ನ್ಯೂಸ್

ಪಿಎಸ್‌ಐ ಆತ್ಮಹತ್ಯೆ ಪರಶುರಾಮ ಪ್ರಕರಣ ಸಿಬಿಐಗೆ ವಹಿಸಲು ಛಲವಾದಿ ನಾರಾಯಣಸ್ವಾಮಿ ಆಗ್ರಹ

ಬೆಂಗಳೂರು: ಪ್ರಾಮಾಣಿಕ, ದಕ್ಷ ಅಧಿಕಾರಿಗಳಿಗೆ ಕಾಂಗ್ರೆಸ್ ಸರ್ಕಾರದಲ್ಲಿ ಉಳಿಗಾಲವಿಲ್ಲದಂತಾಗಿದೆ. ಈ ಕೂಡಲೇ ತಪ್ಪಿತಸ್ಥರಿಂದ ಶಾಸಕ ಸ್ಥಾನಕ್ಕೆ ರಾಜೀನಾಮೆ ಪಡೆಯಬೇಕು‌ ಹಾಗೂ ಈ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಬೇಕು ಎಂದು ಸರ್ಕಾರವನ್ನು ಒತ್ತಾಯಿಸುವುದಾಗಿ ಛಲವಾದಿ ನಾರಾಯಣಸ್ವಾಮಿ ತಿಳಿಸಿದರು.

ಕಾರಟಗಿ ತಾಲೂಕಿನ ಸೋಮನಾಳ ಗ್ರಾಮಕ್ಕೆ ವಿಧಾನ ಪರಿಷತ್ತಿನ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ಮಂಗಳವಾರ ಭೇಟಿ ನೀಡಿ ಮೃತ ಪಿಎಸ್ಐ ಪರಶುರಾಮ ಅವರ ಕುಟುಂಬಕ್ಕೆ ಸಾಂತ್ವನ ಹೇಳಿದರು.

ಈ ವೇಳೆ ಮಾತನಾಡಿದ ಅವರು, ಒತ್ತಡ, ಮಾನಸಿಕ ಕಿರುಕುಳದಿಂದ ಹೃದಯಾಘಾತಕ್ಕೆ ಒಳಗಾಗಿ ಮೃತಪಟ್ಟಿರುವ ಯಾದಗಿರಿ ಪೊಲೀಸ್ ಸಬ್ ಇನ್‌ಸ್ಪೆಕ್ಟರ್ (ಪಿಎಸ್ ಐ) ಪರಶುರಾಮ್ ಅವರ ಸಾವಿಗೆ ಯಾದಗಿರಿ ಶಾಸಕ ಮತ್ತು ಅವರ ಪುತ್ರ ಕಾರಣ ಎಂದು ಅವರ ಪತ್ನಿ ಮತ್ತು ಕುಟುಂಬಸ್ಥರು ಗಂಭೀರ ಆರೋಪ ಮಾಡಿ ಲಿಖಿತ ದೂರು ಕೊಟ್ಟಿದ್ದಾರೆ ಎಂದು ತಿಳಿಸಿದರು.

ಇದೇವೇಳೆ ಅವರು ತಮ್ಮ ಒಂದು ತಿಂಗಳ ವೇತನ 60 ಸಾವಿರ ರೂ. ಹಣವನ್ನು ಮೃತ ಸಬ್ ಇನ್‌ಸ್ಪೆಕ್ಟರ್ ಪರಶುರಾಮರ ಕುಟುಂಬಕ್ಕೆ ಹಸ್ತಾಂತರಿಸಿದರು. ಮಾಜಿ ಶಾಸಕರಾದ ಬಸವರಾಜ್ ಧಡೇಸುಗೂರು, ಪರಣ್ಣ ಮನವಳ್ಳಿ ಅವರು ಈ ವೇಳೆ ಉಪಸ್ಥಿತರಿದ್ದರು.