ಬೆಂಗಳೂರು: ಉದ್ಯಮಿ ಗೋವಿಂದಬಾಬು ಪೂಜಾರಿಗೆ ಬೈಂದೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ಕೊಡಿಸುವುದಾಗಿ ಕೋಟ್ಯಂತರ ರೂಪಾಯಿ ಪಡೆದು ವಂಚಿಸಿದ್ದಾರೆ ಎಂಬ ಆರೋಪದ ಮೇಲೆ ಬಂಧನಕ್ಕೆ ಒಳಗಾಗಿರುವ ಚೈತ್ರಾ ಕುಂದಾಪುರ ಅಸ್ವಸ್ಥಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವುದು ಈಗಾಗಲೇ ಬಹುತೇಕ ಎಲ್ಲರಿಗೂ ಗೊತ್ತಿರುವ ವಿಚಾರ.
ಆದರೆ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಮಹತ್ವದ ಮಾಹಿತಿಯೊಂದು ಹೊರಬಿದ್ದಿದೆ. ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿರುವ ಈಕೆಯನ್ನು ಇನ್ನು ಕೆಲವೇ ಹೊತ್ತಲ್ಲಿ ಜಯದೇವ ಹೃದ್ರೋಗ ಆಸ್ಪತ್ರೆಗೆ ಸ್ಥಳಾಂತರಿಸಲಾಗುವುದು ಎಂಬ ಸಂಗತಿಯೊಂದು ಹೊರಬಿದ್ದಿದೆ.
ಚೈತ್ರಾ ಆರೋಗ್ಯಕ್ಕೆ ಸಂಬಂಧಿಸಿದಂತೆ ಇಂದು ಮಾಹಿತಿ ನೀಡಿದ ನೋಡಲ್ ಆಫೀಸರ್ ಬಾಲಾಜಿ ಪೈ, ನಾವು ಚೈತ್ರಾಗೆ ಟ್ರೀಟ್ಮೆಂಟ್ ಕೊಟ್ಟಿದ್ದೇವೆ. ಎಂಆರ್ಐ ಮಾಡಿದ್ದೇವೆ, ರಿಪೋರ್ಟ್ ನಾರ್ಮಲ್ ಆಗಿದೆ, ಆರೋಗ್ಯದಲ್ಲಿ ಇನ್ನೂ ಸುಧಾರಣೆ ಆಗಬೇಕಿದೆ ಎಂದಿದ್ದಾರೆ. ಆಕೆ ಇನ್ನೂ ನಿತ್ರಾಣವಸ್ಥೆಯಲ್ಲೇ ಇದ್ದಾರೆ. ಇಂದು ಐಸಿಯುನಲ್ಲೇ ಚಿಕಿತ್ಸೆ ಮುಂದುವರಿಯಲಿದೆ, ಚೇತರಿಕೆ ಕಂಡಮೇಲೆ ನಾಳೆ ಅಥವಾ ನಾಡಿದ್ದು ವಾರ್ಡ್ಗೆ ಶಿಫ್ಟ್ ಮಾಡಲಾಗುತ್ತದೆ ಎಂದಿದ್ದರು.
ಆದರೆ ಈ ಮಧ್ಯೆ ಚೈತ್ರಾಳನ್ನು ಇಂದು ರಾತ್ರಿ ಜಯದೇವ ಹೃದ್ರೋಗ ಆಸ್ಪತ್ರೆಗೆ ಸ್ಥಳಾಂತರಿಸುವ ಸಾಧ್ಯತೆ ಇದೆ ಎಂಬ ಮಾಹಿತಿ ಹೊರಬಿದ್ದಿದೆ. ಎದೆನೋವು ಉಂಟಾಗಿರುವ ಹಿನ್ನೆಲೆಯಲ್ಲಿ ಜಯದೇವ ಆಸ್ಪತ್ರೆಗೆ ಸ್ಥಳಾಂತರ ನಡೆಯಲಿದೆ ಎನ್ನಲಾಗಿದ್ದು, ಈ ಕುರಿತು ಹೆಚ್ಚಿನ ಹಾಗೂ ನಿಖರ ವಿವರ ಇನ್ನಷ್ಟೇ ತಿಳಿದುಬರಬೇಕಿದೆ.