ನ್ಯೂಸ್

ಸಾಮಾಜಿಕ ಜಾಲತಾಣಗಳಿಂದ ದೂರ ಉಳಿಯುತ್ತಾರಂತೆ ಯಜುವೇಂದ್ರ ಚಾಹಲ್​..!

ಬೆಂಗಳೂರು: ಕರೊನಾ ವೈರಸ್​ ಭೀತಿಯಿಂದಾಗಿ ಕ್ರಿಕೆಟ್​ ಚಟುವಟಿಕೆಗಳಿಂದ ದೂರ ಉಳಿದಿರುವ ಭಾರತೀಯ ಕ್ರಿಕೆಟಿಗರ ಪಾಲಿಗೆ ಸಾಮಾಜಿಕ ಜಾಲತಾಣವೇ ಪ್ರಮುಖ ಅಸ್ತ್ರವಾಗಿದೆ. ಅದರಲ್ಲೂ ಯಜುವೇಂದ್ರ ಚಾಹಲ್​ ಮಾತ್ರ ಸೋಷಿಯಲ್​ ಮಿಡಿಯಾ ಬಳಕೆಯಲ್ಲಿ ಎಲ್ಲರಿಗಿಂತಲೂ ಒಂದು ಕೈ ಮೇಲು. ಕುಟುಂಬ ಸದಸ್ಯರನ್ನು ಚಾಹಲ್​ ಇನ್​ಸ್ಟಾಗ್ರಾಂಗಾಗಿ ಬಳಸಿಕೊಂಡಿದ್ದು ಉಂಟು. ಡ್ಯಾನ್ಸ್​ ಮಾಡುವುದು, ಹಳೇ ವಿಡಿಯೋ ಪ್ರಕಟಿಸುವುದು, ಸಹ ಆಟಗಾರರೊಂದಿಗೆ ಲೈವ್​ ಚಾಟ್​ಗಳಲ್ಲಿ ಭಾಗವಹಿಸುವುದೇ ಚಾಹಲ್​ ದೈನಂದಿನ ಕೆಲಸವಾಗಿದೆ. ಕ್ರಿಕೆಟ್​ ಚಟುವಟಿಕೆ ಪುನರಾರಂಭಗೊಂಡರೆ ಸಾಮಾಜಿಕ ಜಾಲತಾಣಗಳಿಂದ ದೂರು ಉಳಿಯುವುದಾಗಿ ಹೇಳಿಕೊಂಡಿದ್ದಾರೆ.

ಭಾರತದಲ್ಲಿ ಟಿಕ್​-ಟಾಕ್​ಗೆ ನಿಷೇಧ ಹೇರುವುದಕ್ಕೂ ಮೊದಲು ಸಕ್ರಿಯವಾಗಿ ಬಳಕೆ ಮಾಡುತ್ತಿದ್ದ ಚಾಹಲ್​, ತಂದೆ-ತಾಯಿ ಜತೆಗೂಡಿ ಹಲವು ಹಾಡು-ಡೈಲಾಗ್​ಗಳಿಗೆ ವಿಡಿಯೋ ಮಾಡುತ್ತಿದ್ದರು. ನಾನು ಕೇವಲ ತಮಾಷೆಗಾಗಿ ಟಿಕ್​ ಟಾಕ್​ ಬಳಸುತ್ತಿದ್ದೆ, ಇದಕ್ಕೆ ಲಾಕ್​ಡೌನ್​ ಸಮಯ ನೀಡಿತು. ಇದನ್ನು ಬಿಟ್ಟರೆ ಬೇರೆ ಏನು ಮಾಡಲು ಇರಲಿಲ್ಲ. ಹಲವು ವರ್ಷಗಳ ಬಳಿಕ ಕುಟುಂಬ ಸದಸ್ಯರೊಂದಿಗೆ ಕಾಲಕಳೆದೆ. ಕುಟುಂಬದೊಂದಿಗೆ ಇಂಥ ಸಮಯ ಕಳೆದು 14-15 ವರ್ಷಗಳೇ ಕಳೆದಿತ್ತು. ಇದಕ್ಕೆ ಸೋಷಿಯಲ್​ ಮಿಡಿಯಾ ಒಂದು ವೇದಿಕೆಯಾಗಿ ಸಿಕ್ಕಿತು. ಈ ವೇಳೆ ಸಾಕಷ್ಟು ಎಂಜಾಯ್​ ಮಾಡಿದೆ. ಕ್ರಿಕೆಟ್​ ಚಟುವಟಿಕೆ ಆರಂಭಗೊಂಡರೆ ಸಾಮಾಜಿಕ ಜಾಲತಾಣಗಳಿಂದ ದೂರ ಉಳಿಯುತ್ತೇನೆ ಎಂದು ಯಜುವೇಂದ್ರ ಚಾಹಲ್​ ತಿಳಿಸಿದ್ದಾರೆ.

ಲಾ ಲೀಗಾದಲ್ಲಿ ರಿಯಲ್​ ಮ್ಯಾಡ್ರಿಡ್​ ಜಯ ದಾಖಲಿಸಿದಕ್ಕಾಗಿ ಸಂಭ್ರಮಿಸಿದ್ದ ರೋಹಿತ್​ ಶರ್ಮ ಅವರನ್ನು ಚಾಹಲ್​ ಟ್ರೋಲ್​ ಮಾಡಿದ್ದರು. ಇದಕ್ಕೂ ಎರಡು ದಿನ ಮುಂಚೆ ನನ್ನ ಬಿಗ್​ ಬ್ರದರ್​ ಎಂದು ರೋಹಿತ್​ ಶರ್ಮ ಫೋಟೋ ಪ್ರಕಟಿಸಿದ್ದರು. ಕಳೆದ ಮಾರ್ಚ್​ ತಿಂಗಳಿಂದಲೂ ಚಾಹಲ್​ ಸೇರಿದಂತೆ ಟೀಮ್​ ಇಂಡಿಯಾ ಲಾಕ್​ಡೌನ್​ನಿಂದಾಗಿ ಕ್ರಿಕೆಟ್​ ಚಟುವಟಿಕೆಯಿಂದ ದೂರ ಉಳಿದಿದೆ. ಆರ್​ಸಿಬಿ ತಂಡದ ಪ್ರಮುಖ ಸ್ಪಿನ್ನರ್​ ಆಗಿದ್ದಾರೆ. ಇದೀಗ ಬಿಸಿಸಿಐ ಇಡೀ ಐಪಿಎಲ್​ ಟೂನಿರ್ಯನ್ನು ಯುಎಇಗೆ ಸ್ಥಳಾಂತರಿಸುವ ಸಾಧ್ಯತೆಗಳಿವೆ.