ಬೆಂಗಳೂರು: ಉದ್ಯಮಿ ಗೋವಿಂದಬಾಬು ಪೂಜಾರಿಗೆ ಬೈಂದೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ಕೊಡಿಸುವುದಾಗಿ ಕೋಟ್ಯಂತರ ರೂಪಾಯಿ ಪಡೆದು ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಇನ್ನೊಬ್ಬ ಪ್ರಮುಖ ಆರೋಪಿ ಅಭಿನವ ಹಾಲಶ್ರೀ ಸ್ವಾಮೀಜಿಯ ಬಂಧನವಾಗಿದೆ.
ಈ ಮೂಲಕ ಪ್ರಕರಣದಲ್ಲಿ ಮಹತ್ವದ ಬೆಳವಣಿಗೆ ಆಗಿರುವ ಬೆನ್ನಿಗೇ ಸ್ವಾಮೀಜಿಗೆ ಟೆನ್ಷನ್, ಚೈತ್ರಾ ಕುಂದಾಪುರ ರಿಲ್ಯಾಕ್ಸ್ ಎಂಬಂತಾಗಿದೆ. ಏಕೆಂದರೆ ಸ್ವಾಮೀಜಿ ಬಂಧನದ ಬಳಿಕ ಚೈತ್ರಾ ಸ್ವಲ್ಪಮಟ್ಟಿಗೆ ನಿರಾಳವಾಗಿ ಇರುವುದು ಕಂಡುಬಂದಿದೆ. ಚೈತ್ರಾ ಬಂಧನವಾದ ಬೆನ್ನಿಗೇ ಅಭಿನವ ಹಾಲಶ್ರೀ ಸ್ವಾಮೀಜಿ ಹೆಸರು ಈ ಪ್ರಕರಣದಲ್ಲಿ ಕೇಳಿ ಬಂದಿತ್ತು. ನಂತರ ಸ್ವಾಮೀಜಿ ಬಂಧನವಾಗಲಿ ಎಲ್ಲ ಗೊತ್ತಾಗುತ್ತದೆ, ದೊಡ್ಡ ದೊಡ್ಡವರ ಹೆಸರೂ ಹೊರಬರುತ್ತದೆ ಎಂದು ಚೈತ್ರಾ ಹೇಳಿದ್ದರು.
ಇದೀಗ ಇಂದು ಸ್ವಾಮೀಜಿ ಬಂಧನವಾಗಿದೆ. ಚೈತ್ರಾ ರಿಲ್ಯಾಕ್ಸ್ ಆಗಿರುವುದಕ್ಕೆ ಸಾಕ್ಷಿ ಎಂಬಂತೆ ಆಕೆಯ ಹಾವಭಾವ ಕಂಡುಬಂದಿದೆ. ಮಹಿಳೆ ಸಾಂತ್ವನ ಕೇಂದ್ರಕ್ಕೆ ಕರೆದೊಯ್ಯುವ ವೇಳೆ ಆಕೆ ಕಾಲು ಮೇಲೆ ಕಾಲು ಹಾಕಿಕೊಂಡು ಕೂಲ್ ಆಗಿ ತೆರಳಿದ್ದಾರೆ.
ಇತ್ತ ಸಿಸಿಬಿ ಪೊಲೀಸರಿಂದ ಅಭಿನವ ಹಾಲಶ್ರೀ ಸ್ವಾಮೀಜಿಗೆ ಡ್ರಿಲ್ ಆರಂಭವಾಗಿದೆ. ತನಿಖಾಧಿಕಾರಿ ರೀಣಾ ಸುವರ್ಣ ನೇತೃತ್ವದಲ್ಲಿ ಹಾಲಶ್ರೀ ಸ್ವಾಮೀಜಿಯ ತೀವ್ರ ವಿಚಾರಣೆ ಗೌಪ್ಯ ಸ್ಥಳವೊಂದರಲ್ಲಿ ನಡೆಯುತ್ತಿದೆ. ಇಂದು ವಿಚಾರಣೆ ನಡೆಸಿ, ನಾಳೆ ಬೆಳಗ್ಗೆ 11 ಗಂಟೆ ಸುಮಾರಿಗೆ ಒಂದನೇ ಎಸಿಎಂಎಂ ಕೋರ್ಟ್ಗೆ ಹಾಜರುಪಡಿಸಿ ಬಳಿಕ ಮತ್ತೆ ಸ್ವಾಮೀಜಿಯನ್ನು ಸಿಸಿಬಿ ಪೊಲೀಸರು ತಮ್ಮ ಕಸ್ಟಡಿಗೆ ಪಡೆಯಲಿದ್ದಾರೆ.