ಬೆಂಗಳೂರು ವೈದ್ಯಕೀಯ, ದಂತ ವೈದ್ಯಕೀಯ, ಆಯುಷ್, ಇಂಜಿನಿಯರಿಂಗ್ ಸೇರಿ ಎಲ್ಲ ವೃತ್ತಿಪರ ಕೋರ್ಸ್ ಗಳ ಪ್ರವೇಶಕ್ಕೆ ಸಂಬಂಧಿಸಿದಂತೆ ಮೊದಲ ಸುತ್ತಿನ ಅಣಕು ಸೀಟು ಹಂಚಿಕೆ ಫಲಿತಾಂಶವನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಭಾನುವಾರ ಸಂಜೆ ಪ್ರಕಟಿಸಿದೆ.
ಕೆಇಎ ವೆಬ್ಸೈಟ್‌ನಲ್ಲಿ ಅಣಕು ಫಲಿತಾಂಶ ಲಭ್ಯವಿದ್ದು, ಅದನ್ನು ನೋಡಿದ ನಂತರ ಅಗತ್ಯ ಇದ್ದರೆ ಆ.27ರ ಬೆಳಿಗ್ಗೆ 11ರವರೆಗೆ ಅಭ್ಯರ್ಥಿಗಳು ತಮ್ಮ ಇಚ್ಚೆಯನುಸಾರ ಕಾಲೇಜು/ಕೋರ್ಸ್‌ಗಳನ್ನು ಬದಲಿಸಿಕೊಳ್ಳಬಹುದು ಎಂದು ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಎಚ್. ಪ್ರಸನ್ನ ತಿಳಿಸಿದ್ದಾರೆ.
ನಿಗದಿಯಂತೆ ಮೊದಲ ಸುತ್ತಿನ ನೈಜ ಸೀಟು ಹಂಚಿಕೆ ಫಲಿತಾಂಶವನ್ನು ಸೆ.1ರಂದು ಪ್ರಕಟಿಸಲಾಗುವುದು. ಆ.22ರ ಸಂಜೆ 5ಗಂಟೆವರೆಗೆ ಆದ್ಯತಾ ಕ್ರಮದಲ್ಲಿ ದಾಖಲಿಸಿರುವ ಇಚ್ಛೆ/ಆಯ್ಕೆಗಳನ್ನು ಪರಿಗಣಿಸಿ, ಮೆರಿಟ್ ಮತ್ತು ರೋಸ್ಟರ್ ಪದ್ಧತಿ ಅನುಸಾರ ಅಣಕು ಸೀಟು ಹಂಚಿಕೆಯನ್ನು ಮಾಡಲಾಗಿದೆ ಎಂದು ಅವರು ವಿವರಿಸಿದ್ದಾರೆ.
ಆರ್ಕಿಟೆಕ್ಚರ್, ಯೋಗ ಮತ್ತು ನ್ಯಾಚುರೋಪತಿ, ಕೃಷಿ ವಿಜ್ಞಾನ, ಪಶುವೈದ್ಯಕೀಯ, ಬಿಎಸ್‌ಸಿ (ನರ್ಸಿಂಗ್), ಬಿ-ಫಾರ್ಮ, ಫಾರ್ಮ-ಡಿ ಇತ್ಯಾದಿ ಕೋರ್ಸುಗಳ ಸೀಟು ಹಂಚಿಕೆಯನ್ನು ಮಾಡಲಾಗಿದೆ.
ಇಲ್ಲಿಯವರೆಗೆ ಇಚ್ಚೆ / ಆಯ್ಕೆಗಳನ್ನು ದಾಖಲಿಸದೇ ಇರುವ ಅರ್ಹ ಅಭ್ಯರ್ಥಿಗಳು ಇಷ್ಟವಿದ್ದಲ್ಲಿ ಆ.27ರ ಬೆಳಿಗ್ಗೆ 11ರೊಳಗೆ ಮೊದಲನೆ ಸುತ್ತಿನ ಸೀಟು ಹಂಚಿಕೆಗೆ ಕಾಲೇಜು ಮತ್ತು ಕೋರ್ಸುಗಳ ಆಯ್ಕೆಗಾಗಿ ಆದ್ಯತಾ ಕ್ರಮದಲ್ಲಿ ದಾಖಲಿಸಬಹುದು ಎಂದರು.
ಅಭ್ಯರ್ಥಿಗಳು ಕೇಳಬಹುದಾದ ಪುನರಾವರ್ತಿತ ಪ್ರಶ್ನೆಗಳನ್ನು ಕ್ರೋಢೀಕರಿಸಿ ಪ್ರಾಧಿಕಾರದ ವೆಬ್‌ಸೈಟಿನಲ್ಲಿ ಉತ್ತರಗಳನ್ನು ಪ್ರಕಟಿಸಿದ್ದು, ಅಭ್ಯರ್ಥಿಗಳು ಅದನ್ನು ಓದಿಕೊಳ್ಳಬಹುದಾಗಿದೆ. ಹೆಚ್ಚಿನ ವಿವರಗಳಿಗಾಗಿ ಅಭ್ಯರ್ಥಿಗಳು ಪ್ರಾಧಿಕಾರದ ವೆಬ್‌ಸೈಟ್ ಠಿಠಿ://ಛಿ.ಚ್ಟ.್ಞಜ್ಚಿ.ಜ್ಞಿ ಭೇಟಿ ನೀಡಬಹುದಾಗಿದೆ.