ಶಿವಮೊಗ್ಗ: ಮಲೆನಾಡು ಮುದ್ರಕರ ಸಂಘ ಹಾಗೂ ಕರ್ನಾಟಕ ರಾಜ್ಯ ಮುದ್ರಣಕಾರರ ಸಂಘದ ಆಶ್ರಯದಲ್ಲಿ ಮುದ್ರಣ ಕ್ಷೇತ್ರದ ಇಂದಿನ ಸವಾಲುಗಳು-ಪರಿಹಾರ ವಿಷಯ ಕುರಿತು ತಜ್ಞರಿಂದ ಚರ್ಚೆ, ಮುದ್ರಕರೊಡನೆ ಸಂವಾದ ಹಾಗೂ ಸಮನ್ವಯ ಸಮಿತಿ ಸಭೆ ಆ.20ರಂದು ಬೆಳಗ್ಗೆ 10ರಿಂದ 1.30ರವರೆಗೆ ಜಿಲ್ಲಾ ವಾಣಿಜ್ಯ ಮತು ಕೈಗಾರಿಕಾ ಸಂಘದಲ್ಲಿ ನಡೆಯಲಿದೆ ಎಂದು ಮಲೆನಾಡು ಮುದ್ರಕರ ಸಂಘದ ಅಧ್ಯಕ್ಷ ಎಂ.ಮಾಧವಾಚಾರ್ ತಿಳಿಸಿದರು.
ರಾಜ್ಯದಲ್ಲಿ ಪ್ರಥಮ ಬಾರಿಗೆ ಮುದ್ರಕರೊಡನೆ ಸಂವಾದವನ್ನು ಶಿವಮೊಗ್ಗದಲ್ಲಿ ನಡೆಸಲಾಗುತ್ತಿದೆ. ಮುದ್ರಣ ಕ್ಷೇತ್ರದ ಸವಾಲು ಮತ್ತ ಪರಿಹಾರ, ಆಧುನಿಕ ತಂತ್ರಜ್ಞಾನ ಅಳವಡಿಕೆ, ಜಿಲ್ಲಾಮಟ್ಟದಲ್ಲಿ ಮುದ್ರಣ ಕೈಗಾರಿಕೆ ಕ್ಲಸ್ಟರ್ ಸ್ಥಾಪಿಸುವ ಬಗ್ಗೆ ವಿಚಾರ ವಿನಿಮಯ, ರಾಜ್ಯ ಸಂಘದಿದ ನಿರೀಕ್ಷಿಸುವ ಸವಾಲುಗಳು ಹಾಗೂ ಸ್ಥಳೀಯ ಸಮಸ್ಯೆಗಳ ಬಗ್ಗೆ ಚರ್ಚಿಸಿ ಪರಿಹಾರ ಕಂಡುಕೊಳ್ಳಲು ಸಂವಾದ ಏರ್ಪಡಿಸಲಾಗಿದೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಜಿಲ್ಲಾ ವಾಣಿಜ್ಯ ವತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಎನ್.ಗೋಪಿನಾಥ್ ಉದ್ಘಾಟಿಸಲಿದ್ದು, ಅಖಿಲ ಭಾರತ ಮುದ್ರಣಕಾರರ ಒಕ್ಕೂಟದ ಮಾಜಿ ಅಧ್ಯಕ್ಷ ಹಾಗೂ ಪ್ರಿಂಟಿಂಗ್ ಪಾರ್ಕ್ ಕ್ಲಸ್ಟರ್‌ನ ಅಧ್ಯಕ್ಷ ಸಿ.ಆರ್.ಜನಾರ್ಧನ್, ರಾಜ್ಯ ಮುದ್ರಣಕಾರರ ಸಂಘದ ಅಧ್ಯಕ್ಷ ಬಿ.ಆರ್.ಅಶೋಕ್‌ಕುಮಾರ್, ರಾಜ್ಯ ಮುದ್ರಣಕಾರರ ಸಮನ್ವಯ ಸಮಿತಿ ಸಂಚಾಲಕ ಎಂ.ಮಹೇಶ್‌ಕುಮಾರ್, ದಾವಣಗೆರೆ ವಿಭಾಗದ ಸಂಚಾಲನಾ ಸಮಿತಿ ಉಪಾಧ್ಯಕ್ಷ ಎ.ಎಂ.ಪ್ರಕಾಶ್ ವಿಷಯತಜ್ಞರಾಗಿ ಭಾಗವಹಿಸುವರು ಎಂದರು.
ದಾವಣಗೆರೆ, ಚಿತ್ರದುರ್ಗ, ಬಳ್ಳಾರಿ, ಹಾವೇರಿ, ವಿಜಯನಗರ, ಚಿಕ್ಕಮಗಳೂರು ಹಾಗೂ ಶಿವಮೊಗ್ಗ ಜಿಲ್ಲೆಯ 100ಕ್ಕೂ ಅಧಿಕ ಮುದ್ರಕರು ಸಂವಾದಲ್ಲಿ ಭಾಗವಹಿಸುವ ನಿರೀಕ್ಷೆ ಇದೆ ಎಂದರು.
ಸಂಘದ ಕಾರ್ಯದರ್ಶಿ ಗಣೇಶ್‌ಬಿಳಗಿ ಮಾತನಾಡಿ, ಪ್ರಬಲ ಪೈಪೋಟಿ ಹಾಗೂ ಆಧುನಿಕ ತಂತ್ರಜ್ಞಾನ ಬಳಕೆಯಿಂದ ಕೆಲವು ಮುದ್ರಣಾಲಯಗಳು ಮುಚ್ಚುವ ಹಂತ ತಲುಪಿವೆ. ಈ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಈ ಸಂವಾದ ಹಮ್ಮಿಕೊಳ್ಳಲಾಗಿದೆ ಎಂದರು. ಪದಾಧಿಕಾರಿಗಳಾದ ಮಂಜುನಾಥ್, ಹರೀಶ್ ನಾಯಕ, ಯೋಗೀಶ್, ಎಸ್.ಎಸ್.ಗಿರೀಶ್, ಶ್ರುತಿ ಚಂದ್ರು ಇದ್ದರು.