ನ್ಯೂಸ್

ಚಳ್ಳಕೆರೆ APMC: 39 ವಾಣಿಜ್ಯ ಮಳಿಗೆಗಳ ನವೀಕರಣ; ಟೆಂಡರ್ ಮೂಲಕ ಆದಾಯ ಹೆಚ್ಚಳ

ಚಳ್ಳಕೆರೆ: ತಾಲೂಕಿನ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ (APMC) ಆಡಳಿತಕ್ಕೆ ಒಳಪಟ್ಟ ಸುಮಾರು 39 ವಾಣಿಜ್ಯ ಮಳಿಗೆಗಳನ್ನು ನವೀಕರಿಸಿ, ಮಾರುಕಟ್ಟೆಗೆ ಆದಾಯ ಬರುವ ರೀತಿ ಟೆಂಡರ್ ಮೂಲಕ ಬಾಡಿಗೆ ನೀಡಲಾಗಿದೆ ಎಂದು ಎಪಿಎಂಸಿ ಸಮಿತಿ ಪ್ರಭಾರ ಕಾರ್ಯದರ್ಶಿ ಜಿ.ಎಸ್. ಸುರೇಶ್ ತಿಳಿಸಿದರು.

ನಗರದ ಬೆಂಗಳೂರು ರಸ್ತೆಯಲ್ಲಿರುವ ಎಪಿಎಂಸಿ ಆವರಣದಲ್ಲಿ ಶುಕ್ರವಾರ ವಾಣಿಜ್ಯ ಮಳಿಗೆಗಳ ನಿರ್ವಹಣೆ ಬಗ್ಗೆ ಪರಿಶೀಲನೆ ನಡೆಸಿದ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

ಮಳಿಗೆಗಳಿಂದ ಆದಾಯ ಸಂಗ್ರಹ

ನಿರ್ವಹಣೆ ಕೊರತೆಯಿಂದಾಗಿ ಅನುಪಯುಕ್ತವಾಗಿದ್ದ ಮಳಿಗೆಗಳನ್ನು ನವೀಕರಣಗೊಳಿಸಿ, ಮೂಲ ಸೌಕರ್ಯಗಳನ್ನು ಒದಗಿಸಲಾಗಿದೆ. ಮಾರುಕಟ್ಟೆಯ ವ್ಯವಹಾರಕ್ಕೆ ಪೂರಕವಾದ ಚಟುವಟಿಕೆಗಳಿಗೆ ಈ ಮಳಿಗೆಗಳನ್ನು ಟೆಂಡರ್ ಮೂಲಕ ಬಾಡಿಗೆಗೆ ನೀಡಲಾಗಿದೆ. ಇನ್ನೂ ಸುಮಾರು 22 ಮಳಿಗೆಗಳು ಶಿಥಿಲಾವಸ್ಥೆಯಲ್ಲಿದ್ದು, ಇವುಗಳ ನವೀಕರಣಕ್ಕೆ ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸಲಾಗಿದೆ ಎಂದು ಅವರು ಮಾಹಿತಿ ನೀಡಿದರು.

ದಂಡ ವಸೂಲಿ ಮತ್ತು ನಿಗಾ

ಕೃಷಿ ಉತ್ಪನ್ನವನ್ನು ನಿಯಮಬಾಹಿರವಾಗಿ ಸಾಗಿಸುವ ವಾಹನಗಳ ತಪಾಸಣೆ ಕಾರ್ಯಕ್ಕೆ ಹೆಚ್ಚಿನ ನಿಗಾ ವಹಿಸಲಾಗಿದೆ.
  • 2024-25ರಲ್ಲಿ 45 ಪ್ರಕರಣ ದಾಖಲಿಸಿ ₹2,25,673 ದಂಡ ವಸೂಲಿ ಮಾಡಲಾಗಿದೆ.
  • 2025-26ರಲ್ಲಿ ಈವರೆಗೆ 16 ಪ್ರಕರಣ ದಾಖಲು ಮಾಡಿಕೊಂಡು ₹85,464 ದಂಡ ಸಂಗ್ರಹಿಸಲಾಗಿದೆ.
ಶೇಂಗಾ ವಹಿವಾಟು ಕುಸಿತ

ಕಳೆದ 2022 ರಿಂದ 2024 ರವರೆಗೆ ನಿರೀಕ್ಷಿತ ಗುರಿಯಂತೆ ಮಾರುಕಟ್ಟೆಯಲ್ಲಿ ಶೇಂಗಾ ವಹಿವಾಟು ಇತ್ತು. ಆದರೆ, 2024-25ರಲ್ಲಿ ನಿಗದಿತ ₹3.5 ಕೋಟಿ ವಹಿವಾಟಿನಲ್ಲಿ ಕೇವಲ ₹2.16 ಕೋಟಿಗೆ ಕುಸಿತವಾಗಿತ್ತು.

ಮೆಕ್ಕೆಜೋಳಕ್ಕೆ ಹೆಚ್ಚಿದ ಬೇಡಿಕೆ

ಪ್ರಸ್ತುತ 2025-26 ರಲ್ಲಿ ಈ ತನಕ 6.80 ಲಕ್ಷ ಕ್ವಿಂಟಲ್ ಶೇಂಗಾ ವಹಿವಾಟು ನಡೆದಿದೆ. ಇತ್ತೀಚಿನ ದಿನಗಳಲ್ಲಿ ಶೇಂಗಾ ಉತ್ಪನ್ನಕ್ಕಿಂತ ಮೆಕ್ಕೆಜೋಳವು ಮಾರುಕಟ್ಟೆಗೆ ಅಧಿಕವಾಗಿ ಬರುತ್ತಿದೆ. ಯಾವ ರೈತರಿಗೂ ಉತ್ಪನ್ನ ಮಾರಾಟದಲ್ಲಿ ಯಾವುದೇ ಅವ್ಯವಹಾರ ಆಗದಂತೆ ಇ-ಟೆಂಡರ್ ಮೂಲಕ ಪಾರದರ್ಶಕವಾಗಿ ವಹಿವಾಟು ನಡೆಸಲಾಗುತ್ತಿದೆ ಎಂದು ಸುರೇಶ್ ತಿಳಿಸಿದರು.