| ರುದ್ರಣ್ಣ ಹರ್ತಿಕೋಟೆ ಬೆಂಗಳೂರು
ರಾಜ್ಯದಲ್ಲಿ ನಡೆದ ಅನಿರೀಕ್ಷಿತ ರಾಜಕೀಯ ವಿಪ್ಲವಗಳಿಂದ ಅಚ್ಚರಿ ರೀತಿಯಲ್ಲಿ ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಯಾಗಿ ಶನಿವಾರ(ಆ.28)ಕ್ಕೆ ಒಂದು ತಿಂಗಳಾಗುತ್ತಿದೆ. ಮೂವತ್ತು ದಿನಗಳ ಆಡಳಿತದಲ್ಲಿ ವಿಶ್ವಾಸದ ಹೆಜ್ಜೆಯನ್ನು ಮೂಡಿಸಿದ್ದರೂ ಅವರಿಗಿರುವ ಸವಾಲುಗಳ ಅಗ್ನಿಪರೀಕ್ಷೆಯನ್ನು ಹೇಗೆ ಗೆಲ್ಲಲಿದ್ದಾರೆ ಎಂಬ ಪ್ರಶ್ನೆಯನ್ನು ಮಾತ್ರ ಉಳಿಸಿದ್ದಾರೆ. ಯಾವುದೇ ಸರ್ಕಾರದ ಸಾಧನೆ ಅಳೆಯಲು ಹಾಗೂ ಭವಿಷ್ಯ ನುಡಿಯಲು ಒಂದು ತಿಂಗಳ ಆಡಳಿತದಿಂದ ಸಾಧ್ಯವಿಲ್ಲ. ಆದರೆ, ಸಾಗುವ ದಿಕ್ಕನ್ನು ಗುರುತಿಸಬಹುದಾಗಿದೆ. ಚುನಾವಣಾ ವರ್ಷಕ್ಕೆ ಕಾಲಿಡಲು ಕೆಲವೇ ತಿಂಗಳು ಬಾಕಿ ಇರುವುದರಿಂದ ಬೊಮ್ಮಾಯಿ ಅವರಿಗೆ ಹನಿಮೂನ್ ಅವಧಿ ಇಲ್ಲ.
ಶೋಷಿತರ ಪರ: ಬೊಮ್ಮಾಯಿ ಅಧಿಕಾರ ಸ್ವೀಕಾರ ಮಾಡಿದ ಮೊದಲ ದಿನವೇ ಸುಮಾರು 2500 ಕೋಟಿ ರೂ.ಗಳ ಯೋಜನೆಗಳನ್ನು ಘೋಷಿಸಿದರು. ಅವೆಲ್ಲವೂ ರೈತರ, ವೃದ್ಧರ, ಶೋಷಿತರ, ಅಬಲರ ಪರವಾಗಿಯೇ ಇವೆ. ಸ್ವಾತಂತ್ರೊ್ಯೕತ್ಸವದ ದಿನ ಮಾಡಿದ ಹದಿನಾಲ್ಕು ಅಮೃತ ಘೋಷಣೆಗಳೆಲ್ಲವೂ ರಾಜ್ಯದ ಸಮಗ್ರ ಅಭಿವೃದ್ಧಿಗೆ ಸಂಬಂಧಿಸಿದ ಸುಮಾರು 1000 ಕೋಟಿ ರೂ. ಯೋಜನೆಗಳಿವೆ. ಎಸ್ಟಿ ಕಲ್ಯಾಣ ಸಚಿವಾಲಯ ತುಳಿತಕ್ಕೆ ಒಳಗಾದ ಸಮುದಾಯದ ಪರವಾಗಿರುವುದೇ ಆಗಿದೆ.
ಆಡಳಿತ ಸುಧಾರಣೆ, ವೆಚ್ಚ ಕಡಿತ: ಆಡಳಿತ ಸುಧಾರಣೆ, ವೆಚ್ಚ ಕಡಿತದಂತಹ ಆರ್ಥಿಕ ಶಿಸ್ತಿನ ಕಡೆಗೂ ಗಮನ ಹರಿಸಿದ್ದಾರೆ. ಕಡತಗಳ ವಿಲೇವಾರಿಯನ್ನು ಸುಧಾರಿಸಲು ಹೊಸ ವ್ಯವಸ್ಥೆಯೊಂದನ್ನು ರೂಪಿಸುತ್ತಿದ್ದಾರೆ. ಅನಗತ್ಯ ವೆಚ್ಚ ಕಡಿತಕ್ಕೂ ಸೂಚನೆ ನೀಡಿದ್ದಾರೆ.
ರಾಜಕೀಯ ನಿರ್ಧಾರ: ಸಾರ್ವಜನಿಕವಾಗಿ ಗಟ್ಟಿಯಾದ ರಾಜಕೀಯ ನಿರ್ಧಾರ ತೋರಿಸಿಲ್ಲ. ಆದರೆ ಸಚಿವರು, ಶಾಸಕರು, ಅಧಿಕಾರಿಗಳನ್ನು ನಿಭಾಯಿಸುವಲ್ಲಿ ಬೊಮ್ಮಾಯಿ ಇನ್ನೂ ಜಾಣ್ಮೆ ತೋರಬೇಕಿದೆ.
ಸಿಎಂ ಎದುರಿಗಿವೆ ಚುನಾವಣೆಗಳ ಸಾಲು: ಆಡಳಿತ, ಆರ್ಥಿಕ ಶಿಸ್ತು ಸೇರಿ ದೈನಂದಿನ ಸವಾಲುಗಳ ಜತೆಗೆ ಚುನಾ ವಣೆಗೆ ಅವರು ಸಜ್ಜಾಗಬೇಕಾಗಿದೆ. ಈಗ ಮೂರು ಮಹಾ ನಗರ ಪಾಲಿಕೆಗಳ ಚುನಾವಣೆಯ ಬೆನ್ನ ಹಿಂದೆಯೇ ಜಿಲ್ಲಾ ಮತ್ತು ತಾಲೂಕು ಪಂಚಾಯಿತಿ ಚುನಾವಣೆ ಬರುತ್ತವೆ. ಅಲ್ಲಿ ಕನಿಷ್ಠ ಶೇ.50ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲಬೇಕು. ಅದು ನಿಜವಾದ ಸವಾಲು.
ಒಳ್ಳೆಯದರ ಸ್ವೀಕಾರ: ರಾಷ್ಟ್ರೀಯ ಶಿಕ್ಷಣ ನೀತಿಗೆ ಚಾಲನೆ ನೀಡುವ ಸಂದರ್ಭದಲ್ಲಿ ಐದು ಘೋಷಣೆ ಮಾಡಿದರು. ಅದರಲ್ಲಿ ಪ್ರಾಥಮಿಕ ಶಿಕ್ಷಣಕ್ಕೂ ಪ್ರತ್ಯೇಕ ಪರಿಷತ್ ರಚನೆಯೂ ಒಂದು. ಅದು ಚರ್ಚೆಯೊಂದರ ಸಂದರ್ಭದ ಅಭಿಪ್ರಾಯವೆಂದು ಹೇಳಲಾಗುತ್ತಿದೆ.
ಸಮೂಹ ನಾಯಕತ್ವ ಸಾಬೀತಾಗಬೇಕು: ರಾಜಕೀಯವಾಗಿ ಬಸವರಾಜ ಬೊಮ್ಮಾಯಿ ಸಮೂಹ ನಾಯಕರೇನು ಅಲ್ಲ. ಈವರೆವಿಗೂ ಕ್ಷೇತ್ರಕ್ಕೆ ಸೀಮಿತರಾಗಿದ್ದವರು. ರಾಜಕೀಯವಾಗಿ ಹೆಚ್ಚು ಬೆಂಬಲವೂ ಇಲ್ಲ, ಅದೇ ರೀತಿ ವಿರೋಧಿಗಳು ಇಲ್ಲ. ನಾಯಕತ್ವವನ್ನು ಸಾಬೀತಿಗೆ ಪರೀಕ್ಷೆಯಂತೆಯೇ ಇದೆ. ಆಗ ಮಾತ್ರ ಮುಂದಿನ ಚುನಾವಣೆಯನ್ನು ಇವರ ನೇತೃತ್ವದಲ್ಲಿಯೇ ಎದುರಿಸಲು ಅವಕಾಶ ಸಿಗುತ್ತದೆ. ಇವರ ಕಾರ್ಯಕ್ರಮಗಳನ್ನು ಪಕ್ಷ ಮಾರ್ಕೆಟ್ ಮಾಡಬೇಕು. ಆದ್ದರಿಂದ ಪಕ್ಷದೊಂದಿಗೆ ಉತ್ತಮ ಬಾಂಧವ್ಯವನ್ನು ಗಟ್ಟಿಗೊಳಿಸಬೇಕಾಗುತ್ತದೆ ಎಂಬುದು ರಾಜಕೀಯ ವಿಶ್ಲೇಷಕರ ಅಭಿಪ್ರಾಯ.
ಬೆಂಗಳೂರು: ರಾಜ್ಯದಲ್ಲಿ ಜವಳಿ ಪಾರ್ಕ್ ಸ್ಥಾಪಿಸಬೇಕೆಂಬ ಚಿಂತನೆಗೆ ಕೇಂದ್ರ ಸರ್ಕಾರದಿಂದ ಪೂರಕ ಭರವಸೆ ದೊರೆತಿದ್ದು, ಅನುಮತಿ ಕೋರಿ ಇಷ್ಟರಲ್ಲೇ ಪ್ರಸ್ತಾವನೆ ಸಲ್ಲಿಸಲು ತೀರ್ವನಿಸಿರುವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. ದೆಹಲಿಯಲ್ಲಿ ಕೇಂದ್ರ ಜವಳಿ ಸಚಿವ ಪಿಯೂಷ್ ಗೋಯಲ್ ಅವರನ್ನು ಭೇಟಿಯಾದಾಗ ಈ ವಿಷಯ ಪ್ರಸ್ತಾಪಿಸಿ ಅನುಮತಿ ಜತೆಗೆ ಅಗತ್ಯ ನೆರವು ನೀಡಬೇಕೆಂದು ಕೋರಿದ್ದು, ಅವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ಸಿಎಂ ಸುದ್ದಿಗಾರರಿಗೆ ತಿಳಿಸಿದರು. ‘ಆದಷ್ಟು ಬೇಗ ಸೂಕ್ತವಾದ ಪ್ರಸ್ತಾವನೆ ಸಲ್ಲಿಸಿದರೆ ಮಂಜೂರಾತಿ ಜತೆಗೆ ಸೂಕ್ತ ಸಹಾಯಧನ ನೀಡಲಾಗುವುದು. ಅಲ್ಲದೆ, ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದ ಕಂಪನಿಗಳನ್ನು ಆಕರ್ಷಿಸಿ ಬಂಡವಾಳ ಹೂಡಿಕೆ ಉದ್ಯಮ ನೆಲೆಗೊಳಿಸುವುದಕ್ಕೆ ಆದ್ಯತೆ ನೀಡುವುದಾಗಿ’ ಗೋಯಲ್ ಭರವಸೆಯಿತ್ತಿದ್ದಾರೆ ಎಂದ ಬೊಮ್ಮಾಯಿ, ಬೃಹತ್ ಟೆಕ್ಸ್ಟೈಲ್ ಪಾರ್ಕ್ ಪ್ರಾರಂಭಿಸುವುದಕ್ಕೆ ರಾಜ್ಯ ಪ್ರಶಸ್ತವಾಗಿದೆ. ಈ ಪಾರ್ಕ್ ತಲೆ ಎತ್ತಿದರೆ ಬಹು ದೊಡ್ಡ ಸಂಖ್ಯೆಯಲ್ಲಿ ಉದ್ಯೋಗಗಳು ಸೃಷ್ಡಿಯಾಗಲಿವೆ. ಅದರಲ್ಲೂ ಹೆಣ್ಣು ಮಕ್ಕಳಿಗೆ ಹೆಚ್ಚಿನ ಉದ್ಯೋಗ ಅವಕಾಶಗಳು ಲಭಿಸಲಿವೆ ಎಂದು ಆಶಾಭಾವನೆ ವ್ಯಕ್ತಪಡಿಸಿದರು.
ಪ್ರತಿದಿನ ಐದು ಲಕ್ಷ ಲಸಿಕೆ ವಿತರಣೆ: ಸೆಪ್ಟಂಬರ್ 1ರಿಂದ ಪ್ರತಿದಿನ ಐದು ಲಕ್ಷ ಜನರಿಗೆ ಕರೊನಾ ಲಸಿಕೆ ವಿತರಿಸಲು ನಿರ್ಧರಿಸಲಾಗಿದೆ ಎಂದು ಸಿಎಂ ಹೇಳಿದರು. ರಾಜ್ಯಕ್ಕೆ ಲಸಿಕೆ ಡೋಸ್ ಹಂಚಿಕೆ ಪ್ರಮಾಣ ಹೆಚ್ಚಿಸಬೇಕೆಂದು ವಿನಂತಿಸುವುದು ದೆಹಲಿ ಭೇಟಿ ಮುಖ್ಯ ಉದ್ದೇಶವಾಗಿತ್ತು. ಕೇಂದ್ರ ಆರೋಗ್ಯ ಸಚಿವರು ಕೋರಿಕೆಗೆ ಒತ್ತಾಸೆ ನೀಡಿದ್ದು, ಬೇಕಾದಷ್ಟು ಲಸಿಕೆ ದಾಸ್ತಾನು ಲಭ್ಯವಿದೆ ಎಂಬ ಮಾಹಿತಿ ನೀಡಿದ್ದಾರೆ. ಎರಡು ದಿನಗಳ ಹಿಂದೆ ಪ್ರಾಯೋಗಿಕವಾಗಿ ಐದು ಲಕ್ಷ ಜನರಿಗೆ ಲಸಿಕೆ ಹಾಕಿ, ವ್ಯವಸ್ಥಿತ ವಿತರಣೆ ಖಚಿತಪಡಿಸಿಕೊಳ್ಳಲಾಗಿದೆ ಎಂದು ಬಸವರಾಜ ಬೊಮ್ಮಾಯಿ ಹೇಳಿದರು.