ನ್ಯೂಸ್

ಸಿಇಟಿ ಅರ್ಜಿಸಲ್ಲಿಕೆ ಆರಂಭ: ಈ ಬಾರಿ ಹೇಗೆ ಅರ್ಜಿಸಲ್ಲಿಸಬೇಕು? ಇಲ್ಲಿ ಕ್ಲಿಕ್ ಮಾಡಿ

ಬೆಂಗಳೂರು: ಇಂಜಿನಿಯರಿಂಗ್ ಸೇರಿ ವಿವಿಧ ವೃತ್ತಿಪರ ಕೋರ್ಸ್‌ಗಳ ಪ್ರವೇಶಕ್ಕಾಗಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಏ.16ರಿಂದ 18ರವರೆಗೆ ನಡೆಸಲಿರುವ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ)-25ಕ್ಕೆ ಇಂದಿನಿಂದ (ಜ.23) ಅರ್ಜಿ ಸಲ್ಲಿಕೆ ಆರಂಭವಾಗಲಿದೆ.

ಅಭ್ಯರ್ಥಿಗಳ ಲಾಗಿನ್ ಮಾಡುವ ವೇಳೆ ನಮೂದಿಸುವ ಮೊಬೈಲ್ ಸಂಖ್ಯೆಗೆ ಒಟಿಪಿ ಕಳುಹಿಸಿ ಪ್ರಮಾಣೀಕರಿಸಿದ ನಂತರ ಅರ್ಜಿ ಭರ್ತಿಗೆ ಅವಕಾಶ ನೀಡಲಾಗುತ್ತದೆ. ಆದ್ದರಿಂದ ಅಭ್ಯರ್ಥಿಗಳು ಅವರದೇ ಮೊಬೈಲ್ ಸಂಖ್ಯೆಯನ್ನು ನೀಡಬೇಕು. ಒಂದು ವೇಳೆ ಮೊಬೈಲ್ ಸಂಖ್ಯೆಯನ್ನು ಒಬ್ಬ ವಿದ್ಯಾರ್ಥಿ ಮಾತ್ರ ಉಪಯೋಗಿಸಬಹುದು. ಮೊಬೈಲ್ ಸಂಖ್ಯೆಯನ್ನು ಪ್ರಕ್ರಿಯೆ ಮುಗಿಯುವ ತನಕ ಯಾವುದೇ ಹಂತದಲ್ಲಿ ಬದಲಾವಣೆಗೆ ಅವಕಾಶ ಇರುವುದಿಲ್ಲ ಎಂದು ಕೆಇಎ ತಿಳಿಸಿದೆ.

ಆನ್‌ಲೈನ್ ಅರ್ಜಿಯಲ್ಲಿ ಅಭ್ಯರ್ಥಿಯು ನಮೂದಿಸುವ ಜಾತಿ, ಜಾತಿ/ಆದಾಯ ಪ್ರಮಾಣ ಪತ್ರ ಮತ್ತು 371ಜೆ ಆರ್‌ಡಿ ಸಂಖ್ಯೆಯ ಆಧಾರದ ಮೇಲೆ ಅಭ್ಯರ್ಥಿಗಳ ಮೀಸಲಾತಿ ವಿವರಗಳನ್ನು ಪಡೆಯಲಾಗುತ್ತದೆ.

ಸ್ಯಾಟ್ಸ್ ಸಂಖ್ಯೆಯ ಆಧಾರದ ಮೇಲೆ ಅಭ್ಯರ್ಥಿಯ ವ್ಯಾಸಂಗದ ವಿವರಗಳನ್ನು ವೆಬ್ ಸರ್ವೀಸ್ ಮೂಲಕವೇ ಪಡೆಯಲಾಗುತ್ತದೆ. ಸಿಇಟಿ ಪ್ರತಿ ಹಂತದ ಪ್ರಕ್ರಿಯೆ ಕುರಿತು ಅಭ್ಯರ್ಥಿಯ ಮೊಬೈಲ್ ಸಂದೇಶ ಸ್ವೀಕೃತವಾಗುತ್ತದೆ. ಹಾಗೆಯೇ ಭರ್ತಿ ಮಾಡಿದ ಅರ್ಜಿಗಳನ್ನು ಪರಿಶೀಲಿಸಲು ಎಲ್ಲ ಪಿಯು ಕಾಲೇಜುಗಳಿಗೆ ಲಾಗಿನ್ ನೀಡಲಾಗಿದೆ. ಈ ಬಾರಿಯಿಂದ ದಾಖಲೆ ಪರಿಶೀಲನೆಗೆ ಅಭ್ಯರ್ಥಿಗಳು ಬಿಇಒ ಕಚೇರಿಗಳಿಗೆ ಹೋಗುವ ಅವಶ್ಯಕತೆ ಇರುವುದಿಲ್ಲ. ದಾಖಲೆಗಳನ್ನು ಕೂಡ ಅಪ್‌ಲೋಡ್ ಮಾಡುವಂತಿಲ್ಲ.

ಸಿಇಟಿ ಜತೆಗೆ ಕೆಇಎ ಮೂಲಕವೇ ಸೀಟು ಹಂಚಿಕೆಯಾಗುವ ವೈದ್ಯಕೀಯ, ದಂತ ವೈದ್ಯಕೀಯ, ಆಯುಷ್ ಪ್ರವೇಶಾತಿಗೂ ಸಿಇಟಿ-2025ಕ್ಕೆ ಆನ್‌ಲೈನ್ ಮೂಲಕ ನೋಂದಣಿ ಮಾಡಿಕೊಂಡು ಅರ್ಜಿ ಸಲ್ಲಿಸಿ, ಶುಲ್ಕ ಪಾವತಿಸಬೇಕು.

ಕಳೆದ ಬಾರಿ 3.49 ಲಕ್ಷ ವಿದ್ಯಾರ್ಥಿಗಳು ಸಿಇಟಿಗೆ ನೋಂದಣಿ ಮಾಡಿಕೊಂಡಿದ್ದರು.