂನು ಬಾಹಿರ ಅಂದರೆ ತಿರಸ್ಕರಿಸಬೇಕಿತ್ತು. ಆದ್ದರಿಂದ ಇದೆಲ್ಲ ರಾಜಕೀಯ ಪ್ರೇರಿತ ಚರ್ಚೆಗಳು. ರಾಜ್ಯಪಾಲರು ರಾಜಕೀಯ ಪ್ರೇರಿತ ತೀರ್ಮಾನ ಕೊಟ್ಟಿದ್ದಾರೆ. ನ್ಯಾಯಾಲಯಕ್ಕೆ ನಾವು ಬದ್ದ. ತನಿಖೆ ಬೇಡ ಎಂದು ನಮ್ಮ ಪಕ್ಷ, ನಾವು ಯಾವತ್ತು ಹೇಳಿಲ್ಲ. ಪ್ರಧಾನಿ ಎಲೆಕ್ಷನ್ ಬಾಂಡ್ ಬಗ್ಗೆ ಚರ್ಚೆಯಾಗುತ್ತಿದೆ. ಕೇಂದ್ರವನ್ನ ರಾಜೀನಾಮೆ ಕೊಡಿ ಎಂದು ಹೇಳೋಕಾಗುತ್ತಾ?. ಗೋದ್ರಾ ಹಗರಣದಲ್ಲಿ ನರೇಂದ್ರಮೋದಿ ರಾಜೀನಾಮೆ ಕೊಟ್ಟಿದ್ದಾರಾ?. ಮಾಜಿ ಮುಖ್ಯಮಂತ್ರಿ ಆಗಿದ್ದವರು ಸ್ವಲ್ಪ ನೋಡಿ ಮಾತನಾಡಬೇಕು. ಎಲ್ಲ ಇತಿಹಾಸ ಇದೆ. ಲೋಕಾಯುಕ್ತ ಸ್ವತಂತ್ರ ತನಿಖಾ ಸಂಸ್ಥೆ. ನಮ್ಮ ಕಾಲದಲ್ಲಿ ಲೋಕಾಯುಕ್ತ ರಚನೆಯಾಗಿಲ್ಲ. ಆದರೂ ಲೋಕಾಯುಕ್ತ ಬಗ್ಗೆ ಅಪಾರ ನಂಬಿಕೆ ಇದೆ ಎಂದರು.

ಚುನಾವಣಾ ಬಾಂಡ್ ಸಂಬಂಧ ನಿರ್ಮಾಲ ಸೀತಾರಾಂ, ನಡ್ಡಾ ಮೇಲೆ ಎಫ್‌ಐಆರ್ ವಿಚಾರಕ್ಕೆ ಪ್ರತಿಕ್ರಿಯಿಸಿ, ದೊಡ್ಡ ಹಗರಣವಾಗಿರುವುದರಿಂದ ತನಿಖೆಯಾಗಬೇಕೆಂದು ಮೊದಲಿಂದಲೂ ಆಗ್ರಹವಿದೆ. ಸಿಬಿಐ, ಇಡಿ ಅವರ ಅಧೀನದಲ್ಲಿದೆ. ನೋಡೋಣ ಏನು ಮಾಡುತ್ತಾರೆ ಎಂದ ಅವರು, ಬಿಜೆಪಿ ಶಾಸಕ ಮುನಿರತ್ನ ತಪ್ಪನ್ನು ಗುರುತಿಸಿದ್ದು ಕಾಂಗ್ರೆಸ್ ಹೊರತು ಆರ್.ಅಶೋಕ್, ಸಿ.ಟಿ.ರವಿ ಅಲ್ಲ. ಇದರ ಪಶ್ಚಾತ್ತಾಪ ಅವರಿಗೆ ಒಂದು ದಿನ ತಟ್ಟಲಿದೆ ಎಂದು ತಿರುಗೇಟು ನೀಡಿದರು.

ನಾಗಮಂಗಲ ಗಲಭೆ ಪ್ರಕರಣದ ಬಗ್ಗೆ ಪ್ರತಿಕ್ರಿಯಿಸಿ, ಘಟನೆಯಿಂದ ನೋವು, ಬೇಸರ ಇದೆ. ಹಾನಿಯಾದವರಿಗೆ ಈ ವಾರದಲ್ಲಿ ಪರಿಹಾರ ಒದಗಿಸುತ್ತಿದ್ದೇವೆ. ತಾಲೂಕಿನಲ್ಲಿ ಶಾಂತಿ ವಾತಾವರಣ ಇದೆ. ಆದರೆ ನಾಗಮಂಗಲ, ಕೆರಗೋಡು ವಿವಾದ ಮುಗಿಯಿತು ಎಂದು ಬಿಜೆಪಿ ಮತ್ತು ಜೆಡಿಎಸ್ ನಾಯಕರಿಗೆ ಬಹಳ ನೋವಾಗುತ್ತಿದೆ. ಆದ್ದರಿಂದ ಇಬ್ಬರಿಗೂ ನಿದ್ರೆ ಬರುತ್ತಿಲ್ಲ. ಅವರನ್ನು ನೋಡಿದರೆ ಹೊಟ್ಟೆ ಉರಿಯುತ್ತದೆ. ಅವರಿಗೆ ಮಂಡ್ಯ ನೆಮ್ಮದಿಯಿಂದ ಇರುವುದು ಬೇಕಿಲ್ಲ. ಒಂದು ವರ್ಷದಲ್ಲಿ 12 ಸಾವಿರ ರೆವಿನ್ಯೂ ಇಲಾಖೆ ಅರ್ಜಿಗೆ ಪರಿಹಾರ ಕೊಟ್ಟಿರುವುದು ನಮ್ಮ ಸರ್ಕಾರ. ಆದರೆ ಕುಮಾರಸ್ವಾಮಿ 3 ಸಾವಿರ ಎನ್ನುತ್ತಾರೆ. ರಾಮನಗರ, ಚನ್ನಪಟ್ಟಣದ ಪರಿಸ್ಥಿತಿ ನೋಡಿದ್ದೇವೆ. ಆದ್ದರಿಂದ ಕುಮಾರಸ್ವಾಮಿ ಇದೆಲ್ಲ ಬಿಟ್ಟು ಸ್ಟೀಲ್, ಮೇಜರ್ ಇಂಡಸ್ಟ್ರಿ ತೆಗೆದುಕೊಂಡು ಬಂದು ಮಂಡ್ಯಕ್ಕೆ ಸಹಾಯ ಮಾಡಿ. ಚರ್ಚೆ ಮಾಡುವುದಾದರೆ ಎದುರುಗಡೆ ಬರಲಿ. ಸಮಾಧಾನವಾಗಿ ಕೆಲಸ ಮಾಡಲಿ ಎಂದು ಸವಾಲು ಹಾಕಿದರು.

ಬದ್ರಿಕೊಪ್ಪಲು ಗ್ರಾಮದ ಯುವಕರನ್ನು ಜೆಡಿಎಸ್‌ನವರು ಬರಬೇಡಿ ಎನ್ನುತ್ತಾರೆ. ಈ ಕಡೆ ಪೊಲೀಸರ ಫೋನ್ ಮಾಡಿ ಅರೆಸ್ಟ್ ಮಾಡಿ ಎನ್ನುತ್ತಾರೆ. ಈ ಹಿನ್ನೆಲೆಯಲ್ಲಿ ಯಾರನ್ನು ಬಂಧಿಸುವುದಿಲ್ಲ ಎಂದು ಹೇಳಿದ್ದೇವೆ. ಎಲ್ಲರಿಗೂ ಜಾಮೀನು ಆಗಲಿದೆ. ಕಾರಣಾಂತರದಿಂದ ಈ ಘಟನೆ ನಡೆದಿದೆ. ಇನ್ನು ಕೆರಗೋಡು ಹನುಮ ಧ್ವಜ ವಿವಾದಕ್ಕೆ ತಾರ್ಕಿಕ ಅಂತ್ಯವಾಡಿದ ಯುವಕರಿಗೆ ಅಭಿನಂದನೆ ತಿಳಿಸುತ್ತೇನೆ. ಎಲ್ಲರೂ ಒಳ್ಳೆಯವರು ಇದ್ದಾರೆ. ಕುಮಾರಸ್ವಾಮಿ, ಆರ್.ಅಶೋಕ್ ಮಂಡ್ಯದಲ್ಲಿ ಏನಾದರೂ ಮಾಡಬೇಕು ಎಂದು ನಿಂತಿದ್ದಾರೆ. ಹಿಂದೆ ನಾವು ಚುನಾವಣೆಯಲ್ಲಿ ಸೋತಾಗ 5 ವರ್ಷ ಬಾಯಿ ಬಿಟ್ಟಿಲ್ಲ. ಯಾರು ಏನೆಂದರೂ ಸುಮ್ಮನಿದ್ದೇವು. ಆದರೆ ಇವರಿಗೆ ಏನಾಗಿದೆ ಗೊತ್ತಿಲ್ಲ ಎಂದರು.

ಶಾಸಕರಾದ ರವಿಕುಮಾರ್ ಗಣಿಗ, ರಮೇಶ ಬಂಡಿಸಿದ್ದೇಗೌಡ, ಜಿಲ್ಲಾ ಕಾಂಗ್ರೆಸ್ ಕಾರ್ಯಾಧ್ಯಕ್ಷ ಎಂ.ಎಸ್.ಚಿದಂಬರ್ ಇದ್ದರು.